More

    ವೈಜ್ಞಾನಿಕವಾಗಿ ವಿಲೇವಾರಿಯಾಗಲಿ ಕಸ

    ಚಿಕ್ಕಮಗಳೂರು: ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದ ಜನತೆಗೆ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

    ನಗರದ ಡಿಎಸಿಜಿ ಪಾಲಿಟೆಕ್ನಿಕ್ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ನಗರಸಭೆಯಿಂದ ಆಯೋಜಿಸಿದ್ದ ಸ್ವಚ್ಛ ಚಿಕ್ಕಮಗಳೂರು-2023, ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಸ್ವಚ್ಛತಾ ಅಭಿಯಾನಕ್ಕೆ ಮೂಲ ಪ್ರೇರಣೆ. ಇದರಿಂದ ದೇಶವನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
    ನಮ್ಮ ಮನೆ, ನಮ್ಮ ಪರಿಸರ, ಊರು, ಚರಂಡಿ ಸ್ವಚ್ಛವಾಗಬೇಕು. ಆಗ ಇಡೀ ದೇಶವೇ ಸ್ವಚ್ಛವಾಗುತ್ತದೆ. ಹೀಗಾಗಿಯೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಸಗುಡಿಸುವ ಮೂಲಕ ಎಲ್ಲರಿಗೂ ಪ್ರೇರಣೆ ನೀಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಮನೆಮನೆಗಳಿಗೆ ಶೌಚಗೃಹ ನಿರ್ಮಿಸಿಕೊಡುವ ಯೋಜನೆ ರೂಪಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 15 ಸಾವಿರ ರೂ. ಹಾಗೂ ಇತರೆ ಸಮುದಾಯದವರಿಗೆ 12 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ದೇಶದ 12 ಕೋಟಿ ಕುಟುಂಬಗಳಿಗೆ ಈವರೆಗೆ ಶೌಚಗೃಹ ನಿರ್ಮಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
    ಗ್ರಾಮೀಣ ಪ್ರದೇಶದಲ್ಲಿಯೂ ಕಸ ವಿಲೇವಾರಿ ವೈಜ್ಞಾನಿಕವಾಗಿ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸೂಕ್ತ ಅನುದಾನ ನೀಡುತ್ತಿದೆ. ಈ ಅನುದಾನ ಬಳಸಿಕೊಂಡು ರಾಜ್ಯ ಸರ್ಕಾರಗಳು ಸ್ವಚ್ಛತಾ ಕಾರ್ಯ ನಡೆಸುತ್ತಿವೆ. ಗಾಂಧೀಜಿ ಹೇಳಿರುವಂತೆ ಸ್ವಚ್ಛತೆ ನಮ್ಮ ಜೀವನದ ಪ್ರಮುಖ ಅಂಶವಾಗಬೇಕು ಎಂದರು.
    ಗಾಂಧಿ ಜಯಂತಿಯಂದು ಪ್ರತಿಯೊಬ್ಬರೂ ಖಾದಿ ಭಂಡಾರದಲ್ಲೇ ಬಟ್ಟೆಗಳನ್ನು ಖರೀದಿಸಬೇಕು. ವರ್ಷಕ್ಕೆ ಒಂದು ಜೊತೆ ಖಾದಿ ಬಟ್ಟೆ ಖರೀದಿಸಿದರೆ 140 ಕೋಟಿ ಬಟ್ಟೆ ಖರೀದಿ ಆದಂತಾಗುತ್ತದೆ. ಹೀಗಾದಾಗ ಖಾದಿ ಬಟ್ಟೆಗಳಿಗೆ ಬೇಡಿಕೆ ಬಂದು ಖಾದಿ ತಯಾರಿಕಾ ಕೇಂದ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಮೂಲಕ ನೇಕಾರರು ಸ್ವಾವಲಂಬಿಗಳಾಗಲು ಸಾಧ್ಯ ಎಂದರು.
    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಬಹಳ ದಿನಗಳಿಂದಲೇ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಇಂದು ಆರಂಭವಾಗಿರುವ ಸ್ವಚ್ಛತಾ ಅಭಿಯಾನವನ್ನು ನಿರಂತರವಾಗಿ ನಡೆಸಬೇಕು. ಮುಂದಿನ ಗಾಂಧಿ ಜಯಂತಿಯೊಳಗೆ ಚಿಕ್ಕಮಗಳೂರು ಜಿಲ್ಲೆಯನ್ನು ಕೊಡಗಿನಂತೆ ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿ ಮಾಡುವ ಸಂಕಲ್ಪ ತೊಡಬೇಕು. ಸ್ವಚ್ಛತಾ ವಿಷಯದಲ್ಲಿ ಜಿಲ್ಲೆಯನ್ನು ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವಂತೆ ಮಾಡಬೇಕು ಎಂದು ಹೇಳಿದರು.
    ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿ ಜಿಪಂ ಕಳೆದ 15 ದಿನಗಳಿಂದ ವಿವಿಧ ಕಾರ್ಯಕ್ರಮ ನಡೆಸಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಸ್ವಚ್ಛತಾ ಅಭಿಯಾನ ನಡೆದಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ನಾಗರಿಕರು ನಗರದ ಆಸುಪಾಸಿನ ಗಿರಿಶ್ರೇಣಿಗಳನ್ನು ಸ್ವಚ್ಛಗೊಳಿಸಿದರು.
    ಎಸ್ಪಿ ವಿಕ್ರಮ ಅಮಟೆ, ನಗರಸಭೆ ಪೌರಾಯುಕ್ತ ಬಸವರಾಜ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇ ವಿನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts