More

    ಬಲಿಗಾಗಿ ಕಾದಿರುವಂತಿದೆ ಶಿಥಿಲಗೊಂಡ ಟ್ಯಾಂಕ್ !

    ಸಿಂದಗಿ: ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸುವ ಓವರ್‌ಹೆಡ್ ಟ್ಯಾಂಕ್‌ವೊಂದು ಶಿಥಿಲಾವಸ್ಥೆಗೆ ತಲುಪಿ, ಆವರಣದಲ್ಲಿ ಆಡುವ ಶಾಲಾ ಮಕ್ಕಳಿಗೆ ಪ್ರಾಣ ಭೀತಿ ಸೃಷ್ಟಿಸಿದೆ.

    ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಕಳೆದ ಎರಡು ದಶಕಗಳ ಹಿಂದೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಣಗೊಂಡಿರುವ 50ಸಾವಿರ ಲೀ. ನೀರಿನ ಸಂಗ್ರಹದ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಕಾಣದೇ ದುರವಸ್ಥೆಗೆ ಜಾರಿದೆ.

    ಇಲ್ಲಿ 760ಕ್ಕೂ ಹೆಚ್ಚು ಕುಟುಂಬಗಳಿವೆ. ಗ್ರಾಮದಲ್ಲಿ ಒಟ್ಟು 4ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲರಿಗೂ ಸ್ಥಳೀಯ ಗ್ರಾಮ ಪಂಚಾಯತಿ ತಲಾ 50ಸಾವಿರ ಲೀ. ಸಾಮರ್ಥ್ಯದ ಎರಡು ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಅದರಲ್ಲಿ ಒಂದು ಸುಸ್ಥಿತಿಯಲ್ಲಿದ್ದರೆ, ಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಟ್ಯಾಂಕ್ ಮಾತ್ರ ತನ್ನ ಕೊನೆ ದಿನಗಳನ್ನು ಎಣಿಸುತ್ತಿದೆ. ಸಂರಕ್ಷಿಸಬೇಕಿರುವ ಅಧಿಕಾರಿ ಮತ್ತು ಆಡಳಿತ ವರ್ಗವನ್ನು ಎದುರು ನೋಡುತ್ತ, ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ, ಅಡುಗೆ ಸಿಬ್ಬಂದಿಗೆ ಬಲಿ ತೆಗೆದುಕೊಳ್ಳುವ ಆತಂಕ ಮೂಡಿಸಿದೆ. ಗ್ರಾಪಂ ನಿಷ್ಕಾಳಜಿಯಿಂದ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದರೆ, ಪಂಚಾಯಿತಿ ವ್ಯವಸ್ಥೆ ನಿದ್ರಾವಸ್ಥೆಗೆ ಜಾರಿದಂತಾಗಿದೆ. ಅನಾಹುತಕ್ಕೂ ಮುನ್ನವೇ ಅಧಿಕಾರಿಗಳು ಎಚ್ಚರಗೊಳ್ಳಬೇಕಿದೆ.

    ಶಾಲೆಯ ಆವರಣದಲ್ಲಿ ನಿರ್ಮಾಣವಾಗಿರುವ ಈ ಟ್ಯಾಂಕ್ ಹೊರನೋಟದಿಂದ ಸುಸ್ಥಿರವಾಗಿ ಕಂಡರೂ, ಒಳಗೆ ಹೋದರೆ ನೋಡಲು ಬಂದವರ ಹೆಗಲ ಮೇಲೆಯೇ ಉರುಳಿ ಬಿದ್ದೀತು ಎನ್ನುವಂತಿದೆ. ಇದರ ಕೆಳಗೆ ಸರಿಸೃಪಗಳಂತೆ ಬೆಳೆದ ಬಳ್ಳಿಗಳು, ಜಾಲಿ ಕಂಟಿಗಳು ನಾಲ್ಕು ಕಾಲಂಗಳಿಗೂ ಹಬ್ಬಿ ನಿಂತಿವೆ. ಕಂಬಗಳಿಂದ ಆಗಾಗ ಉದುರಿ ಬೀಳುವ ಸಿಮೆಂಟ್ ಚಕ್ಕೆಗಳ ಗುಡ್ಡೆಯೇ ಬಿದ್ದಿದೆ. ನಾಲ್ಕು ಕಂಬಗಳಲ್ಲಿನ ಹಾಗೂ ಮಧ್ಯದ ಪಿಲ್ಲರ್‌ಗಳ ಕಬ್ಬಿಣದ ಸರಳುಗಳು ಹೊರಬಂದಿದ್ದು, ಟ್ಯಾಂಕ್ ಭಾರ ಹೊತ್ತು ನಿಂತಂತಾಗಿದೆ.

    ಈ ಟ್ಯಾಂಕಿನ ದುರವಸ್ಥೆಯು, ಪಕ್ಕದಲ್ಲಿಯೇ ಇರುವ ಕುಡಿಯುವ ನೀರಿನ ತೊಟ್ಟಿಗೆ ಹೋಗಲು ಹೆದರುವ ಮಕ್ಕಳು, ಬಿಸಿಯೂಟದ ಅಡುಗೆ ಕೋಣೆಯಲ್ಲಿರುವ ಅಡುಗೆ ಸಿಬ್ಬಂದಿ ಹಾಗೂ ಅಲ್ಲಿನ ಶಿಕ್ಷಕರ ಕೋಣೆಯಲ್ಲಿರುವವರಿಗೂ ಯಾವಾಗ ನಮ್ಮ ಮೇಲೆ ಬೀಳುತ್ತೋ ಎನ್ನುವ ಆತಂಕದಲ್ಲಿಯೇ ಕೆಲಸ ನಿರ್ವಹಿಸುವಂತೆ ಮಾಡಿದೆ. ಅಲ್ಲದೇ ಶಾಲೆಯ ಹಿಂದಿನ ಮುಖ್ಯಗುರುಗಳು ಟ್ಯಾಂಕ್‌ನ ದುರಸ್ತಿ ಸೇರಿದಂತೆ ಅದನ್ನು ತೆರವುಗೊಳಿಸುವಂತೆ ಗ್ರಾಪಂಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಭಾರಿ ಮುಖ್ಯಗುರುಮಾತೆ ಲಲಿತಾ ಹೊಸಮನಿ.

    ಬಿಸಿಯೂಟ ಮಾಡಿ, ಪ್ಲೇಟ್ ತೊಳೆಯಲು, ನೀರು ಕುಡಿಯಲು ಹೋಗುವುದಕ್ಕೆ ಅಂಜಿಕೆಯಾಗುತ್ತಿದೆ. ಆವರಣದಲ್ಲಿ ಆಟವಾಡುವಾಗಲೂ ಶಿಕ್ಷಕರು, ಇಲ್ಲಿನ ಸಿಬ್ಬಂದಿ ಹೆಜ್ಜೆಹೆಜ್ಜೆಗೂ ಅಲ್ಲಿ ಹೋಗಬೇಡಿ ಎಂದು ಬೆದರಿಸುವುದರ ಜತೆಗೆ ನಮಗೆ ಪ್ರಾಣಭಯ ಮೂಡಿಸುತ್ತಿದೆ. ಏನು ಮಾಡುವುದು.
    ರಾಘವೇಂದ್ರ ಹವಳಗಿ, ಶಾಲಾ ವಿದ್ಯಾರ್ಥಿ
    ಬಹಳ ವರ್ಷಗಳ ಹಿಂದೆ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಸಮಯಕ್ಕೆ ದುರಸ್ತಿ ಕಾಣದೇ ಬೀಳುವ ಸ್ಥಿತಿಯಲ್ಲಿದೆ. ಇದರಡಿಯಲ್ಲಿಯೇ ಇರುವ ನೀರಿನ ಟ್ಯಾಂಕ್‌ಗೆ ಮಕ್ಕಳು ನೀರು ಕುಡಿಯಲು ತೆರಳಿದಾಗ ಏನಾದರೂ ಪ್ರಾಣಹಾನಿ, ಅನಾಹುತವಾದರೆ ಅದಕ್ಕೆ ಯಾರ ಹೊಣೆಯಾಗುತ್ತಾರೆ.
    ಆನಂದ ನಾಯ್ಕೋಡಿ, ಗ್ರಾಮಸ್ಥ
    ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸುವ ಬೇರೆ ವ್ಯವಸ್ಥೆಯಿಲ್ಲ. ಇರುವ ಎರಡು ಟ್ಯಾಂಕ್‌ಗಳಲ್ಲಿ ಒಂದು ಟ್ಯಾಂಕ್ ಕೆಡವಿದರೆ ಮಾಡಿದರೆ ನೀರಿನ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ಆಡಳಿತದ ನಿರ್ಣಯವಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದ್ದು, ಬೇಗ ಹೊಸ ಟ್ಯಾಂಕ್ ನಿರ್ಮಾಣಗೊಳ್ಳಲಿದೆ.
    ಕಾಶೀನಾಥ ಕಡಕಭಾವಿ, ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts