More

    ಸಾಹಿತಿಯ ಅಂತ್ಯಸಂಸ್ಕಾರಕ್ಕೆ ಅಡ್ಡಿ

    ರಾಣೆಬೆನ್ನೂರ: ಕರೊನಾ ಸೋಂಕಿನಿಂದ ಮೃತಪಟ್ಟ ಸಾಹಿತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಗರದ ಹೊರವಲಯದ ಮೇಡ್ಲೇರಿ ರಸ್ತೆಯಲ್ಲಿ ಗುರುವಾರ ನಡೆಯಿತು.

    ನಗರದ ಸಾಹಿತಿ ಹಾಗೂ ನಿವೃತ್ತ ಶಿಕ್ಷಕಿ ಗಿರಿಜಾದೇವಿ ದುರ್ಗದಮಠ (68) ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರವನ್ನು ನಗರದ ಹೊರವಲಯದ ಮೇಡ್ಲೇರಿ ರಸ್ತೆಯ ಅರಣ್ಯ ಪ್ರದೇಶದ ಜಾಗದಲ್ಲಿ ನೆರವೇರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು.

    ಗುರುವಾರ ಬೆಳಗ್ಗೆ ಆಂಬುಲೆನ್ಸ್​ನಲ್ಲಿ ಮೃತ ದೇಹವನ್ನು ತಂದು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಂತೆ ಮೇಡ್ಲೇರಿ ರಸ್ತೆಯ ಗಂಗಾಜಲ ತಾಂಡಾ, ಗೋವಿಂದ ಬಡಾವಣೆ, ಬಸಲಿಕಟ್ಟಿ ತಾಂಡಾದ ಜನತೆ ಸ್ಥಳಕ್ಕೆ ಆಗಮಿಸಿ ಶವ ಸಂಸ್ಕಾರ ನೆರವೇರಿಸಲು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

    ‘ಈ ರಸ್ತೆ ಮಾರ್ಗವಾಗಿ ನಿತ್ಯವೂ ಹಲವು ವಾಹನಗಳು ಓಡಾಡುತ್ತವೆ. ತಾಂಡಾ ನಿವಾಸಿಗಳು, ಕುರಿ ಹಾಗೂ ಜಾನುವಾರುಗಳನ್ನು ಮೇಯಿಸುವವರು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಕರೊನಾದಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಈ ಭಾಗದಲ್ಲಿ ಮಾಡಬಾರದು. ಬೇರೆಡೆ ಸ್ಥಳ ಗುರುತಿಸಿಕೊಳ್ಳಿ’ ಎಂದು ಪಟ್ಟುಹಿಡಿದರು. ಆಂಬುಲೆನ್ಸ್​ನಿಂದ ಯಾವುದೇ ಕಾರಣಕ್ಕೂ ಶವವನ್ನು ಹೊರಗೆ ತೆಗೆಯಬೇಡಿ. ಬೇರೆಗೆ ತೆಗೆದುಕೊಂಡು ಹೋಗಿ ಎಂದು ಆಗ್ರಹಿಸಿದರು.

    ರಾಮಪ್ಪ ನಾಯಕ, ಕೃಷ್ಣಮೂರ್ತಿ ಲಮಾಣಿ, ವಸಂತ ಲಮಾಣಿ, ಲಾಲಪ್ಪ ಪೂಜಾರ, ಕುಮಾರ ಲಮಾಣಿ, ಡಾಕಪ್ಪ ಲಮಾಣಿ, ಭೀರಪ್ಪ ಲಮಾಣಿ, ಹನುಮಂತಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

    ಪೊಲೀಸರ ಜತೆ ವಾಗ್ವಾದ: ತಾಂಡಾ ನಿವಾಸಿಗಳು ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪಿಎಸ್​ಐ ಮೇಘರಾಜ ಮಾತನಾಡಿ, ‘ಶವ ಸಂಸ್ಕಾರ ನಡೆಸುತ್ತಿರುವ ಜಾಗ ತಾಂಡಾಗಳಿಗೆ 3 ಕಿ.ಮೀ.ನಷ್ಟು ದೂರವಿದೆ. ಇದರಿಂದಾಗಿ ತೊಂದರೆ ಆಗುವುದಿಲ್ಲ. ನೀವು ಪರಸ್ಪರ ಅಂತರ ಕಾಯ್ದುಕೊಳ್ಳದೆ ಇಲ್ಲಿ ಜಮಾಯಿಸಿದ್ದೀರಿ. ಇದು ಸರಿಯೇ? ಬಾಕಿ ಸಮಯದಲ್ಲಿ ಎಲ್ಲರೂ ಕೂಡಿಕೊಂಡು ಇಸ್ಪೀಟ್ ಆಟವಾಡುತ್ತೀರಿ. ಆಗ ನಿಮಗೆ ಕರೊನಾ ಭಯ ಬರಲ್ವಾ’ ಎಂದು ತರಾಟೆಗೆ ತೆಗೆದುಕೊಂಡರು. ಆದರೆ, ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಪೊಲೀಸರು ಜಿಲ್ಲಾಡಳಿತದ ಗಮನಕ್ಕೆ ತಂದು ದೇವರಗುಡ್ಡ ರಸ್ತೆಯ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸಿದರು. ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಶವವನ್ನು ಆಂಬುಲೆನ್ಸ್​ನಲ್ಲಿಟ್ಟು ರಸ್ತೆಯಲ್ಲೇ ನಿಲ್ಲಿಸಲಾಗಿತ್ತು.

    ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು: ಗಿರಿಜಾದೇವಿ ದುರ್ಗದಮಠ ಅವರು ನಗರದ ಕೆಎಲ್​ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದರು. ನಂತರ ಅದೇ ಸಂಸ್ಥೆಯ ಮಹಿಳಾ ಪದವಿ ಕಾಲೇಜ್​ನ ಪ್ರಭಾರ ಪ್ರಾಚಾರ್ಯರಾಗಿದ್ದರು. 2018ರಲ್ಲಿ ನಡೆದ ಹಾವೇರಿ ಜಿಲ್ಲಾ ಕಸಾಪ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದರು. ವೀರಶೈವ ಪರಂಪರೆ, ಪಂಚಪೀಠದ ಕುರಿತು ಕವನ ಸಂಕಲನಗಳನ್ನು ಬರೆದಿದ್ದರು. ತಾಲೂಕಿನ ಬರಹಗಾರರು, ತಾಲೂಕಿನ ವಿಭೂತಿ ಪುರುಷರು ಸೇರಿ 34ಕ್ಕೂ ಅಧಿಕ ಕೃತಿಗಳು ಪ್ರಕಟವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts