More

    ದಿಕ್ಸೂಚಿ: ಆರೋಹಣದ ಯಾತ್ರೆಯಲ್ಲಿ ಸಾಹಸದ ಅನಾವರಣ…

    ದಿಕ್ಸೂಚಿ: ಆರೋಹಣದ ಯಾತ್ರೆಯಲ್ಲಿ ಸಾಹಸದ ಅನಾವರಣ...‘ಅಮ್ಮಾ ನಾನು ದೊಡ್ಡವಳಾದ ಮೇಲೆ ಯುದ್ಧವಿಮಾನವನ್ನು ಚಲಾಯಿಸುತ್ತೇನೆ’ ಎಂದು ಇನ್ನೂ ಪ್ರೖೆಮರಿ ಶಾಲೆಗೆ ಹೋಗುತ್ತಿದ್ದ ಆ ಬಾಲಕಿ ಹೇಳಿದಾಗೆಲ್ಲ, ತಾಯಿ, ‘ಹುಂ. ಚಿಕ್ಕವಯಸ್ಸಿನ ಉತ್ಸಾಹ. ಏನೋ ಹೇಳ್ತಾಳೆ’ ಎಂದು ಸುಮ್ಮನಾಗುತ್ತಿದ್ದರು. ಆದರೆ ಆ ಬಾಲಕಿ ಸುಖಾಸುಮ್ಮನೆ ಹೀಗೆ ಹೇಳುತ್ತಿರಲಿಲ್ಲ. ಅದು ಹೇಗೋ ಆಕೆಯ ಮನಸ್ಸಿನಲ್ಲಿ ಯುದ್ಧವಿಮಾನದ ಚಿತ್ರ ಅಚ್ಚೊತ್ತಿಬಿಟ್ಟಿತ್ತು. ಆ ಕನಸೀಗ ನಿಜವಾಗಿದೆ. ಅಂದರೆ, ರಫೇಲ್ ಜೆಟ್ ಚಲಾಯಿಸಲಿರುವ ಮೊದಲ ಮಹಿಳೆ ಎಂಬ ಹೆಮ್ಮೆ-ಹೆಗ್ಗಳಿಕೆ ಆಕೆಯ ಖಾತೆಗೆ ಸೇರಿದೆ. ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್. ಈಚೆಗೆ ಹೊಸ ದಾಖಲೆ ಬರೆದ ಯುವತಿ. ಉತ್ತರ ಪ್ರದೇಶದ ವಾರಾಣಸಿ ಮೂಲ. ಶಾಲಾ ಶಿಕ್ಷಣವನ್ನು ವಾರಾಣಸಿಯಲ್ಲಿ ಪಡೆದ ಬಳಿಕ ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್​ಯುು)ಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ ಶಿವಾಂಗಿ, ಅಲ್ಲಿ ಎನ್​ಸಿಸಿಯ ಸಕ್ರಿಯ ಕೆಡೆಟ್ ಆಗಿದ್ದರು. ಬಹುಶಃ ಸೇನೆ ಸೇರುವ ಬಯಕೆಗೆ ಅಲ್ಲಿ ಇಂಬು ಸಿಕ್ಕಿರಬೇಕು. 2013ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. 2017ರಲ್ಲಿ ಭಾರತೀಯ ವಾಯುಪಡೆ ಸೇರಿದ ಶಿವಾಂಗಿ, ವಾಯುಪಡೆಯ ಅತಿ ಹಳೆಯದಾದ ಮಿಗ್-21 ಬೈಸನ್ ಅನ್ನು ಚಲಾಯಿಸುತ್ತಾರೆ. ಅಂದಹಾಗೆ, ಕಳೆದ ವರ್ಷ ಫೆಬ್ರವರಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ವಾಯುಪಡೆಯ ಯುದ್ಧವಿಮಾನವನ್ನು ಹೊಡೆದುರುಳಿಸಿ, ಬಳಿಕ ಅಕಸ್ಮಾತ್ತಾಗಿ ಪಾಕ್ ಗಡಿಯೊಳಗೆ ತೆರಳಿ, ಅಲ್ಲಿನ ಸೈನಿಕರ ಕೈಗೆ ಸಿಕ್ಕು ನಂತರ ರಾಜತಾಂತ್ರಿಕ ಯತ್ನದಿಂದಾಗಿ ವಾಪಸಾದ ಅಭಿನಂದನ್ ವರ್ಧಮಾನ್ ಅವರು ಶಿವಾಂಗಿಯ ವಿಮಾನಚಾಲನಾ ಗುರು ಎಂಬ ಮಾಹಿತಿ ಇದೆ. ಶಿವಾಂಗಿ ಸದ್ಯ ಕನ್ವರ್ಷನ್ ತರಬೇತಿ ಪಡೆಯುತ್ತಿದ್ದಾರೆ. ಅಂದರೆ ಒಂದು ಯುದ್ಧವಿಮಾನದಿಂದ ಮತ್ತೊಂದು ಬಗೆಯ ಯುದ್ಧವಿಮಾನ ಚಲಾಯಿಸುವ ಮುನ್ನ ಪಡೆಯಬೇಕಾದ ತರಬೇತಿ. ನಂತರದಲ್ಲಿ ರಫೇಲ್ ಜೆಟ್ ಚಲಾಯಿಸುವ ಅವಕಾಶ ಅವರಿಗೆ ದೊರೆಯುತ್ತದೆ. ಸದ್ಯ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಈ ತರಬೇತಿ ನಡೆಯುತ್ತಿದೆ.

    ಇದನ್ನೂ ಓದಿ: ದಿಕ್ಸೂಚಿ- ಕರೊನಾ ಚಕ್ರವ್ಯೂಹ ಭೇದಿಸಬಲ್ಲ ಅಭಿಮನ್ಯು ಯಾರು?

    ಇದೇ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯಲ್ಲಿಯೂ ನಾರೀಶಕ್ತಿಗೆ ಮಣೆಹಾಕುವ ವಿದ್ಯಮಾನ ನಡೆದಿದೆ. ಯುದ್ಧಹಡಗಿಗೆ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳ ನೇಮಕವಾಗಿದೆ. ಸಬ್ ಲೆಫ್ಟಿನೆಂಟ್​ಗಳಾದ ಕುಮುದಿನಿ ತ್ಯಾಗಿ ಮತ್ತು ರಿತಿ ಸಿಂಗ್ ಈ ಹೆಮ್ಮೆಗೆ ಪಾತ್ರರಾದವರು. ಯುದ್ಧನೌಕೆಯಲ್ಲಿನ ಹೆಲಿಕಾಪ್ಟರ್ ಚಾಲನೆ, ಸೋನಾರ್ ನಿರ್ವಹಣೆ, ಗುಪ್ತಚರ ಮತ್ತು ವಿಚಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ಇವರು ಮಾಡಲಿದ್ದಾರೆ. ನೌಕಾಪಡೆಯಲ್ಲಿ ಹಲವು ಮಹಿಳೆಯರಿದ್ದರೂ ಯುದ್ಧಹಡಗುಗಳಲ್ಲಿ ದೀರ್ಘಾವಧಿ ಕಾರ್ಯಾಚರಣೆಗೆ ನೇಮಿಸುವ ಪರಿಪಾಠವಿರಲಿಲ್ಲ. ಖಾಸಗಿತನಕ್ಕೆ ಅವಕಾಶ ಇರದಿರುವುದು, ಕಾಮನ್ ಟಾಯ್ಲೆಟ್ ಇತ್ಯಾದಿ ಕಾರಣಕ್ಕೆ ಇಂಥ ಅವಕಾಶ ನೀಡುತ್ತಿರಲಿಲ್ಲ.

    ಇತ್ತ, ಭಾರತೀಯ ಭೂಸೇನೆಗೆ ಸಂಬಂಧಿಸಿಯೂ ಮಹತ್ವದ ವಿದ್ಯಮಾನ ನಡೆದಿದೆ. ಮಹಿಳಾ ಅಧಿಕಾರಿಗಳನ್ನು ಪರ್ಮನೆಂಟ್ ಕಮಿಷನ್ ಮೂಲಕ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಈಚೆಗೆ ಆರಂಭವಾಗಿದೆ. ಪರ್ಮನೆಂಟ್ ಕಮಿಷನ್ (ಪಿಸಿ) ಮುಖಾಂತರ ಮಹಿಳಾ ಸೇನಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ವಯ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ನಂ.5 ಹೆಸರಿನ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಈ ಪ್ರಕಾರ, ಸೇನೆಯ ಏರ್ ಡಿಫೆನ್ಸ್, ಸಿಗ್ನಲ್ ವ್ಯವಸ್ಥೆ ವಿಭಾಗ, ಇಂಜಿನಿಯರಿಂಗ್ ವಿಭಾಗ, ಇಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿ ಹತ್ತು ವಿಭಾಗಗಳಿಗೆ ನೇಮಕಾತಿ ನಡೆಯಲಿದೆ. ಹಾಗಂತ ಸೇನೆಯ ಸರ್ವ ವಿಭಾಗಗಳಲ್ಲೂ ಮಹಿಳೆಯರಿಗೆ ಇನ್ನು ಅವಕಾಶ ಎಂದಲ್ಲ. ಇನ್​ಫ್ಯಾಂಟ್ರಿ, ಆರ್ಟಿಲರಿ, ಸಶಸ್ತ್ರಧಾರಿಯಾಗಿ ಕಾರ್ಯಾಚರಣೆಗೆ ತೆರಳುವ ಹಲವು ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳ ನೇಮಕಕ್ಕೆ ನಿರ್ಬಂಧ ಮುಂದುವರಿಯಲಿದೆ. ಹೇಳಲಿಕ್ಕಾಗದು, ಮುಂದೊಂದು ದಿನ ಸಮರಭೂಮಿಯಲ್ಲಿಯೂ ಹೆಣ್ಣು ತನ್ನ ದಿಟ್ಟತನ ಮೆರೆದಾಳು. ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಇವರೆಲ್ಲ ಸಮರಾಂಗಣದಲ್ಲಿ ಶೂರತನ ಮೆರೆದವರೇ ಅಲ್ಲವೆ…

    ಇದನ್ನೂ ಓದಿ: ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

    ಪರ್ಮನೆಂಟ್ ಕಮಿಷನ್ ಮೂಲಕ ತಮ್ಮನ್ನು ನೇಮಿಸಬೇಕು ಎಂದು ಮಹಿಳಾ ಸೇನಾಧಿಕಾರಿಗಳು ಬೇಡಿಕೆಯಿಡಲು ತೊಡಗಿ ಹಲವು ವರ್ಷಗಳೇ ಆಗಿದ್ದವು. ಕೊನೆಗೆ ಈ ವಿಷಯವಾಗಿ ಸುಪ್ರೀಂ ಕೋರ್ಟೆ ಕೇಂದ್ರ ಸರ್ಕಾರಕ್ಕೆ ಖಡಕ್ ನಿರ್ದೇಶನಗಳನ್ನು ನೀಡಬೇಕಾಯಿತು. ಈ ಮುಖಾಂತರ ನೇಮಕವಾದಲ್ಲಿ ಮೇಜರ್ ಇತ್ಯಾದಿ ಉನ್ನತ ಹುದ್ದೆಗಳಿಗೆ ಹೋಗಬಹುದು (ಮುಂದೊಂದು ದಿನ ಮಹಿಳೆಯೇ ಭಾರತೀಯ ಸೇನೆಯ ನೇತೃತ್ವ ವಹಿಸಿದರೂ, ಅಂದರೆ ಜನರಲ್ ಹುದ್ದೆಗೇರಿದರೂ ಅಚ್ಚರಿಯಿಲ್ಲ ಬಿಡಿ). ಅಲ್ಲದೆ, ನಿವೃತ್ತಿ ವಯಸ್ಸಿನ (60) ತನಕ ಸೇವೆ ಸಲ್ಲಿಸಬಹುದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ಸೇನಾ ಅಕಾಡೆಮಿ ಅಥವಾ ಅಧಿಕಾರಿಗಳ ತರಬೇತಿ ಮೂಲಕ ಪರ್ಮನೆಂಟ್ ಕಮಿಷನ್ ಮುಖಾಂತರ ಸೇನೆ ಸೇರಬಹುದು. ಸದ್ಯ ಷಾರ್ಟ್ ಸರ್ವಿಸ್ ಕಮಿಷನ್ (ಎಸ್​ಎಸ್​ಸಿ)ಮೂಲಕ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.

    *****

    ಇವೆಲ್ಲ ಮಹಿಳೆಯರ ಸೇನೆಯ ಸಾಹಸ-ಸಾಧನೆಯ ಕಥೆಯಾದರೆ, ಇತ್ತ ಅಲ್ಲಲ್ಲಿ ಸ್ವಲ್ಪ ಆತಂಕಕಾರಿಯಾದ, ಕಳವಳಕಾರಿಯಾದ ಚಿತ್ರಣವೂ ಕಂಡುಬರುತ್ತಿದೆ. ಮಾದಕವಸ್ತುಗಳ ಪ್ರಕರಣದಲ್ಲಿ ಕನ್ನಡ ಚಿತ್ರರಂಗ ಮತ್ತು ಹಿಂದಿ ಚಿತ್ರರಂಗದ ಕೆಲ ನಟಿಯರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ತನಿಖಾ ಏಜೆನ್ಸಿಗಳು ವಿಚಾರಣೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವರಲ್ಲಿ ಯಾರು ಏನು ತಪು್ಪ ಮಾಡಿದ್ದಾರಾ ಅಥವಾ ಇಲ್ಲವಾ ಎಂಬುದು ಮುಂದೆ ಗೊತ್ತಾಗಬೇಕು. ಆದರೆ ನಾವು ಇಲ್ಲಿ ಒಂದು ವಿಷಯ ಗಮನಿಸಬೇಕು. ಯಾರದಾದರೂ ಮೇಲೆ ಆರೋಪ ಬಂದಾಕ್ಷಣ ಅಥವಾ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆದಮಾತ್ರಕ್ಕೆ ಅವರು ಅಪರಾಧಿಗಳು ಎಂದು ಷರಾ ಬರೆಯಲಾಗದು. ತನಿಖೆಯ ಹಂತದಲ್ಲಿ ನಾನಾ ಮೂಲಗಳ ಮೂಲಕ ಮಾಹಿತಿ ಕಲೆಹಾಕಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವರನ್ನು ವಿಚಾರಣೆಗೆ ಕರೆಯಬಹುದು. ಒಂದೊಮ್ಮೆ ಅವರು ತಪು್ಪಮಾಡಿದ್ದರೂ ಅದು ನ್ಯಾಯಾಲಯದಲ್ಲಿ ತೀರ್ವನವಾಗಬೇಕು. ಹೀಗಾಗಿ ಈಗೇನು ಹಲವರ ಹೆಸರು ಕೇಳಿಬರುತ್ತಿದೆ, ಅವರೆಲ್ಲರೂ ಅಪರಾಧಿಗಳು ಎಂಬ ನಿರ್ಣಯಕ್ಕೆ ನಾವು ಜಂಪ್ ಆಗುವ ಅಗತ್ಯವಿಲ್ಲ. ಹಾಗೆಯೇ ಎಲ್ಲರೂ ನಿರಪರಾಧಿಗಳೆಂದೂ ನಿಷ್ಕರ್ಷೆಗೆ ಬರಬೇಕಿಲ್ಲ. ಈಗ ಆಗಬೇಕಿರುವುದು ನಿಷ್ಪಕ್ಷಪಾತ ತನಿಖೆ. ಆದರೆ, ಚಿತ್ರರಂಗವೂ ಸೇರಿದಂತೆ ಸಮಾಜದ ಎಲೈಟ್ ವಲಯಗಳಲ್ಲಿ ನಡೆಯುವ ಮೋಜುಮಸ್ತಿಗಳ ಬಗ್ಗೆ ಜನರಲ್ಲಿ ಕುತೂಹಲದ ಜತೆಗೆ ಒಂದು ಬಗೆಯ ತಿರಸ್ಕಾರ ಕೂಡ ಇರುವುದನ್ನು ಅಲ್ಲಗಳೆಯಲಾಗದು. ಅದೇ ಸಂದರ್ಭದಲ್ಲಿ, ಪ್ರಕರಣದಲ್ಲಿ ಕೇವಲ ನಟಿಯರನ್ನೇಕೆ ಟಾರ್ಗೆಟ್ ಮಾಡಲಾಗುತ್ತಿದೆ? ಬೇರೆ ನಟರು ಅಥವಾ ಇತರೆ ವಲಯದ ಸೆಲೆಬ್ರಿಟಿಗಳು ಮಾದಕವಸ್ತುಗಳ ಲೋಕದಲ್ಲಿ ಇಲ್ಲವೆ? ಎಂದು ಕೆಲ ನಟಿಯರೇ ಆಕ್ಷೇಪವೆತ್ತಿದ್ದಾರೆ. ಅವರು ಹೀಗೆ ಕೇಳುವುದರಲ್ಲಿ ಆಕ್ಷೇಪವೇನೂ ಇಲ್ಲ ಎನ್ನಿ. ಏಕೆಂದರೆ, ದುಶ್ಚಟಗಳ ವಿಷಯದಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಅದು ಎಲ್ಲರಿಗೂ ಹಾನಿಕಾರಕವೇ. ಆದರೂ ಮಹಿಳೆಯರು ಕೆಲ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಉದಾ: ಧೂಮಪಾನದ ಹವ್ಯಾಸವಿರುವ ಸ್ತ್ರೀ-ಪುರುಷ ಇಬ್ಬರಿಗೂ ವಿವಿಧ ಬಗೆಯ ಕ್ಯಾನ್ಸರ್, ಶ್ವಾಸಕೋಶ ತೊಂದರೆ ಇತ್ಯಾದಿ ರಿಸ್ಕ್ ಇದ್ದೇ ಇರುತ್ತದೆ. ಆದರೆ, ಧೂಮಪಾನಿ ಮಹಿಳೆ ಗರ್ಭಿಣಿಯಾದಾಗ ಆಕೆಯ ಜತೆಗೆ ಉದರದಲ್ಲಿರುವ ಭ್ರೂಣದ ಮೇಲೂ ದುಷ್ಪರಿಣಾಮ ಆಗುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.

    ಪುರುಷನಿಗೆ ಹೋಲಿಸಿದರೆ, ನಮ್ಮ ಸಮಾಜ ಮೊದಲಿಂದಲೂ ಹೆಣ್ಣಿಗೆ ಕೆಲ ಲಕ್ಷ್ಮಣರೇಖೆಗಳನ್ನು ಎಳೆದಿದೆ. ಇದಕ್ಕೆ ಕಾರಣಗಳು ಪ್ರತ್ಯೇಕ ಚರ್ಚೆಯ ವಿಚಾರ. ಮಹಿಳಾ ಸಮಾನತಾವಾದಿಗಳು ಇದನ್ನು ಪ್ರಬಲವಾಗಿ ವಿರೋಧಿಸುತ್ತಾರಾದರೂ, ಕುಟುಂಬ, ಸಮಾಜ ಮತ್ತು ಒಟ್ಟಾರೆ ದೇಶದ ಹಿತದೃಷ್ಟಿಯಿಂದ ಇಂಥ ‘ಅತಿಕ್ರಮಿಸಬಾರದ ರೇಖೆ’ ಅಗತ್ಯ ಎಂದು ವಾದಿಸುವ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ‘ಸದ್ಗುಣಗಳನ್ನು ಹೊಂದಿದ ಆದರ್ಶ ಹೆಣ್ಣು ಹೇಗಿರಬೇಕು?’ ಎಂಬುದಕ್ಕೆ ಈ ಶ್ಲೋಕವನ್ನು ಉದಾಹರಿಸಲಾಗುತ್ತದೆ:‘ಕಾರ್ಯುಷು ದಾಸೀ/ಕರಣೇಷು ಮಂತ್ರೀ/ಭೋಜ್ಯೇಷು ಮಾತಾ/ಶಯನೇಷು ರಂಭಾ/ರೂಪೇ ಚ ಲಕ್ಷ್ಮೀ ಕ್ಷಮಯಾ ಧರಿತ್ರೀ/ಷಟ್​ಕರ್ಮಯುಕ್ತಾ ಕುಲಧರ್ಮಪತ್ನೀ’. ಅಂಥ ಮಹಿಳೆಯರು ಮನೆಯನ್ನು ಬೆಳಗುತ್ತಾರೆ ಎಂಬುದು ನಿಸ್ಸಂಶಯ. ಹಾಗಾದರೆ ಈ ಆದರ್ಶ ಎನ್ನುವುದು ಪುರುಷರಿಗೂ ಇರಬೇಕಲ್ಲವೆ? ಇದೆ. ನಮ್ಮ ಧರ್ಮಶಾಸ್ತ್ರಗಳಲ್ಲಿ ಪುರುಷರಿಗೂ ಕಟ್ಟಳೆಯಿದೆ. ಕಾಮಂದಕೀಯ ನೀತಿಶಾಸ್ತ್ರದಲ್ಲಿ ‘ಉತ್ತಮ ಪುರುಷ’ನ ಲಕ್ಷಣಗಳನ್ನು ಹೀಗೆ ಹೇಳಲಾಗಿದೆ- ‘ಕಾರ್ಯುಷು ಯೋಗೀ ಕರಣೇಷು ದಕ್ಷಃ ರೂಪೇ ಚ ಕೃಷ್ಣಃ ಕ್ಷಮಯಾ ತು ರಾಮಃ | ಭೋಜ್ಯೇಷು ತೃಪ್ತಃ ಸುಖದುಃಖ ಮಿತ್ರಂ ಷಟ್ಕರ್ಮಯುಕ್ತಃ ಖಲು ಧರ್ಮನಾಥಃ||’. ಇದರ ಅರ್ಥವನ್ನು ಸ್ಥೂಲವಾಗಿ ಹೇಳುವುದಿದ್ದರೆ- ಪ್ರತಿಫಲಾಪೇಕ್ಷೆ ಇಲ್ಲದೆ ಯೋಗಿಯಂತೆ ಕಾರ್ಯಗೈಯಬೇಕು/ದಕ್ಷತೆ, ಸಂಯಮದಿಂದ ಕುಟುಂಬವನ್ನು ನಿರ್ವಹಿಸಬೇಕು/ಕೃಷ್ಣನಂತೆ ಸದಾ ಉತ್ಸಾಹ, ಸಂತೋಷ, ನಲಿವಿನಿಂದ ಇರಬೇಕು/ರಾಮನಂತೆ ಕ್ಷಮಾಗುಣ ಇರಬೇಕು, ಸಂಯಮಿಯಾಗಿರಬೇಕು/ತಾಯಿ ಅಥವಾ ಪತ್ನಿ ಸಿದ್ಧಪಡಿಸಿದ ಆಹಾರದ ಬಗ್ಗೆ ಟೀಕೆಟಿಪ್ಪಣಿ ಮಾಡದೆ, ಅಸಮಾಧಾನ ವ್ಯಕ್ತಪಡಿಸದೆ ತೃಪ್ತಿಯಿಂದ ಸೇವಿಸಬೇಕು/ಕುಟುಂಬ ಸದಸ್ಯರು ಮತ್ತು ಪತ್ನಿಯೊಂದಿಗೆ ಸ್ನೇಹಿತನಂತಿರಬೇಕು, ಅವರ ಸುಖದುಃಖಗಳಲ್ಲಿ ಭಾಗಿಯಾಗಬೇಕು.’ ಅಂದರೆ, ನೈತಿಕ ಮೌಲ್ಯಗಳ ವಿಷಯದಲ್ಲಿ ಲಿಂಗಭೇದಕ್ಕೆ ಅಥವಾ ತಾರತಮ್ಯಕ್ಕೆ ಅವಕಾಶವಿಲ್ಲ ಎಂಬುದು ದಿಟ. ಮೊದಲೇ ಏರುತಗ್ಗುಗಳಿಂದ ಕೂಡಿದ ಮಾರ್ಗದಲ್ಲಿ ಒಂದು ಚಕ್ರದ ಮೇಲೆ ಜೀವನರಥ ಸಾಗದಲ್ಲ? ಹೀಗಿದ್ದರೂ, ಮೊದಲೇ ಹೇಳಿದಂತೆ, ಈ ವಿಷಯವಾಗಿ ಸಮಾಜ ಮಹಿಳೆಯ ಮೇಲೆ ಹೆಚ್ಚು ಹೊಣೆಗಾರಿಕೆ ಮತ್ತು ನಿರೀಕ್ಷೆ ಇಟ್ಟಿರುತ್ತದೆ ಎಂಬುದು ಸರ್ವವೇದ್ಯ ವಿಚಾರ. ಶಂಕರಾಚಾರ್ಯರು ಘೋಷಿಸಿದರು: ‘ಕೆಟ್ಟ ಮಕ್ಕಳು ಜನಿಸಬಹುದು. ಆದರೆ ಎಂದಿಗೂ ಕೆಟ್ಟತಾಯಿ ಇರಲಾರಳು’. ಎಂಥ ಮಾತು! ಮಾತೃಸ್ಥಾನದ ಮೇಲೆ ಎಂಥ ವಿಶ್ವಾಸ! ಶತಶತಮಾನಗಳು ಗತಿಸಿದರೂ ಇದು ಕ್ಷಯಿಸದ ಸತ್ಯ. ಒಂದೊಮ್ಮೆ ಈ ವಿಶ್ವಾಸಕ್ಕೇನಾದರೂ ಚ್ಯುತಿ ಬಂದಲ್ಲಿ ಮನುಕುಲ ಹೀಗಿರದು ಎಂಬುದಂತೂ ಖರೆ.

    ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿ ಹೊರಗಡೆಯ ಜವಾಬ್ದಾರಿ ಪುರುಷನ ಮೇಲೆ ಹೆಚ್ಚಿಗೆ ಇರಬಹುದು. ಆದರೆ ಮನೆಯೊಳಗಿನ ವ್ಯವಹಾರದಲ್ಲಿ ಮಹಿಳೆಯದೇ ಅಧಿಕ ಹೊಣೆಗಾರಿಕೆ. ಮನೆಯ ನಲಿವು-ನೋವು ಎರಡಕ್ಕೂ ಆಕೆ ಕಾರಣವಾಗಬಲ್ಲಳು. ಆಕೆಯೇನಾದರೂ ಈ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದರೆ ಆ ಮನೆಯ ಏಳಿಗೆಯ ನಡೆಯೂ ಎಡವುತ್ತದೆ. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ/ಧರೆ ಹತ್ತಿ ಉರಿದಡೆ ನಿಲಲುಬಾರದು/ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ/ನಾರಿ ತನ್ನ ಮನೆಯಲ್ಲಿ ಕಳುವಡೆ/ತಾಯ ಮೊಲೆವಾಲು ನಂಜಾಗಿ ಕೊಲುವಡೆ/ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ’ ಎಂಬ ಬಸವಣ್ಣನವರ ವಚನದ ಧ್ವನಿಯನ್ನು ಆಧುನಿಕ ಕಾಲಘಟ್ಟ ಆಲಿಸಬೇಕಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ಕಮಲ ಅರಳೀತೆ…

    ಕೊನೇ ಮಾತು: ಎಲ್ಲ ವಲಯಗಳಲ್ಲಿ ಏರುದಿಕ್ಕಿನಲ್ಲಿ ಸಾಗಿರುವ ಮಹಿಳೆಯರ ಸಾಧನಾಪಯಣ ಎಲ್ಲೋ ಅಪವಾದಾತ್ಮಕ ಪ್ರಕರಣಗಳಿಂದಾಗಿ ಇಳಿಹಾದಿಗೆ ಇಳಿಯಲಾರದು ಎಂದು ಭರವಸೆಯಿಡಬಹುದು. ಏಕೆಂದರೆ, ಸವಾಲುಗಳಿಗೆ ಮುಖಾಮುಖಿಯಾಗಿ ಗೆಲುವಿನ ನಗೆಯನ್ನು ಬೀರುವುದು ಭಾರತೀಯ ಸ್ತ್ರೀಯರಿಗೆ ಅಭ್ಯಾಸಬಲ!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಗೃಹಿಣಿ ಸ್ಥಾನ ಉನ್ನತ, ನೆಮ್ಮದಿಯಿರಲಿ ಅನವರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts