More

    ನೀರು ಶುದ್ಧೀಕರಣ ಘಟಕದಲ್ಲೇ ಅಸ್ವಚ್ಛತೆ

    ಯು. ಎಸ್. ಪಾಟೀಲ ದಾಂಡೇಲಿ

    ಜಗತ್ತಿನಾದ್ಯಂತ ಕರೊನಾ ಆತಂಕ ಮನೆ ಮಾಡಿದೆ. ಆದರೆ, ದಾಂಡೇಲಿಯಲ್ಲಿ ಮಾತ್ರ ಇನ್ನೊಂದು ರೋಗದ ಭೀತಿ ತಲೆದೋರಿದೆ. ಅದೇ ಕಾಮಾಲೆ ಕಾಯಿಲೆ. ಕಾಮಾಲೆಯ 200ಕ್ಕೂ ಪ್ರಕರಣಗಳು ಕಂಡುಬಂದಿರುವುದೇ ಈ ಆತಂಕಕ್ಕೆ ಕಾರಣವಾಗಿದೆ.

    ದಾಂಡೇಲಿಯಲ್ಲಿ ಕಳೆದ 20 ದಿನಗಳಲ್ಲಿ 200ಕ್ಕೂ ಹೆಚ್ಚು ಕಾಮಾಲೆ ಪ್ರಕರಣಗಳು ಕಾಣಿಸಿವೆ ಎಂದು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೇ ದೃಢಪಡಿಸಿದಾರೆ. ಹಾಗಿದ್ದರೆ, ಇಷ್ಟೊಂದು ಪ್ರಕರಣಗಳು ಗೋಚರಿಸಲು ಕಾರಣವೇನು? ಪಟ್ಟಣಕ್ಕೆ ಪೂರೈಸಲಾಗುತ್ತಿರುವ ಕುಡಿಯುವ ನೀರೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿದೆ.

    ದಾಂಡೇಲಿ ಸಮಗ್ರ ಹೋರಾಟ ಸಮಿತಿಯವರಂತೂ ಪಟ್ಟನದ ಪಟೇಲ ನಗರದಲ್ಲಿ ಇರುವ ನೀರು ಶುದ್ಧೀಕರಣ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ. ಮಳೆಗಾಲ ಪೂರ್ವದಲ್ಲಿ ನಗರಸಭೆಯು ಪಟೇಲನಗರದ ನೀರು ಶುದ್ಧೀಕರಣ (ಪಂಪ್ ಹೌಸ್) ಘಟಕವನ್ನು ಸ್ವಚ್ಛಗೊಳಿಸುವತ್ತ ಕಾಳಜಿ ವಹಿಸಿಲ್ಲ. ಹೀಗಾಗಿ, ಅಶುದ್ಧ ನೀರನ್ನೇ ಜನರಿಗೆ ಸರಬರಾಜು ಮಾಡಿದ್ದರಿಂದ ಈ ಸಮಸ್ಯೆ ತಲೆದೋರಿದೆ ಎಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ.

    ಕಾಮಾಲೆ ಬರಲು ಕುಡಿಯುವ ನೀರಿಲ್ಲದೆ ಹಲವಾರು ಕಾರಣಗಳು ಇರಬಹುದು ಎಂದು ನಗರಸಭೆ ಅಧಿಕಾರಿಗಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಅಶುದ್ಧ ನೀರೇ ಪ್ರಮುಖ ಕಾರಣ ಎಂಬುದು ಪ್ರತಿಭಟನಾಕಾರರ ನಿಲುವಾಗಿದೆ.

    ಮಳೆಗಾಲದಲ್ಲಿ ಹೆಚ್ಚಿನ ಮಣ್ಣು ನದಿ ನೀರಿನಲ್ಲಿ ಹರಿದುಬರುತ್ತದೆ. ಇದಲ್ಲದೆ, ಪಟ್ಟಣದಲ್ಲಿ ಚರಂಡಿ ಮೂಲಕ ಹರಿದು ಬರುವ ನೀರು ಕೂಡ ಶುದ್ಧೀಕರಣದ ಘಟಕದ ಬಳಿಯೇ ನದಿಗೆ ಸೇರುತ್ತದೆ. ಕುಡಿಯುವ ನೀರಿನಲ್ಲಿ ಕಲ್ಮಶ ಸೇರುವುದಕ್ಕೆ ಇದು ಮುಖ್ಯ ಕಾರಣ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ.

    ಪಂಪ್ ಹೌಸ್ ಹತ್ತಿರ ಕಲ್ಮಶ ನೀರು ಹರಿಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಕೊಳಚೆ ನೀರನ್ನು ಪಂಪ್ ಹೌಸ್​ನಿಂದ ದೂರದ ಕೆಳಭಾಗಕ್ಕೆ ಹರಿಯಬಿಡಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ.

    ವಿಳಂಬಕ್ಕೆ ಕಾರಣ: ಪಂಪ್ ಹೌಸ್​ನ ಬೆಡ್ ಫಿಲ್ಟರ್ ಶುದ್ಧತಾ ಕಾರ್ಯವನ್ನು ಪ್ರತಿ 7 ವರ್ಷಕೊಮ್ಮೆ ಕೈಗೆತ್ತಿಕೊಳ್ಳಲಾಗುತ್ತದೆ. ಈ ಬಾರಿ ಅಕ್ಟೋಬರ್ ತಿಂಗಳಲ್ಲಿಯೇ ಘಟಕದ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿತ್ತು. ಆದರೆ, ಈ ಸಮಯದಲ್ಲಿ ಮಳೆ ನೀರಿನಲ್ಲಿ ರಾಡಿ ಅಂಶ ಇದ್ದುದರಿಂದ ಮತ್ತು ಸ್ವಚ್ಚತಾ ಕಾರ್ಯ ಕೈಗೆತ್ತಿಕೊಂಡರೆ ಜನರಿಗೆ ಕುಡಿಯುವ ನೀರಿನ ವಿತರಣೆಗೆ ತೊಂದರೆ ಆಗಬಹುದೆಂಬ ಕಾರಣದಿಂದ ನಗರಸಭೆಯ ಅಧಿಕಾರಿಗಳು ಗುತ್ತಿಗೆದಾರನಿಗೆ ಕೆಲ ದಿನ ಕಾಯುವಂತೆ ತಿಳಿಸಿದರೆನ್ನಲಾಗಿದೆ. ಮರಳು ಕುರಿತು ಸರ್ಕಾರದಿಂದ ಜಾರಿಯಲ್ಲಿದ್ದ ಕಠಿಣ ನೀತಿ-ನಿಯಮ ಹಾಗೂ ಕೋವಿಡ್-19 ನಿರ್ಬಂಧನೆಯಿಂದಾಗಿ ಪಂಪ್ ಹೌಸ್ ಸ್ವಚ್ಛತೆಗೆ ಅವಶ್ಯವಿರುವ ಒರಟಾದ ಉಸುಕು ಮೇ ತಿಂಗಳವರೆಗೆ ದೊರೆಯದೇ ಇರುವುದು ಕೂಡ ವಿಳಂಬಕ್ಕೆ ಕಾರಣವಾಗಿದೆ.

    ಸರ್ಕಾರದ ಮರಳು ನೀತಿ ಸಡಿಲಗೊಂಡ ನಂತರ ಮೇ ಮೊದಲ ವಾರದಲ್ಲಿ ಒರಟಾದ ಉಸುಕು ಲಭ್ಯವಾದ ಕಾರಣ ನಗರಸಭೆಯು ಸ್ವಚ್ಛತಾ ಕಾರ್ಯದತ್ತ ಗಮನ ಹರಿಸಿದೆ. ಇದಲ್ಲದೆ, ಕಾಮಾಲೆ ರೋಗದ ಲಕ್ಷಣ ನಗರದಲ್ಲಿ ಹೆಚ್ಚಾಗಿದ್ದರಿಂದ ಮತ್ತು ಸಾರ್ವಜನಿಕರ ಪರವಾಗಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪ್ರತಿಭಟನೆ ತೀವ್ರ ಸ್ವರೂಪ ತಾಳಿದ ಕಾರಣ ನಗರಸಭೆಯ ಆಧಿಕಾರಿಗಳು ಎಚ್ಚೆತ್ತು ಶುದ್ಧೀಕರಣ ಘಟಕದ ಸ್ವಚ್ಛತೆ ಕಾಮಗಾರಿಯನ್ನು ತ್ವರಿತಗೊಳಿಸಿದ್ದಾರೆ.

    ಸರ್ಕಾರದ ಮರಳು ನೀತಿಯ ನಿರ್ಬಂಧ ಹಾಗೂ ಕೋವಿಡ್-19 ಕಾರಣದಿಂದಾಗಿ ಒರಟಾದ ಉಸುಕು ಲಭ್ಯವಾಗದೆ ಬೆಡ್ ಫಿಲ್ಟರ್ ಸ್ವಚ್ಛತೆ ವಿಳಂಬವಾಗಿದೆ. 2 ಬೆಡ್ ಫಿಲ್ಟರ ಸ್ವಚ್ಛತೆ ಪೂರ್ಣಗೊಂಡಿದ್ದು 3ನೆಯ ಬೆಡ್ ಫಿಲ್ಟರ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

    – ಎನ್. ಅನಿರುದ್ಧ, ಪಂಪ್ ಹೌಸ್ ಕಾಮಗಾರಿಯ ಗುತ್ತಿಗೆದಾರ

    ದಾಂಡೇಲಿ ನಗರದ ಕೆಲ ಭಾಗದಿಂದ ಪಂಪ್ ಹೌಸ್ ಹತ್ತಿರದ ನದಿ ಭಾಗದಲ್ಲಿ ಕೊಳಚೆ ನೀರು ಸಂಗ್ರಹಣೆ ಆಗುತ್ತಿರುವುದನ್ನು ನಗರಸಭೆ ತಡೆಯಬೇಕು. ದಾಂಡೇಲಿಯಲ್ಲಿನ ಕಾಳಿ ನದಿಯಿಂದ ಹಳಿಯಾಳದ ಕಾರ್ಖಾನೆ ಹಾಗೂ ಅಲ್ಲಿಯ ಜನರಿಗೆ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ರೀತಿ ದಾಂಡೇಲಿಯ ಜನರಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಬೇಕಾಗಿದೆ. ಬೆಡ್ ಫಿಲ್ಟರನ್ನು ಪ್ರತಿ 3 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು.

    – ಅಕ್ರಮ ಖಾನ, ಅಧ್ಯಕ್ಷರು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ

    ನಗರದ ಶುದ್ಧಿಕರಣದ ಘಟಕದ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಭಾನುವಾರದಿಂದ ಫೀಲ್ಡ್ ಟೆಸ್ಟ್ ಕಿಟ್ ಮುಖಾಂತರ ಪರೀಕ್ಷೆಗೆ ಒಳಪಡಿಸಿ, ನೀರಿನ ಶುದ್ಧತೆಯ ಪ್ರಮಾಣ ಖಚಿತಪಡಿಸಿಕೊಂಡು ನಗರದಲ್ಲಿ ನೀರಿನ ಸರಬರಾಜು ಆರಂಭಿಸಲಾಗಿದೆ.

    – ಡಾ. ಸೈಯದ್ ಜಾಹೇದ ಆಲಿ, ಪೌರಾಯುಕ್ತರು, ನಗರಸಭೆ, ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts