More

    ಸಹಕಾರ ಸಂಘದ ಅಕ್ರಮ ತನಿಖೆ ನಡೆಸುವಂತೆ ಧರಣಿ

    ಸಕಲೇಶಪುರ : ಕಸಬಾ ಪ್ರಾಥಮಿಕ ಸಹಕಾರ ಸಂಘದಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಎಂದು ಸಂಘದ ಕೆಲವು ಷೇರುದಾರರು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರೆ, ಸಂಘದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಆಡಳಿತ ಮಂಡಳಿ ಸುದ್ದಿಗೋಷ್ಠಿಯಲ್ಲಿ ಅದೇ ಸಮಯದಲ್ಲಿ ಸ್ವಷ್ಟನೆ ನೀಡಿದೆ.

    ಕಸಬಾ ಪ್ರಾಥಮಿಕ ಸಹಕಾರ ಸಂಘದ ಆಡಳಿತ ಮಂಡಳಿ ಸಹಕಾರದಿಂದಾಗಿ ಷೇರುದಾರ ಸಾಲಗಾರರಿಂದ ಖಾಲಿ ಚೆಕ್‌ಗೆ ಸಹಿ ಪಡೆದು ಸಾಲಗಾರರಿಗೆ ತಿಳಿಯದಂತೆ ಹೆಚ್ಚಿನ ಸಾಲ ಪಡೆದು ವಂಚಿಸಲಾಗಿದೆ. ಸುಮಾರು 400 ಸಾಲಗಾರರ ಹೆಸರಿನಲ್ಲಿ ಒಂದು ಕೋಟಿ ರೂ. ಗೂ ಹೆಚ್ಚಿನ ಸಾಲ ಪಡೆದು ವಂಚಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣಕ್ಕೆ ಜಾರಿಗೆ ಬರುವಂತೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಷೇರುದಾರರು ಸಂಘದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯಲ್ಲಿ ಹಲುಸುಲಿಗೆ ಗ್ರಾಪಂ ಅಧ್ಯಕ್ಷೆ ಶೋಭಾ ಕೆಂಪೇಗೌಡ, ಷೇರುದಾರರಾದ ಶಿವಕುಮಾರ್, ಯಖೂಬ್, ಮೀನಾಕ್ಷಿ, ರಂಗಪ್ಪ ಸೇರಿದಂತೆ ಹಲವರಿದ್ದರು.

    ಇತ್ತ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕಾಟಿ ನಾಗರಾಜ್, ಸಂಘದ ಅಭಿವೃದ್ಧಿ ಸಹಿಸದೆ ಇಲ್ಲದ ಆರೋಪ ನಡೆಸಲಾಗುತ್ತಿದೆ. ಚುನಾವಣೆಯ ಮೂಲಕ ಅಧಿಕಾರ ಹಿಡಿಯಲು ವಿಫಲರಾದ ಒಂದು ಗುಂಪು ಸೇರಿ ನಮ್ಮ ಆಡಳಿತ ಮಂಡಳಿಯ ತೇಜೋವಧೆಗಾಗಿ ಈ ರೀತಿಯ ಆರೋಪ ಮಾಡುತ್ತಿದೆ. ನಮ್ಮ ಆಡಳಿತದ ಅವಧಿಯ ಒಂದು ದಶಕದಲ್ಲಿ ಕೇವಲ ಮೂರು ಸಾವಿರ ರೂ. ಬಾಡಿಗೆ ಬರುತ್ತಿದ್ದ ಸಂಘವನ್ನು ಅಭಿವೃದ್ಧಿಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ 70 ಸಾವಿರ ರೂ.ಬಾಡಿಗೆ ಬರುವಂತೆ ಮಾಡಲಾಗಿದೆ ಎಂದರು.

    ಸಂಘ ಅಭಿವೃದ್ಧಿ ಪಥದಲ್ಲಿದ್ದು, ಶೀಘ್ರವೇ ಮತ್ತೊಷ್ಟು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಷೇರುದಾರರ ಹೆಸರಿನಲ್ಲಿ ಆಡಳಿತ ಮಂಡಳಿ ಸಾಲ ಪಡೆಯಲು ಸಾಧ್ಯವಿಲ್ಲ. ಸಂಘದ ಹೆಸರು ಕೆಡಿಸುತ್ತಿರುವವರ ವಿರುದ್ಧ ಮಾನನಷ್ಟ ಮೂಕದ್ದಮೆ ಹೊಡಲು ಚಿಂತನೆ ನಡೆಸಲಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ವಡ್ಡರಹಳ್ಳಿ ರಾಜು, ಈಶ್ವರ ಆಳ್ವ, ದೇವರಾಜ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts