More

    ಕಡಬಕ್ಕೆ ಡಯಾಲಿಸಿಸ್ ಕೇಂದ್ರ, ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರ ಬೇಡಿಕೆ

    ಕಡಬ: ನೂತನ ತಾಲೂಕು ಕೇಂದ್ರ ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಸವಲತ್ತುಗಳು ಹಾಗೂ ತಜ್ಞ ವೈದ್ಯರು ಇಲ್ಲದೆ ಜನರು ಪರದಾಡುವಂತಾಗಿದೆ. ಮುಖ್ಯವಾಗಿ ಕಿಡ್ನಿ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವ ಕಡಬ ಪರಿಸರದ ರೋಗಿಗಳಿಗೆ ಅನುಕೂಲವಾಗುವಂತೆ ಕಡಬದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಬೇಕೆಂಬ ಆಗ್ರಹ ಕೇಳಿಬಂದಿದೆ.

    ಕಡಬದಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದೇ ಇರುವುದರಿಂದಾಗಿ ಈ ಭಾಗದ ಜನತೆ ದೂರದ ಪುತ್ತೂರು, ಬೆಳ್ತಂಗಡಿ, ಮಂಗಳೂರಿಗೆ ಡಯಾಲಿಸ್‌ಗಾಗಿ ತೆರಳಬೇಕಾಗುತ್ತದೆ. ಮೊದಲೇ ಅನಾರೋಗ್ಯದಿಂದ ಕಂಗಾಲಾಗಿರುವ ಬಡರೋಗಿಗಳಿಗೆ ದೂರದ ಪ್ರಯಾಣ ಮತ್ತು ಆರ್ಥಿಕ ಹೊರೆ ದೊಡ್ಡ ಸಮಸ್ಯೆ.
    ಪ್ರತಿ ರೋಗಿಯ ಡಯಾಲಿಸಿಸ್‌ಗೆ ಕನಿಷ್ಠ 4 ತಾಸು ಬೇಕಾಗಿದ್ದು, ಪುತ್ತೂರು, ಬೆಳ್ತಂಗಡಿ, ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಿದರೂ ವಾರಕ್ಕೆ 2 ಅಥವಾ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳು ತಮ್ಮ ಸರತಿಗಾಗಿ ತಡರಾತ್ರಿಯವರೆಗೂ ಕಾಯಬೇಕು.

    ಕಟ್ಟಡವಿದ್ದರೂ ವ್ಯವಸ್ಥೆಗಳಿಲ್ಲ: ಕಡಬದಲ್ಲಿ ಸುಮಾರು 5 ಕೋಟಿ ರೂ.ಗಳಿಗೂ ಮಿಕ್ಕಿ ಅನುದಾನ ವ್ಯಯಿಸಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಅಗತ್ಯ ತಜ್ಞ ವೈದ್ಯರ ನೇಮಕವಾಗಿಲ್ಲ. ಸಿಬ್ಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಈ ಆಸ್ಪತ್ರೆ ಕೇವಲ ತಲೆನೋವು, ಜ್ವರಗಳಿಗೆ ಔಷಧ ಮತ್ತು ಅಪಘಾತದ ಪ್ರಥಮ ಚಿಕಿತ್ಸೆಗಳಿಗೆ ಸೀಮಿತವಾಗಿದೆ.

    ಆಸ್ಪತ್ರೆ ಅವಲಂಬಿತರು ಹಲವರು: ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರುಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಬ್ರಹ್ಮಣ್ಯ, ಪಂಜ, ಏನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಕೂಡ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿದೆ.

    ಕಡಬ ಸಮುದಾಯ ಆಸ್ಪತ್ರೆ ಇನ್ನಷ್ಟೇ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿದೆ. ಆದರೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಕಡಬದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಬೇಕೆನ್ನುವ ಬೇಡಿಕೆಯನ್ನು ಸಚಿವರ ಮುಂದಿಡಲಾಗಿದೆ. ಅದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಡಯಾಲಿಸಿಸ್ ಯಂತ್ರ ನೀಡುವಂತೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೂ ಮಾತುಕತೆ ನಡೆಸಲಾಗಿದೆ.
    -ಎಸ್.ಅಂಗಾರ, ಶಾಸಕ

    ಕೋವಿಡ್ ಕಾರಣದಿಂದ ಹಿನ್ನಡೆ
    ಸಮುದಾಯ ಆಸ್ಪತ್ರೆಗಳಲ್ಲಿ ಕೂಡ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಬೇಕೆನ್ನುವ ಬೇಡಿಕೆಯನ್ನು ಈ ಹಿಂದೆ ಸರ್ಕಾರದ ಮುಂದಿಡಲಾಗಿತ್ತು. ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ತೀರಾ ಅಗತ್ಯವಿರುವ ಕಡೆ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವ ಪ್ರಸ್ತಾಪವಿತ್ತು. ಆದರೆ ಕೋವಿಡ್ ಕಾರಣದಿಂದ ಹಿನ್ನಡೆಯಾಗಿದೆ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts