More

    ಸಿಟಿ ಬಸ್‌ಗೆ ಜಿಪಿಎಸ್ ಕಡ್ಡಾಯ, ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದು- ಜಿಲ್ಲಾಧಿಕಾರಿ ಎಚ್ಚರಿಕೆ

    ಮಂಗಳೂರು: ಮಂಗಳೂರು ನಗರದ ಸಿಟಿ ಬಸ್‌ಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ. ಮುಂದಿನ 15 ದಿನಗಳೊಳಗೆ ಎಲ್ಲ ಬಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು. ನಿಯಮ ಪಾಲಿಸದಿದ್ದರೆ ಅಂಥ ಬಸ್‌ಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಖಡಕ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ಅನೇಕ ಬಾರಿ ಸೂಚನೆ ನೀಡಲಾಗಿದೆ ಎಂದು ಹೇಳಿದರು.
    ನಗರದಲ್ಲಿ ಒಟ್ಟು 320 ಬಸ್‌ಗಳಿದ್ದು, ಸುಮಾರು 70ರಷ್ಟು ಬಸ್‌ಗಳಲ್ಲಿ ಮಾತ್ರ ಜಿಪಿಎಸ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇನ್ನು 15 ದಿನಗಳ ಗಡುವು ಮಾತ್ರ ನೀಡಲಾಗುವುದು. ನಿಯಮ ಮೀರಿದರೆ ಶಾಶ್ವತವಾಗಿ ಬಸ್ ಪರವಾನಗಿ ರದ್ದುಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

    ಮಂಗಳೂರು ಆರ್‌ಟಿಒ ಆರ್.ಎಂ.ವರ್ಣೇಕರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಸಂಚಾರಿ ಪೊಲೀಸ್ ಎಸಿಪಿ ನಟರಾಜ್ ಉಪಸ್ಥಿತರಿದ್ದರು.

    ಮಂಗಳೂರಲ್ಲಿ ರಿಕ್ಷಾ ಪಾರ್ಕ್ ಸಮಸ್ಯೆ: ಮಂಗಳೂರು ನಗರದಲ್ಲಿ ಆಟೋರಿಕ್ಷಾಗಳ ವಿವಿಧ ಸಮಸ್ಯೆಗಳ ಬಗ್ಗೆ ಆಟೋರಿಕ್ಷಾ ಚಾಲಕ -ಮಾಲೀಕರ ಒಕ್ಕೂಟದವರು ಗಮನ ಸೆಳೆದರು. ನಗರದಲ್ಲಿ ಸುಮಾರು 6900 ಆಟೋ ರಿಕ್ಷಾಗಳಿವೆ. ಈ ಹಿಂದೆ 250ಕ್ಕೂ ಅಧಿಕ ರಿಕ್ಷಾ ಪಾರ್ಕ್ ಇತ್ತು. ಈಗ ನಗರದ ಅನೇಕ ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲಸ ನಡೆಯುತ್ತಿದೆ. ಹಲವು ರಿಕ್ಷಾ ಪಾರ್ಕ್‌ಗಳನ್ನು ತೆರವುಗೊಳಿಸಿದ ಕಾರಣ ಆಟೋ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ರಿಕ್ಷಾ ಪಾರ್ಕ್‌ಗಳ ಅಭಿವೃದ್ಧಿ ಹಾಗೂ ಬೇಡಿಕೆ ಇರುವ ರಿಕ್ಷಾ ಪಾರ್ಕ್‌ಗಳ ನೋಂದಣಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್ ಸಿಟಿ ಸಲಹಾ ಸಭೆಗೆ ಆಟೋ ರಿಕ್ಷಾಗಳ ಪ್ರಮುಖರನ್ನು ಕರೆದು ಸಲಹೆ ಸೂಚನೆ ಪಡೆಯಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ಹಲವು ಕಡೆ ಪರಿಶೀಲನೆ ನಡೆಸಲಾಗಿದ್ದು, 210 ರಿಕ್ಷಾ ಪಾರ್ಕ್‌ಗಳನ್ನು ಗುರುತಿಸಲಾಗಿದೆ. ಬೇಡಿಕೆಗಳನ್ನು ಗಮನದಲ್ಲಿರಿಸಿ ಮುಂದಿನ ಹಂತದ ಪರಿಶೀಲನೆ ಬಳಿಕ ಸಮಗ್ರ ವರದಿ ನೀಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

    ಪ್ರತ್ಯೇಕ ಸಭೆ ನಡೆಸಲು ಸೂಚನೆ: ಆಟೋ ರಿಕ್ಷಾ ಪರವಾನಗಿ ನವೀಕರಣ, ಹೊಸ ರಿಕ್ಷಾ ಖರೀದಿಗೆ ಪರವಾನಗಿ ಸಹಿತ ಆಟೋ ಚಾಲಕರ ಸಮಸ್ಯೆಗಳ ಇತ್ಯರ್ಥ ಕುರಿತು ಸದ್ಯದಲ್ಲೇ ಸಾರಿಗೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪ್ರತ್ಯೇಕ ಸಭೆ ನಡೆಸಬೇಕು. ಸಭೆಯಲ್ಲಿ ಬರುವ ಸಲಹೆಗಳನ್ನು ಮುಂದಿನ ಸಾರಿಗೆ ಪ್ರಾಧಿಕಾರದ ಸಭೆಗೆ ಮಂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts