More

    ವೈದ್ಯಾಧಿಕಾರಿ ಮೇಲೆ ಕ್ರಮಕ್ಕೆ ನಿರ್ಣಯ

    ಧಾರವಾಡ: ಜನರೊಂದಿಗೆ ದುರ್ವರ್ತನೆ ತೋರುತ್ತಿರುವ ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

    ನಗರದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ರವಿವರ್ಮ ಪಾಟೀಲ ನೇತೃತ್ವದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ಠರಾವು ಪಾಸ್ ಮಾಡಲಾಯಿತು. ಪಶುವೈದ್ಯಾಧಿಕಾರಿ ವರ್ತನೆ ಕುರಿತು ಸದಸ್ಯ ಸುರೇಂದ್ರ ದೇಸಾಯಿ ಮಾತನಾಡಿ, ಆಸ್ಪತ್ರೆಗೆ ಬರುವ ಜನರೊಂದಿಗೆ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಲ್ಲದೆ, ಅವರನ್ನು ವರ್ಗಾಯಿಸಿ ಬೇರೆ ವೈದ್ಯರನ್ನು ನಿಯೋಜಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಪಶು ವೈದ್ಯಾಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಠರಾವು ಪಾಸ್ ಮಾಡಿದರು. ಸದಸ್ಯ ಈರಪ್ಪ ಏಣಗಿ ಮಾತನಾಡಿ, ಕಳೆದ ವರ್ಷದ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದ್ದಕ್ಕೆ ಪರಿಹಾರ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ತಾರತಮ್ಯವೂ ಆಗಿದೆ. ಸಮೀಕ್ಷೆ ಸರಿಯಾಗಿ ಮಾಡದಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

    ಇದಕ್ಕೆ ದನಿಗೂಡಿಸಿದ ಉಳಿದ ಸದಸ್ಯರು, ಸಮಸ್ಯೆ ಸರಿಪಡಿಸಿ ಬೆಳೆ ಹಾನಿ ಪರಿಹಾರ ಜಮೆ ಆಗುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಫಕೀರವ್ವ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ಬುಡ್ಡಿಕಾಯಿ, ತಾಪಂ ಇಒ ಎಸ್.ಎಸ್. ಕಾದ್ರೊಳ್ಳಿ, ಅಧಿಕಾರಿಗಳು ಇತರರಿದ್ದರು.

    ಗಡಿಬಿಡಿಯಲ್ಲಿ ಸಭೆ: ಸಾಮಾನ್ಯ ಸಭೆಯಲ್ಲಿ ರ್ಚಚಿಸಲು ಸಾಕಷ್ಟು ವಿಷಯಗಳಿವೆ. ಆದರೆ, ಅಧ್ಯಕ್ಷರು ತರಾತುರಿಯಲ್ಲಿ ಇಲಾಖೆ ಮಾಹಿತಿ ಪಡೆಯುವ ಮೂಲಕ ಕಾಟಾಚಾರಕ್ಕೆ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಸದಸ್ಯೆ ಮಮ್ತಾಜ್ ಅಂಕಲಗಿ ಸೇರಿ ಇತರ ಸದಸ್ಯರು ಆರೋಪಿಸಿದರು.ಕ್ಷೇತ್ರದ ಸಮಸ್ಯೆಗಳ ಕುರಿತು ರ್ಚಚಿಸಲು ಅಧ್ಯಕ್ಷರು ಆಸ್ಪದ ನೀಡಿಲ್ಲ. ಇದಕ್ಕೆ ಇಒ ಸಾಥ್ ನೀಡಿದ್ದಾರೆ. ಊಟದ ವಿರಾಮದ ಬಳಿಕ ಯಾವ ಸದಸ್ಯರ ಗಮನಕ್ಕೂ ತರದೆ ಸಭೆ ಮುಕ್ತಾಯ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಕಾರ್ಯಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಮಮ್ತಾಜ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts