More

    ಆಗಸ್ಟ್​ನಿಂದ ಸಬ್ಸಿಡಿ ದರದಲ್ಲಿ ಡೀಸೆಲ್

    ಸುಭಾಸ ಧೂಪದಹೊಂಡ ಕಾರವಾರ
    ಆಗಸ್ಟ್​ನಿಂದ ಮೀನುಗಾರರು ಸರ್ಕಾರದ ಇಂಧನ ಸಹಾಯಧನದ ಹಣಕ್ಕಾಗಿ ಕಾಯಬೇಕಿಲ್ಲ. ಅವರಿಗೆ ನೇರವಾಗಿ ಸಬ್ಸಿಡಿದರದಲ್ಲೇ ಡೀಸೆಲ್ ನೀಡುವ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಮೀನುಗಾರಿಗೆ ಇಲಾಖೆ ಪೂರ್ವ ತಯಾರಿ ನಡೆಸಿದೆ.
    ಇದುವರೆಗೆ ಬೋಟ್ ಮಾಲೀಕರು ಪೂರ್ಣ ಹಣಕೊಟ್ಟು ಡೀಸೆಲ್ ಖರೀದಿಸಬೇಕಿತ್ತು. ನಂತರ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಹಾಯಧನದ ಹಣ ಜಮಾ ಆಗುತ್ತಿತ್ತು. ಪಾವತಿ ಕೆಲವೊಮ್ಮೊ ಮೂರ್ನಾಲ್ಕು ತಿಂಗಳು ವಿಳಂಬವಾಗುವುದರಿಂದ ಮೀನುಗಾರರು ತೊಂದರೆಗೊಳಗಾಗುತ್ತಿದ್ದಾರೆ. ಅದನ್ನು ತಪ್ಪಿಸಿ ನೇರವಾಗಿ ಸಬ್ಸಿಡಿ ದರದಲ್ಲೇ ಡೀಸೆಲ್ ವಿತರಿಸಬೇಕು ಎಂಬ ಮೀನುಗಾರರ ಬೇಡಿಕೆಯನ್ನು 2021 ರ ಬಜೆಟ್​ನಲ್ಲಿ ಬಿ.ಎಸ್.ಯಡಿಯೂರಪ್ಪ ಈಡೇರಿಸಿದ್ದಾರೆ. ಸಬ್ಸಿಡಿ ದರದಲ್ಲೇ ಡೀಸೆಲ್ ನೀಡುವುದಾಗಿ ಘೋಷಿಸಿದ್ದಾರೆ.
    ಅದರಂತೆ ಜಿಲ್ಲೆಯ ಕರಾವಳಿಯಲ್ಲಿ ಸರ್ಕಾರದಿಂದ ಅನುಮೋದಿತ 13 ಡೀಸೆಲ್ ಬಂಕ್​ಗಳಿಗೆ ವಿಶೇಷ ಮೈಕ್ರೋ ಚಿಪ್ ಅಳವಡಿಸಲು ಯೋಜಿಸಲಾಗಿದೆ. ಇನ್ನು ಆಳ ಸಮುದ್ರ ಮೀನುಗಾರಿಕೆ ನಡೆಸುವ ಬೋಟ್​ಗಳ ಡೀಸೆಲ್ ಟ್ಯಾಂಕ್​ಗಳಿಗೂ ಚಿಪ್ ಅಳವಡಿಸಲಾಗುತ್ತದೆ. ಇದರಿಂದ ಮೀನುಗಾರಿಕೆ ಇಲಾಖೆಯಿಂದ ಎಲ್ಲ ಅನುಮೋದನೆ ಪಡೆದ ಬೋಟ್​ಗಳಿಗೆ ಮಾತ್ರ ಬಂಕ್​ಗಳಿಂದ ಸಬ್ಸಿಡಿ ಡೀಸೆಲ್ ವಿತರಣೆಗೆ ಸಾಧ್ಯವಾಗುತ್ತದೆ. ಸಬ್ಸಿಡಿ ಡೀಸೆಲ್​ನ ಅಪಬಳಕೆಗೆ ಅವಕಾಶವಿರುವುದಿಲ್ಲ. ಇಂಧನ ಸಹಾಯಧನ ಪಡೆಯುವ ಎಲ್ಲ ಬೋಟ್​ಗಳು ‘2 ವೇ ಕಮ್ಯುನಿಕೇಶನ್ ವ್ಯವಸ್ಥೆ’ಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅದರಿಂದ ಬೋಟ್ ಎಷ್ಟು ದಿನ ಸಮುದ್ರದಲ್ಲಿ ಎಲ್ಲೆಲ್ಲಿ ಓಡಾಟ ಮಾಡಿದೆ ಎಂಬ ದಾಖಲೆಯನ್ನೂ ಮೀನುಗಾರಿಕೆ ಇಲಾಖೆ ಕುಳಿತಲ್ಲೇ ಪರಿಶೀಲಿಸಬಹುದಾಗಿದೆ.
    ಎಷ್ಟು ಸಬ್ಸಿಡಿ..?:ಸದ್ಯ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮೇಲೆ ಮೀನುಗಾರರಿಗೆ 10 ರೂಪಾಯಿ 75 ಪೈಸೆ ಸಹಾಯಧನ ನೀಡುತ್ತಿದೆ. ಒಂದು ದೋಣಿಯ ಮಾಲೀಕ ಒಂದು ದಿನಕ್ಕೆ ದೋಣಿ ಓಡಾಟದ ಆಧಾರದ ಮೇಲೆ 70 ರಿಂದ 300 ಲೀಟರ್ ಡೀಸೆಲ್​ಗೆ ಸಬ್ಸಿಡಿ ಹಣ ಪಡೆದುಕೊಳ್ಳಬಹುದು. ಇನ್ನು ಮುಂದೆ ಸರ್ಕಾರ ಸಹಾಯಧನಕ್ಕಾಗಿ ಬೇರೆ ಅನುದಾನ ನೀಡುವ ಬದಲು ಡೀಸೆಲ್ ಮೇಲೆ ವಿಧಿಸುತ್ತಿದ್ದ ರಾಜ್ಯದ ಸೆಸ್​ನ್ನು ಕಡಿತ ಮಾಡಿ ಮೀನುಗಾರರಿಗೆ ವಿತರಣೆ ಮಾಡಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
    3 ಕೋಟಿಗೂ ಅಧಿಕ ಬಾಕಿ
    ಮತ್ಸ್ಯ ಕ್ಷಾಮ, ಡೀಸೆಲ್ ಬೆಲೆ ಹೆಚ್ಚಳ ಹಾಗೂ ಕಾರ್ವಿುಕರ ಕೊರತೆಯಿಂದ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾಡಿದ ಸಾಲ ಕಟ್ಟಲಾಗದೆ ಬೋಟ್​ಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ನಡುವೆ ಕಳೆದ ಜನವರಿಯಿಂದ ಮೀನುಗಾರರ ಖಾತೆಗೆ ಸರ್ಕಾರದಿಂದ ಬರುವ ಸಬ್ಸಿಡಿ ಹಣ ಕೂಡ ಜಮಾ ಆಗಿಲ್ಲ. ಜಿಲ್ಲೆಯಲ್ಲಿ 800 ಕ್ಕೂ ಅಧಿಕ ಬೋಟ್​ಗಳು ಡೀಸೆಲ್ ಸಬ್ಸಿಡಿ ಪಡೆಯಲು ಅರ್ಹವಾಗಿವೆ. ಆದರೆ, ಮೀನಿನ ಅಭಾವದಿಂದ ತಿಂಗಳಿಗೆ ಸರಾಸರಿ 200 ರಿಂದ 300 ಬೋಟ್​ಗಳು ಮಾತ್ರ ಸಮುದ್ರಕ್ಕೆ ಇಳಿದು ಮೀನುಗಾರಿಕೆ ನಡೆಸಿವೆ. ಅವುಗಳ ಮಾಲೀಕರಿಗೆ ಪ್ರತಿ ತಿಂಗಳಿಗೆ ಒಟ್ಟಾರೆ ಸರಾಸರಿ 1 ಕೋಟಿಯಷ್ಟು ಡೀಸೆಲ್ ಸಬ್ಸಿಡಿ ಜಮಾ ಆಗಬೇಕಿದೆ. ಸರ್ಕಾರದಿಂದ ಮಾರ್ಚ್​ವರೆಗಿನ ಹಣ ಬಿಡುಗಡೆಯಾಗಿದ್ದರೂ ವಿತರಣಾ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ವಿಳಂಬವಾಗುತ್ತಿದೆ. ‘2019 ರಲ್ಲಿ ಕೆ2 ಮೂಲಕ ಡೀಸೆಲ್ ಸಬ್ಸಿಡಿ ವಿತರಣೆಗೆ ಸೂಚಿಸಲಾಗಿತ್ತು. 2020 ರಲ್ಲಿ ಬೆನಿಫೀಷಿಯರಿ ಮ್ಯಾನೇಜ್​ವೆುಂಟ್ ಸಿಸ್ಟಂ(ಬಿಎಂಎಸ್)ಮೂಲಕ ಸಹಾಯಧನ ವಿತರಣೆಗೆ ಸೂಚಿಸಲಾಗಿತ್ತು. ಈ ವರ್ಷ ಡೈರೆಕ್ಟ್ ಬೆನಿಫೀಷಿಯರಿ ಟ್ರಾನ್ಸ್​ಫರ್(ಡಿಬಿಟಿ) ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಹಲವು ಹಂತಗಳಿದ್ದು, ಹಣ ವರ್ಗಾವಣೆಗೆ ಅಡಚಣೆಯಾಗುತ್ತಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜು.

    ಜನವರಿಯಿಂದ ಮಾರ್ಚ್​ವರೆಗಿನ ಡೀಸೆಲ್ ಸಬ್ಸಿಡಿ ಹಣ ಮಂಜೂರಾಗಿದ್ದರೂ ಡಿಬಿಟಿ ವ್ಯವಸ್ಥೆಯಲ್ಲಿ ಮೀನುಗಾರರ ಖಾತೆಗೆ ಹಣ ವರ್ಗಾಯಿಸಲು ತಾಂತ್ರಿಕ ಸಮಸ್ಯೆಯಾಗುತ್ತಿದೆ. ಇದನ್ನು ದೋಣಿಗಳ ಮಾಲೀಕರಿಗೆ ತಿಳಿಸಿದ್ದೇವೆ. ಸಮಸ್ಯೆ ಪರಿಹರಿಸಿ ಶೀಘ್ರ ಅವರಿಗೆ ಹಣ ವಿತರಿಸಲಾಗುವುದು. ಆಗಸ್ಟ್​ನಿಂದ ಮೀನುಗಾರರಿಗೆ ನೇರವಾಗಿ ಕರರಹಿತ ಡೀಸೆಲ್ ವಿತರಣೆ ಜಾರಿಗೆ ತರಲಾಗುತ್ತಿದೆ.
    ಪಿ.ನಾಗರಾಜು, ಕಾರವಾರ
    ಮೀನುಗಾರಿಕೆ ಇಲಾಖೆ ಉಪನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts