More

    ಶಮನಗೊಂಡ ಬಿಜೆಪಿಯಲ್ಲಿನ ಅಸಮಾಧಾನ

    ಹುಬ್ಬಳ್ಳಿ : ಬಿಜೆಪಿಯಲ್ಲಿದ್ದ ಅಲ್ಪಸ್ವಲ್ಪ ಭಿನ್ನಾಭಿಪ್ರಾಯ ಸರಿಪಡಿಸಿದ್ದೇನೆ. ದಾವಣಗೆರೆಯಲ್ಲಿ ಎಲ್ಲವೂ ಸರಿಯಾಗಿದೆ. ಬೆಳಗಾವಿಯಲ್ಲಿ ಎಲ್ಲ ಮುಖಂಡರೊಂದಿಗೆ ರ್ಚಚಿಸಿದ್ದು, ಜಗದೀಶ ಶೆಟ್ಟರ್ ಗೆಲುವಿಗೆ ಅಲ್ಲಿನ ಮುಖಂಡರು, ಕಾರ್ಯಕರ್ತರು ಶ್ರಮಿಸಲಿದ್ದಾರೆ. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಅಸಮಾಧಾನವನ್ನೂ ಶೀಘ್ರ ಸರಿಪಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

    ಇಲ್ಲಿನ ಅರವಿಂದ ನಗರದಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸುಮಲತಾ ಅವರೊಂದಿಗೂ ಮಾತನಾಡಲಾಗುವುದು ಎಂದರು.

    ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಸಹ ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಅವರ ಪ್ರಚಾರದಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ ಎಂದರು.

    ಬಿಜೆಪಿಯ ಹಲವಾರು ಮುಖಂಡರು ಕಾಂಗ್ರೆಸ್​ಗೆ ಬರಲಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಮುಳುಗುವ ಹಡಗು ಇದ್ದಂತೆ. ಯಾವುದೇ ರಾಜಕಾರಣಿ ಆ ಪಕ್ಷಕ್ಕೆ ಹೋಗಿ, ತನ್ನ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಈ ಹಿಂದಿನ ಬಿಜೆಪಿ ಸರ್ಕಾರ ಪ. ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟಿದ್ದ ಹಣವನ್ನು ಈಗಿನ ಕಾಂಗ್ರೆಸ್ ಸರ್ಕಾರ ಬೇರೆ ಕಾರ್ಯಗಳಿಗೆ ಬಳಸಿಕೊಂಡಿದೆ. ರೈತರ ಬೋರ್​ವೆಲ್​ಗಳಿಗೆ ಅಂದಾಜು 2 ಲಕ್ಷ ರೂ. ಮೌಲ್ಯದ ವಿದ್ಯುತ್ ತಂತಿ, ಮೋಟಾರು ಸೇರಿದಂತೆ ಇತರ ಸೌಲಭ್ಯಗಳನ್ನು ಹಿಂದಿನ ಬಿಜೆಪಿ ಸರ್ಕಾರ ಒದಗಿಸುತ್ತಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅದೆಲ್ಲವನ್ನೂ ರದ್ದು ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ, ಪರಿಶಿಷ್ಟ ಜಾತಿ, ಪಂಗಡಗಳ ವಿರೋಧಿಯಾಗಿದೆ ಎಂದು ಆರೋಪಿಸಿದರು.

    ಸರ್ಕಾರದ ಖಜಾನೆ ಖಾಲಿ ಆಗಿದೆ. ಈ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವೇ ಇಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ. ಕಾನೂನು, ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ದೂರಿದರು.

    ಮಾ. 29ರಂದು ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತದೆ ಎಂದ ಯಡಿಯೂರಪ್ಪ, ಎಂಎಲ್​ಸಿ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ತೇಜಸ್ವಿನಿಗೌಡ ಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನು ನೀಡಿತ್ತು. ಅವರು ಪಕ್ಷ ಬಿಟ್ಟು ಹೋದರೆ ಹೋಗಲಿ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎನ್. ರವಿಕುಮಾರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್ ವೀಣಾ ಬರದ್ವಾಡ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts