More

    ಜನರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದನೆ

    ಧಾರವಾಡ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದನ್ವಯ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸೋಮವಾರ ಜಿಲ್ಲೆಯ 7 ಗ್ರಾಮಗಳಿಗೆ ಭೇಟಿ ನೀಡಿತು. ಆಯಾ ಗ್ರಾಮಗಳಲ್ಲಿ ಪಿಂಚಣಿ, ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರು. ಕೆಲ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು.

    ನಿಗದಿ, ಹಳ್ಳಿಗೇರಿ, ಮುರಕಟ್ಟಿ, ದೇವಗಿರಿ, ದಡ್ಡಿ ಕಮಲಾಪುರ, ಮುಗದ, ಕಲಕೇರಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಇದೊಂದು ಹೊಸ ಪ್ರಯತ್ನ. ಗ್ರಾಮಗಳ ಜನರ ಬಳಿಗೇ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರೆದೊಯ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಕಂದಾಯ ಗ್ರಾಮಗಳಿಗೆ ಭೇಟಿ ನೀಡುವ ಗುರಿ ಇದೆ. ಪ್ರತಿ ವಾರದ ಒಂದು ದಿನ ಒಂದು ತಾಲೂಕಿನ ಕನಿಷ್ಠ 5ರಿಂದ 7 ಹಳ್ಳಿಗಳಿಗೆ ತೆರಳಿ ಅಲ್ಲಿ, ಪಿಂಚಣಿ ಮತ್ತು ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುವುದು ಎಂದರು.

    ನಿಗದಿ ಗ್ರಾಮದ ನಿವೇಶನ ಹಾಗೂ ವಸತಿ ರಹಿತರ, ಗ್ರಾ.ಪಂ. ಅಧೀನದ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡಿರುವವರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಆಲಿಸಿದರು. ಒಂದು ತಿಂಗಳಲ್ಲಿ ಗ್ರಾಮದ ಮರುಸಮೀಕ್ಷೆ ಮಾಡಿಸಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಪಟ್ಟಿ ತಯಾರಿಸುವಂತೆ ಪಿಡಿಒಗೆ ಸೂಚಿಸಿದರು. ಅನಧಿಕೃತವಾಗಿ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳ ಸಮೀಕ್ಷೆ ಮಾಡಿಸಿ ವರದಿ ನೀಡುವಂತೆ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

    ಅಟಲ್​ಜಿ ಕೇಂದ್ರ ಸ್ಥಾಪನೆ, ಪ್ರತ್ಯೇಕ ಹೋಬಳಿ ರಚಿಸುವ, ತೋಟದ ಹಾಗೂ ಜಮೀನು ರಸ್ತೆ ಗುರುತಿಸುವ, ಕುಡಿಯುವ ನೀರಿನ ಸೌಲಭ್ಯ, ಸ್ಮಶಾನ ಭೂಮಿ ಮಂಜೂರು, ಪಿಂಚಣಿ, ಪೋಡಿ, ವಾರಸಾ ಸೇರಿದಂತೆ ವಿವಿಧ ಅಹವಾಲುಗಳು ಸಲ್ಲಿಕೆಯಾದವು. ಜನರ ಸಮಸ್ಯೆಗಳ ಕುರಿತು ತುರ್ತಾಗಿ ಸ್ಪಂದಿಸಿ ಇತ್ಯರ್ಥಪಡಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

    ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ತಹಸೀಲ್ದಾರ್ ಸಂತೋಷ ಬಿರಾದಾರ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಎ.ಪಿ., ಸಹಾಯಕ ನಿರ್ದೇಶಕಿ ತನ್ವೀರ್ ಡಾಂಗೆ, ತಾ.ಪಂ. ಯೋಜನಾ ನಿರ್ದೇಶಕ ಗಿರೀಶ ಕೋರಿ, ಆಯಾ ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷರು, ಮುಖಂಡರು, ವಿವಿಧ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.

    ಗ್ರಾಮವಾರು ಅರ್ಜಿ ವಿಲೇವಾರಿ ವಿವರ

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನಿಗದಿ ಗ್ರಾಮದಲ್ಲಿ 21 ಅರ್ಜಿ ಸ್ವೀಕರಿಸಿ 15 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು. ಕಂದಾಯ ಇಲಾಖೆಯ ವಿವಿಧ ಯೋಜನೆಗಳ 12 ಫಲಾನುಭವಿಗಳಿಗೆ ಆದೇಶ ಪ್ರಮಾಣಪತ್ರ ವಿತರಿಸಲಾಯಿತು. ಹಳ್ಳಿಗೇರಿ ಗ್ರಾಮದಲ್ಲಿ 10 ಅರ್ಜಿ ಸ್ವೀಕರಿಸಿ 3 ಅರ್ಜಿ ಇತ್ಯರ್ಥ, ಮುರಕಟ್ಟಿಯಲ್ಲಿ 18 ಅರ್ಜಿ, 6 ಇತ್ಯರ್ಥ, ದೇವಗಿರಿಯಲ್ಲಿ 14ರಲ್ಲಿ 8 ಇತ್ಯರ್ಥಗೊಳಿಸಲಾಯಿತು. ಕಲಕೇರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕಲಕೇರಿ-ಹುಣಸಿಕುಮರಿ ರಸ್ತೆ ಪರಿಶೀಲನೆ ನಡೆಸಿ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು. ಮುಗದ ಗ್ರಾಮದಲ್ಲಿ 20 ಅರ್ಜಿ, 15 ಅರ್ಜಿಗಳನ್ನು ಇತ್ಯರ್ಥಗೊಳಿಸಿದರು. ದಡ್ಡಿಕಮಲಾಪುರ ಗ್ರಾಮದಲ್ಲಿ 10 ಅರ್ಜಿ ಸ್ವೀಕರಿಸಿದರು. ದಡ್ಡಿಕಮಲಾಪುರ ಹಾಗೂ ನಾಗಲಾವಿ ಗ್ರಾಮಗಳಿಗೆ ತುರ್ತಾಗಿ ತಲಾ 1 ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಲು ಸೂಚಿಸಿದರು.

    ಕೃಷಿ, ಕಂದಾಯ, ತೋಟಗಾರಿಕೆ, ಭೂ ದಾಖಲೆ ಹಾಗೂ ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಯತ್ನಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಹಾಗೂ ಇತರ ಇಲಾಖೆಗಳ ಅಭಿಪ್ರಾಯ ಹಾಗೂ ಪಾಲ್ಗೊಳ್ಳುವಿಕೆ ಮೂಲಕ ಬಗೆಹರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲಾಗುವುದು.
    | ನಿತೇಶ ಪಾಟೀಲ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts