More

    ಜಿಲ್ಲೆಯಲ್ಲಿ 301 ಬೈಕ್ ಸೀಜ್!

    ಬೆಳಗಾವಿ: ಇಡೀ ಭಾರತ ಲಾಕ್‌ಡೌನ್ ಆಗಿದ್ದರೂ, ಜಿಲ್ಲೆಯಲ್ಲಿ ಪೊಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಖಾಕಿ ಬಿಸಿ ಮುಟ್ಟಿಸಿದೆ. ನಾಲ್ಕು ದಿನದಲ್ಲಿ ಬೆಳಗಾವಿ ಜಿಲ್ಲಾದ್ಯಂತ 301 ಬೈಕ್ ಸೀಜ್ ಮಾಡಿ, ಕೋರ್ಟ್ ನೋಟಿಸ್ ನೀಡಿದ್ದಾರೆ. ಕೋರ್ಟ್‌ಗಳು ಆರಂಭವಾದ ಬಳಿಕವೇ ಮಾಲೀಕರಿಗೆ ಬೈಕ್ ಸಿಗಲಿವೆ.

    41 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಇಂತಹ ಕಠಿಣ ಕ್ರಮ ಕೈಗೊಂಡರೂ ಸಾರ್ವಜನಿಕರು ರಸ್ತೆಗಿಳಿಯುತ್ತಿದ್ದಾರೆ. ತರಕಾರಿ, ದಿನಸಿ, ಹಾಲು, ಔಷಧ ಖರೀದಿಸಲು ಸಾರ್ವಜನಿಕರು ನಿಗದಿತ ವೇಳೆಯಲ್ಲಿ ಹೊರಬರಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಆದರೆ ಯುವಕರು, ವಿದ್ಯಾರ್ಥಿಗಳು ಸೇರಿ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಜತೆಗೆ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಿದ್ದಾರೆ.

    ಗೋಕಾಕದಲ್ಲಿ ಹೆಚ್ಚು: ಗೋಕಾಕ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಅತಿ ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಲಾಗಿದೆ. ಮೂಡಲಗಿ, ರಾಮದುರ್ಗ, ಹುಕ್ಕೇರಿ, ನಿಪ್ಪಾಣಿ ತಾಲೂಕಿನಲ್ಲಿ ಬೈಕ್ ಸೀಜ್ ಪ್ರಕರಣಗಳು ತಗ್ಗಿವೆ. ಗೋಕಾಕದಲ್ಲಿ 95, ಚಿಕ್ಕೋಡಿ 76, ಅಥಣಿ 46, ರಾಯಬಾಗ 37, ಬೈಲಹೊಂಗಲ ತಾಲೂಕಿನಲ್ಲಿ 36, ಕಿತ್ತೂರು 11 ಸೇರಿ ಒಟ್ಟು 301 ಬೈಕ್‌ಗಳನ್ನು ಸೀಜ್ ಮಾಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಮಹಾರಾಷ್ಟ್ರ, ಗೋವಾ ಗಡಿ ಭಾಗ ಸೇರಿ ಜಿಲ್ಲೆಯಲ್ಲಿ 84 ಚೆಕ್‌ಪೋಸ್ಟ್ ತೆರೆಯಲಾಗಿದೆ. ಅಂತರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

    41 ಎಫ್‌ಐಆರ್: ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ ಒಟ್ಟಾರೆ 41 ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಗೋಕಾಕದಲ್ಲಿ 14, ಕಿತ್ತೂರು-8, ಮೂಡಲಗಿ-9, ಚಿಕ್ಕೋಡಿ-1, ರಾಮದುರ್ಗ-2, ಹುಕ್ಕೇರಿ-6 ಹಾಗೂ ನಿಪ್ಪಾಣಿಯಲ್ಲಿ 1 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ತರಕಾರಿ ಸಾಗಣೆಗೆ ಅವಕಾಶ ಕೊಡಿ: ಗ್ರಾಮಗಳಿಂದ ತರಕಾರಿ ತರುವ ರೈತರ ವಾಹನಗಳಿಗೆ ಪೊಲೀಸರು ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ನಗರಕ್ಕೆ ತರುವುದೇ ದೊಡ್ಡ ಸವಾಲಾಗಿದೆ. ತರಕಾರಿ ವಾಹನಗಳಿಗೆ ಸ್ಥಳೀಯ ಮಟ್ಟದಲ್ಲೇ ವ್ಯವಸ್ಥಿತವಾಗಿ ಪಾಸ್ ಕಲ್ಪಿಸಬೇಕು ಎಂದು ವ್ಯಾಪಾರಸ್ಥರು ಹಾಗೂ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ದಿನಸಿ ಅಂಗಡಿಗಳಿಗೆ ವಿವಿಧ ಭಾಗಗಳಿಂದ ಅಗತ್ಯ ಸಾಮಗ್ರಿ ತರಿಸಲಾಗುತ್ತಿತ್ತು. ಆದರೆ, ಈಗ ಪೊಲೀಸರು ಎಲ್ಲ ಕಡೆ ಬ್ಯಾರಿಕೇಡ್ ಹಾಕಿ, ವಾಹನ ಸಾಗಣೆಗೆ ತಡೆ ಒಡ್ಡುತ್ತಿದ್ದಾರೆ. ಜಿಲ್ಲೆಯಿಂದ ಜಿಲ್ಲೆಗೆ ವಾಹನಗಳನ್ನು ಬಿಡುತ್ತಿಲ್ಲ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ದಿನಸಿ ವಸ್ತುಗಳ ಸಾಗಣೆಗೆ ಅವಕಾಶ ಕಲ್ಪಿಸಬೇಕು. ಕೂಡಲೇ ಪಾಸ್‌ಗಳನ್ನು ವಿತರಿಸಿ, ಜಿಲ್ಲೆಯಲ್ಲಿ ಕಿರಾಣಿ ವಸ್ತುಗಳಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯ ಕಿರಾಣಿ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

    ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಲಾಕ್‌ಡೌನ್ ಜಾರಿಗೆ ತಂದಿದ್ದೇವೆ. ನಿಯಮ ಉಲ್ಲಂಘನೆ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಿ, ಜನ ಸಂಚಾರಕ್ಕೆ ನಿಯಂತ್ರಣ ಹೇರಿದ್ದೇವೆ.
    | ಲಕ್ಷ್ಮಣ ನಿಂಬರಗಿ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts