More

    ದಸರಾ ಮಹೋತ್ಸವದಲ್ಲಿ ಎರಡು ವರ್ಷದ ಬಳಿಕ ವಜ್ರಮುಷ್ಟಿ ಕಾಳಗ ಮೈನವಿರೇಳಿಸಲಿದೆ

    ಅವಿನಾಶ್ ಜೈನಹಳ್ಳಿ ಮೈಸೂರು
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ನೋಡುಗರ ಮೈನವಿರೇಳಿಸುವ ‘ವಜ್ರಮುಷ್ಟಿ ಕಾಳಗ’ಕ್ಕೆ ಎರಡು ವರ್ಷಗಳ ಬಳಿಕ ಅಖಾಡ ಸಿದ್ಧಗೊಳ್ಳುತ್ತಿದೆ.


    ಮಹಾಮಾರಿ ಕರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕೆ ಈ ಬಾರಿ ಜೀವಕಳೆ ಬಂದಿದೆ. ಅಂತೆಯೆ, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ವಜ್ರಮುಷ್ಟಿ ಕಾಳಗ’ವನ್ನು ಈ ಬಾರಿ ಎಂದಿನಂತೆ ಆಯೋಜಿಸಲು ಮೈಸೂರು, ಚಾಮರಾಜನಗರ, ಚನ್ನಪಟ್ಟಣದ ಉಸ್ತಾದ್‌ಗಳು ಮುಂದಾಗಿದ್ದಾರೆ. ‘ಸರಳ ದಸರಾ’ ಕಾರಣ ದೇವಮಲ್ಲ ಜಟ್ಟಿಗಳ ‘ವಜ್ರಮುಷ್ಟಿ ಕಾಳಗ’ ಎರಡು ವರ್ಷ ನಡೆದಿರಲಿಲ್ಲ. ಆದರೆ, ಈ ಬಾರಿ ಸಾಂಪ್ರದಾಯಿಕ ಕಾಳಗ ಆಯೋಜಿಸಲು ಅರಮನೆಯ ವಜ್ರಮುಷ್ಟಿ ಕಾಳಗದ ಉಸ್ತಾದ್‌ಗಳು ತೀರ್ಮಾನಿಸಿದ್ದಾರೆ.


    ದಸರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಪ್ರತಿವರ್ಷ ವಿಜಯದಶಮಿ ದಿನದಂದು ಯದುವಂಶದ ಅರಸರು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ಈ ಕಾಳಗ ನಡೆಯುತ್ತದೆ. ಅರಮನೆಯ ಕರಿಕಲ್ಲು ತೊಟ್ಟಿ ಅಂಗಳದಲ್ಲಿ ನಡೆಯಲಿರುವ ವಜ್ರಮುಷ್ಟಿ ಕಾಳಗದಲ್ಲಿ ನಾಲ್ವರು ಜಟ್ಟಿಗಳು ‘ವಜ್ರನಖ’ ಎಂಬ ಹರಿತವಾದ ಆಯುಧದೊಂದಿಗೆ ಕಾದಾಡಲಿದ್ದಾರೆ. ಕಾಳಗಕ್ಕೆ ನಿಗದಿ ಮಾಡಲಾಗಿರುವ ಸಮಯದಲ್ಲಿ ಜಟ್ಟಿಗಳ ಕುಲದೇವತೆ ನಿಂಬುಜಾಂಬೆಗೆ ಪೂಜೆ ಸಲ್ಲಿಸಿ, ಕೇಶಮುಂಡನ ಮಾಡಿಸಿಕೊಂಡ ಜಟ್ಟಿಗಳು ಮೈತುಂಬ ಕೆಂಪು ಮಣ್ಣು ಬಳಿದುಕೊಂಡು ಅಖಾಡದಲ್ಲಿ ರಕ್ತ ಚಿಮ್ಮಿಸಲಿದ್ದಾರೆ. ಬಳಿಕ ರಾಜವಂಶಸ್ಥರು ಬನ್ನಿ ಪೂಜೆಗೆ ತೆರಳುವುದು ಸಂಪ್ರದಾಯ.

    ಉಸ್ತಾದ್‌ಗಳಿಂದ ಸಿದ್ಧತೆ:
    ‘ವಜ್ರಮುಷ್ಟಿ ಕಾಳಗ’ ಆಯೋಜನೆಗೆ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ, ಉಸ್ತಾದ್ ಶ್ರೀನಿವಾಸ್ ಜಟ್ಟಿ, ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ, ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ, ಉಸ್ತಾದ್ ಧನರಾಜ್ ಜಟ್ಟಿ, ಚನ್ನಪಟ್ಟಣದ ಪುರುಷೋತ್ತಮ ಜಟ್ಟಿ ಸೇರಿದಂತೆ ಅರಮನೆಯ ವಜ್ರಮುಷ್ಟಿ ಕಾಳಗದ ಇತರ ಉಸ್ತಾದ್‌ಗಳು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಕಾಳಗ ಆಯೋಜಿಸುವ ಸಂಬಂಧ ಮುಂದಿನ ವಾರ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಅವರ ಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ, ಚರ್ಚೆಸಲು ಮುಂದಾಗಿದ್ದಾರೆ.

    ಜೋಡಿ ಆಯ್ಕೆ ಹೀಗೆ…:
    ಪ್ರತಿವರ್ಷ ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿ ಮಾತ್ರ ಕಾಳಗ ನಡೆಸುವ ಕಾರಣ ನಾಲ್ಕು ಜನರಿಗೆ ಮಾತ್ರ ಅವಕಾಶ ದೊರೆಯಲಿದೆ. ಕಾಳಗದಲ್ಲಿ ಭಾಗಿಯಾಗುವ ದೃಷ್ಟಿಯಿಂದ ಜಟ್ಟಿಗಳು ಅರಮನೆಯ ವಜ್ರಮುಷ್ಟಿ ಕಾಳಗದ ಎಲ್ಲ ಉಸ್ತಾದ್‌ಗಳ ಬಳಿ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ. ಕಾಳಗದಲ್ಲಿ ಸೆಣಸಲಿರುವ ಜಿಟ್ಟಿಗಳ ಜತೆ ಅರಮನೆ ಆವರಣದಲ್ಲಿಯೇ ಜೋಡಿ ಕಟ್ಟಲಾಗುತ್ತದೆ. ಸೆಣಸಾಟಕ್ಕೆಂದೇ ಅಭ್ಯಾಸದಲ್ಲಿ ತೊಡಗಿರುವವರ ಪೈಕಿ ನಾಲ್ಕು ಜಟ್ಟಿಗಳನ್ನು ಎತ್ತರ ಮತ್ತು ತೂಕದ ಆಧಾರದ ಮೇಲೆ ದೈಹಿಕವಾಗಿ ಸರಿಹೊಂದುವ ಎರಡು ಜೋಡಿಯನ್ನು ಜತೆ ಮಾಡಲಾಗುತ್ತದೆ. ಜೋಡಿ ಕಟ್ಟಿದ ಬಳಿಕ ಕಾಳಗದಲ್ಲಿ ಸೆಣಸಾಡುವ ಜೋಡಿಗಳನ್ನು ಅಂದೇ ರಾಜವಂಶಸ್ಥರಿಗೆ ಪರಿಚಯ ಮಾಡಿಸಲಾಗುತ್ತದೆ. ಬೆಂಗಳೂರು, ಮೈಸೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಒಬ್ಬೊಬ್ಬ ಜಟ್ಟಿಗೆ ಅವಕಾಶ ನೀಡಲಾಗುತ್ತದೆ.

    ಸಾವಿರಾರು ವರ್ಷಗಳ ಇತಿಹಾಸ:
    ಪ್ರಾಚೀನ ಸಮರಕಲೆಗಳಲ್ಲಿ ಒಂದಾದ ವಜ್ರಮುಷ್ಟಿ ಕಾಳಗಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಗುಜರಾತ್‌ನ ಪಠಾಣ್ ಜಿಲ್ಲೆ ಇದರ ತವರು. ಈ ಸಮರ ಕಲೆಯನ್ನು ಶ್ರೀಕೃಷ್ಣ-ಬಲರಾಮರು ಜಟ್ಟಿ ಸಮುದಾಯಕ್ಕೆ ಧಾರೆ ಎರೆದು ಕೊಟ್ಟರೆಂದು ಮಲ್ಲಪುರಾಣದಲ್ಲಿ ಉಲ್ಲೇಖ ಇದೆ. ಹಿಂದೆ ಮೈಸೂರಿನ ರಾಜರು ದಸರಾ ಮಹೋತ್ಸವಕ್ಕೆ ಸಾಮಂತ ರಾಜರು, ಸ್ನೇಹಿತರು, ಆಪ್ತರನ್ನು ಆಹ್ವಾನಿಸಿ ವಜ್ರಮುಷ್ಟಿ ಕಾಳಗ ಏರ್ಪಡಿಸುತ್ತಿದ್ದರು. ಸೈನಿಕರು ರಾಜನಿಗಾಗಿ ಪ್ರಾಣವನ್ನಾದರೂ ಅರ್ಪಿಸಲು ಸಿದ್ಧ ಎಂಬುದನ್ನು ಪರೋಕ್ಷವಾಗಿ ತಿಳಿಸುವುದು ಹಾಗೂ ಸೈನಿಕರ ರಾಜನಿಷ್ಠೆ ಎಷ್ಟಿದೆ ಎಂಬುದನ್ನು ತೋರ್ಪಡಿಸುವುದು ಇದರ ಉದ್ದೇಶವಾಗಿತ್ತು.

    ಮೂರು ವರ್ಷಗಳ ಹಿಂದಿನ ರೋಚಕತೆ:
    2019ರ ದಸರಾದಲ್ಲಿ ನಡೆದ ವಜ್ರಮುಷ್ಟಿ ಕಾಳಗ ರೋಚಕವಾಗಿತ್ತು. ಅಲ್ಲಿ ನೆರೆದಿದ್ದವರ ಎದೆ ಝಲ್ ಎನ್ನುವಂತೆ ಮಾಡಿತ್ತು. ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ಬಲರಾಮ ಜಟ್ಟಿ, ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ನರಸಿಂಹ ಜಟ್ಟಿ ನಡುವೆ ಹಾಗೂ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಗಿರೀಶ್ ಜೆಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಜೆಟ್ಟಿ ಶಿಷ್ಯ ನಾರಾಯಣ ಜಟ್ಟಿ ಅಖಾಡದಲ್ಲಿ ಕಾದಾಡಿದ್ದರು. ಆ ಪೈಕಿ ಬಲರಾಮ ಜಟ್ಟಿ, ಚನ್ನಪಟ್ಟಣದ ನರಸಿಂಹ ಜಟ್ಟಿ ನಡುವಿನ ಕಾಳಗ ರೋಚಕವಾಗಿತ್ತು.

    ಎಂದಿನಂತೆ ಈ ಬಾರಿ ವಜ್ರಮುಷ್ಟಿ ಕಾಳಗ ಆಯೋಜಿಸಲು ಮೈಸೂರು, ಚಾಮರಾಜನಗರ, ಚನ್ನಪಟ್ಟಣದ ಉಸ್ತಾದ್‌ಗಳು ತೀರ್ಮಾನಿಸಿದ್ದೇವೆ. ಈ ಸಂಬಂಧ ಶೀಘ್ರದಲ್ಲೇ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ.
    ಉಸ್ತಾದ್ ಬಂಗಾರ ಜಟ್ಟಿ

    ದಸರಾ ಮಹೋತ್ಸವದಲ್ಲಿ ಎರಡು ವರ್ಷದ ಬಳಿಕ ವಜ್ರಮುಷ್ಟಿ ಕಾಳಗ ಮೈನವಿರೇಳಿಸಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts