More

    ರೈತರಿಗೆ ಬರ ಪರಿಹಾರ ವಿತರಣೆ

    ಹುಣಸೂರು: ಬರಪರಿಹಾರದ ಪ್ರಥಮ ಹಂತವಾಗಿ ತಾಲೂಕಿನ 4511 ರೈತರಿಗೆ 80 ಲಕ್ಷ ರೂ.ಗಳ ಬರಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ತಿಳಿಸಿದರು.

    ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕಿನಲ್ಲಿ ಬರಪರಿಸ್ಥಿತಿ ಕುರಿತು ರೈತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
    ಮುಂಗಾರು ಹಂಗಾಮಿನ ವೇಳೆ ರಾಜ್ಯ ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಕೈಗೊಂಡಿದ್ದ ಸಮೀಕ್ಷೆಯಲ್ಲಿ ತಾಲೂಕಿನ 4511 ರೈತರು 7130 ಹೆಕ್ಟೇರ್ ಭೂ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಮತ್ತು ಮುಸುಕಿನ ಜೋಳದ ಬೆಳೆಗಳ ವರದಿಯನ್ನು ನೀಡಲಾಗಿತ್ತು. ಅದರಂತೆ ಸರ್ಕಾರ ಮೊದಲಹಂತವಾಗಿ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿದ್ದು, ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಪಂ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಹಿಂಗಾರು ಬೆಳೆಯಾಗಿ ರೈತರು ಪ್ರಮುಖವಾಗಿ ರಾಗಿ ಬೆಳೆದಿದ್ದು, ಈ ಬೆಳೆಯನ್ನು ಬರಪರಿಹಾರ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆನ್ನುವ ಒತ್ತಾಯ ರೈತರಿಂದ ಬಂದಿದೆ. ಈ ಕುರಿತು ಈಗಾಗಲೇ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರದ ನಿರ್ಧಾರ ಇನ್ನೂ ಪ್ರಕಟಗೊಂಡಿಲ್ಲ ಎಂದು ಹೇಳಿದರು.

    17 ಗ್ರಾಮಗಳಲ್ಲಿನೀರಿಗೆ ಬರ: ಕಳೆದ 15 ದಿನಗಳ ಹಿಂದೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಿರಲಿಲ್ಲ. ಆದರ ಇದೀಗ ತಾಲೂಕಿನ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬಂದಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವತ್ತ ಕೂಡ ಗಮನಹರಿಸಲಾಗಿದೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು.

    ಅಲೆದಾಟ ತಪ್ಪಿಸಿ: ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆಗೆ ಆದೇಶಿಸಿದೆ. ಆದರೆ ತಾಲೂಕಿನಲ್ಲಿ ಪೂರೈಕೆ ಆಗುತ್ತಿಲ್ಲ. ಅದರಲ್ಲೂ ರಾತ್ರಿವೇಳೆ ವಿದ್ಯುತ್ ಪೂರೈಸುವುದು ಸರಿ ಲ್ಲ ಎಂದು ಬೇಸರ ತೋಡಿಕೊಂಡರು. ರೈತ ಮುಖಂಡರಾದ ವಿಷಕಂಠಪ್ಪ, ಮೂರ್ತಿ, ಮೋದೂರು ಮಹೇಶ್ ಇತರರು ವನ್ಯಜೀವಿಗಳಿಂದ ರೈತರ ಜೀವಹಾನಿ ತಪ್ಪಿಸಬೇಕು ಎಂದು ಆಗ್ರಹಿಸಿದರು.

    ಕಬ್ಬೆಕೊಪ್ಪಲು ಗ್ರಾಮದ ಕುಮಾರಬೋವಿ ಮಾತನಾಡಿ, ರೈತರ ಪಂಪ್‌ಸೆಟ್‌ಗೆ ಅಕ್ರಮ ಸಕ್ರಮ ಯೋಜನೆ ರದ್ದತಿ ಮತ್ತು ಟಿಸಿ ಅಳವಡಿಕೆಗೆ ಉಚಿತ ಮೂಲ ಸೌಕರ್ಯ ರದ್ದುಗೊಳಿಸಿರುವುದ ಖಂಡನೀಯ. ಸರ್ಕಾರ ಇವೆರೆಡನ್ನೂ ಹಿಂಪಡೆಯಬೇಕು. ಕೃಷಿ ಇಲಾಖೆ 7 ವರ್ಷಕ್ಕೊಮ್ಮೆ ಪೈಪ್‌ಗಳನ್ನು ವಿತರಿಸುವುದು ಸರಿಯಲ್ಲ. ಅಷ್ಟು ಉತ್ತಮ ಗುಣಮಟ್ಟದ ಪೈಪ್‌ಗಳನ್ನು ನೀಡುತ್ತಿಲ್ಲ. ಕನಿಷ್ಟ 3 ವರ್ಷಕ್ಕೊಮ್ಮೆಯಾದರೂ ವಿತರಿಸಲು ಕ್ರಮ ವಹಿಸಲಿ. ಕೆಬ್ಬೆಕೊಪ್ಪಲು ಗ್ರಾಮದ ತೂಬಿನಕೆರೆ ಒತ್ತುವರಿಯಾಗಿರುವುದ ಜತೆಗೆ ಮುಚ್ಚಿಹೋಗಿದ್ದು, ಕೆರೆ ಗುರುತಿಸಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.

    ಕಲ್ಲಹಳ್ಳಿಯ ವಿಷಕಂಠಪ್ಪ ಮಾತನಾಡಿ, ತಾಲೂಕು ಕಚೇರಿಗೆ ಒಂದು ಕೆಲಸಕ್ಕಾಗಿ ಪದೇಪದೆ ಅಲೆದಾಡಿಸುವ ಪ್ರವೃತ್ತಿಯನ್ನು ಅಧಿಕಾರಿಗಳು ನಿಲ್ಲಿಸಬೇಕು. ರಾಷ್ಟ್ರೀಯ ಹೆದ್ದಾರಿ 275ರ ಕಲ್ಲಹಳ್ಳಿ ಗ್ರಾಮ ವ್ಯಾಪ್ತಿಯ ಭೂಮಿಯ ಅನುಭೋಗದಾರರ ಸಮೀಕ್ಷೆಯನ್ನು ಅಧಿಕಾರಿಗಳು ಕೈಗೊಂಡು 2 ತಿಂಗಳುಗಳೇ ಸಂದರೂ ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಿಲ್ಲ ಏಕೆ ? ಎಂದು ಪ್ರಶ್ನಿಸಿದರು. ಸಾರ್ವಜನಿಕ ಬಳಕೆಗಾಗಿ ನಾವು ನಮ್ಮ ಭೂಮಿಯನ್ನು ನೀಡುತ್ತಿದ್ದೇವೆ. ಆದರೂ ಅಧಿಕಾರಿಗಳ ಈ ಅಸಡ್ಡೆ ಖಂಡನೀಯ ಎಂದು ಕಿಡಿಕಾರಿದರು.

    ರಾಯನಹಳ್ಳಿ ವೆಂಕಟೇಶ್ ಮಾತನಾಡಿ, ರಾಯನಹಳ್ಳಿ ಕೆರೆ ನೀರು ತುಂಬಿಸುವ ಕಾರ್ ಆಗಬೇಕು ಹಾಗೂ ಮರದೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆಂದು ನಿರ್ಮಿಸಿರುವ ನೀರಿನ ತೊಟ್ಟಿಯು ಕಳಪೆ ಗುಣಮಟ್ಟದ್ದಾಗಿದ್ದು, ನೀರು ಸೋರಿ ಪೋಲಾಗುತ್ತಿದೆ. ಕೂಡಲೇ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಮೋದೂರು ಮಹೇಶ್ ಮಾತನಾಡಿ, ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಕಾಯುತ್ತಿರುವ ರೈತರು ತಲೆಮಾರುಗಳಿಂದ ಗೋಮಾಳದಲ್ಲೂ ಕೃಷಿ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಇಂತಹ ಭೂಮಿಯನ್ನು ಸರ್ಕಾರ ಪರಿಗಣಿಸಿ ಸಾಗುವಳಿ ಪತ್ರ ನೀಡಬೇಕು. ಗೊಂದಲ ಸೃಷ್ಟಿಸಬಾರದು ಎಂದು ಒತ್ತಾಯಿಸಿದರು.

    ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಸಲಾಗುತ್ತಿದೆ. ತಾಲೂಕಿನಾದ್ಯಂತ 7 ಗಂಟೆಗಳ ವಿದ್ಯುತ್ ಪೂರೈಕೆ ನೀಡಲಾಗುತ್ತಿದೆ. ಟಿಸಿಗಳಲ್ಲಿ ಅಕ್ರಮ ಸಂಪರ್ಕವಿದ್ದಲ್ಲಿ ಓವರ್‌ಲೋಡ್ ಆಗಿ ಟಿಸಿ ಸುಟ್ಟುಹೋಗುತ್ತದೆ. ಹಾಗಾಗಿ ರೈತರು ಅಕ್ರಮ ಸಂಪರ್ಕಕ್ಕೆ ಕೈಹಾಕಬಾರದು ಎಂದು ಕೋರಿದರು.

    ತೋಟಗಾರಿಕೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಸಬ್ಸಿಡಿ ಘೋಷಿಸಿದೆ. 1.5 ಲಕ್ಷ ರೂ.ಗಳ ಸಬ್ಸಿಡಿ ಸಿಗಲಿದೆ. ಘಟಕ ಸ್ಥಾಪನೆಗೆ 3-4 ಲಕ್ಷ ರೂ.ಗಳು ವೆಚ್ಚವಾಗಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೋರಿದರು.

    ವಿಎಸ್ಸೆಸ್ಸೆನ್ ಮೂಲಕ ರಸಗೊಬ್ಬರ: ತಾಲೂಕಿನಲ್ಲಿ ಖಾಸಗಿ ರಸಗೊಬ್ಬರ ಮಾರಾಟಗಾರರು ದರಪಟ್ಟಿ ಪ್ರಕಟಿಸದೆ ತಮಗಿಷ್ಟ ಬಂದಂತೆ ರಸಗೊಬ್ಬರ ಮಾರುತ್ತಿದ್ದಾರೆ ಎಂಬ ರೈತರ ಆರೋಪಕ್ಕೆ ಉತ್ತರಿಸಿದ ತಹಸೀಲ್ದಾರ್ ಜೆ.ಮಂಜುನಾಥ್, ಪ್ರತಿಯೊಬ್ಬ ಮಾರಾಟಗಾರರೂ ಕಡ್ಡಾಯವಾಗಿ ದರಪಟ್ಟಿ ಪ್ರಕಟಿಸಿ ಮಾರಾಟ ಮಾಡಲು ಸೂಚಿಸಲಾಗುವುದು ಎಂದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಮಾತನಾಡಿ, ಮುಂದಿನ ಮುಂಗಾರು ವೇಳೆ ತಾಲೂಕಿನಾದ್ಯಂತ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ಯೂರಿಯಾ ಮತ್ತಿತರ ಕಾಂಪ್ಲೆಕ್ಸ್ ಗೊಬ್ಬರಗಳ ಮಾರಾಟಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ರೈತಮುಖಂಡರಾದ ಈಶ್ವರ, ನಿಂಗಮ್ಮ, ತಮ್ಮರಸು, ಸ್ವಾಮಿಗೌಡ, ಆರ್.ಮೂರ್ತಿ, ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ, ತಾಪಂ ಯೋಜನಾಧಿಕಾರಿ ರಾಜೇಶ್, ಜಿಪಂ ಕುಡಿಯುವ ನೀರು ವಿಭಾಗದ ಎಇಇ ಕಲೀಂ ಅಹಮದ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts