More

    ಕರೊನಾ ಆತಂಕ ಜಿಲ್ಲಾಡಳಿತ ಚುರುಕು

    ಮಂಗಳೂರು: ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ದುಬೈಯಿಂದ ಬಂದಿಳಿದ ಪ್ರಯಾಣಿಕನನ್ನು ನಿಭಾಯಿಸಿದ ರೀತಿಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಿಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಚುರುಕುಗೊಂಡಿದೆ. ಮೈಸೂರು ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಪುಷ್ಪಲತಾ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕರೊನಾ ಸೋಂಕು ಆತಂಕ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ವಿಮಾನ ನಿಲ್ದಾಣದಲ್ಲಿ 437 ಹಾಗೂ ಪಣಂಬೂರು ನವಮಂಗಳೂರು ಬಂದರಿನಲ್ಲಿ 45 ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ತಪಾಸಣೆಗೆ ಒಳಗಾದವರಲ್ಲಿ ಕರೊನಾ ಸೋಂಕು ಲಕ್ಷಣ ಕಂಡುಬಂದಿಲ್ಲ ಎಂದು ವೈದ್ಯಾಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ಮಾಡಿದೆ.

    ಕುವೈತ್ ಹಾಗೂ ಕತಾರ್ ದೇಶಗಳು ಭಾರತದ ಪ್ರಯಾಣಿಕರಿಗೆ ನಿರ್ಬಂಧಿ ವಿಧಿಸಿರುವ ಹಿನ್ನೆಲೆಯಲ್ಲಿ ಸಂಪರ್ಕ ವಿಮಾನಗಳ ಮೂಲಕ ಇತರ ದೇಶಗಳಿಂದ ಮಂಗಳೂರಿನಲ್ಲಿ ಬಂದಿಳಿದ ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ.

    ಕೇಂದ್ರ ಸರ್ಕಾರ ಈ ಮಾಸಾಂತ್ಯದ ತನಕ ಇತರ ದೇಶಗಳ ಪ್ರವಾಸಿ ಹಡಗುಗಳು ಭಾರತದ ಬಂದರುಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ, ಸರಕು ಹಡಗುಗಳಿಗೆ ಈ ನಿರ್ಬಂಧವಿಲ್ಲ. ಸರಕು ಹಡಗುಗಳ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನು ಬಂದರು ಆರೋಗ್ಯ ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳ ತಂಡ ನಿರ್ವಹಿಸುತ್ತಿದೆ.

    ಫೆಬ್ರವರಿ 1ರಿಂದ ಇದುವರೆಗೆ ಮಂಗಳೂರು ವಿಮಾನ ನಿಲ್ದಾಣಧಲ್ಲಿ ಒಟ್ಟು 25,351 ಪ್ರಯಾಣಿಕರನ್ನು ಮತ್ತು ಕಳೆದ ಜನವರಿ 23ರಿಂದ ಇಲ್ಲಿವರೆಗೆ ಎನ್‌ಎಂಪಿಟಿಯಲ್ಲಿ ಒಟ್ಟು 5,358 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್- 19 ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಜಿಲ್ಲಾಡಳಿತ ತಿಳಿಸಿದೆ.

    ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಗಂಟಲು ನೋವು ಕಂಡುಬಂದಲ್ಲಿ ಕೂಡಲೇ ಟೋಲ್ ಫ್ರೀಂ ಸಂಖ್ಯೆಯನ್ನು ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ರೋಗಿಯ ಎಲ್ಲ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಆರೋಗ್ಯ ಇಲಾಖೆ ಭರವಸೆ ನೀಡಿದೆ.

    ಉಚಿತ ಕರೆ ಸಂಖ್ಯೆ: 104, 1077, 0824- 2442590
     ನಿರ್ಬಂಧ ಮುಂದುವರಿಕೆ: ಏಷ್ಯಾದ ಮಧ್ಯಪ್ರಾಚ್ಯ ರಾಷ್ಟ್ರಗಳು ಆರ್ಥಿಕ ಸಂಕಷ್ಟವನ್ನು ಲೆಕ್ಕಿಸದೆ ಕರೊನಾ ಬಾಧಿತ ದೇಶಗಳ ಸಂಪರ್ಕವನ್ನು ಕಡಿದುಕೊಳ್ಳಲು ಮುಂದಾಗಿವೆ. ಕುವೈತ್ ಬಳಿಕ ಈಗ ಕತಾರ್ ಮುಂಜಾಗರೂಕತಾ ಕ್ರಮವಾಗಿ ಸೋಮವಾರ ಭಾರತ ಸಹಿತ 14 ರಾಷ್ಟ್ರಗಳ ಜನರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.

    ಕೊಲ್ಲಿ ರಾಷ್ಟ್ರಗಳ ಸಂಪರ್ಕ ಕಡಿತದಿಂದ ಕರ್ನಾಟಕ ಕರಾವಳಿ ಭಾಗಕ್ಕೆ ತುಂಬಾ ನಷ್ಟವಾಗಿದೆ. ಗೋಡಂಬಿ, ತರಕಾರಿ ಮುಂತಾದ ವಸ್ತುಗಳು ಮಂಗಳೂರು ವಿಮಾನ ನಿಲ್ದಾಣ ಮೂಲಕ ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದವು ಎಂದು ಕೆನರಾ ಚೇಂಬರ್ ಅಧ್ಯಕ್ಷ ಐಸಾಕ್ ವಾಸ್ ತಿಳಿಸಿದ್ದಾರೆ.

    2 ದಿನದಲ್ಲಿ ಪ್ರಯೋಗಾಲಯದ ವರದಿ: ದುಬೈಯಿಂದ ವಿಮಾನದಲ್ಲಿ ಆಗಮಿಸಿದ ಜ್ವರ ಬಾಧಿತ ವ್ಯಕ್ತಿಯ ಗಂಟಲು ಸ್ರಾವದ ಸ್ಯಾಂಪಲ್‌ಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನಗಳಲ್ಲಿ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ವೆನ್ಲಾಕ್ ಆಸ್ಪತ್ರೆಯಿಂದ ತೆರಳಿದ ಕರೊನಾ ಶಂಕಿತ ಜ್ವರ ಬಾಧಿತ ಯುವಕ ವಿಟ್ಲದಲ್ಲಿರುವ ತನ್ನ ಪತ್ನಿಯ ಮನೆಯಲ್ಲಿರುವ ಸಂದರ್ಭ ಪತ್ತೆ ಹಚ್ಚಿ ಅವರ ಮನವೊಲಿಸಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿತ್ತು. ಪ್ರಸ್ತುತ ಯುವಕ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ.
    ಯಕ್ಷಗಾನದಲ್ಲೂ ಕರೊನಾ ಜಾಗೃತಿ!: ಉಡುಪಿ ಜಿಲ್ಲೆಯ ಕಾರ್ಕಳದ ಪಳ್ಳಿ ಗ್ರಾಮದಲ್ಲಿ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ‘ರಂಗನಾಯಕಿ’ ಯಕ್ಷಗಾನದಲ್ಲಿ ಹಾಸ್ಯ ಪಾತ್ರಧಾರಿ ಪ್ರಸನ್ನ ಶೆಟ್ಟಿ ಬೈಲೂರು ಮಾಸ್ಕ್ ಧರಿಸಿ ರಂಗಪ್ರವೇಶಿಸಿ ಗಮನ ಸೆಳೆದಿದ್ದಾರೆ. ಪ್ರಸನ್ನ ಶೆಟ್ಟಿ ಮತ್ತು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಒಳಗೊಂಡಿರುವ ಕಲಾವಿದರ ಬಳಗ ಯಕ್ಷಗಾನ ಕಲಾ ಮಾಧ್ಯಮದಲ್ಲೂ ಈ ಸಂದರ್ಭ ಕರೊನಾ ಜಾಗೃತಿಗೆ ಪ್ರಯತ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts