More

    ಅಕ್ರಮ ಖಾತೆ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯಿಸಿ ಧರಣಿ

    ಮಳವಳ್ಳಿ: ತಾಲೂಕಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಭೂಗಳ್ಳರು ಖಾತೆ ಮಾಡಿಸಿಕೊಂಡಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಂಟಿಯಾಗಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ತಾಲೂಕು ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಶಾಮಿಲಾಗಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ತಾಲೂಕಿನ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಕಬಳಿಕೆಯಾಗಿದ್ದು, ಡಿ.ಹಲಸಹಳ್ಳಿ ವ್ಯಾಪ್ತಿಯಲ್ಲಿರುವ ಸರ್ವೇ ನಂ. 88, 93, 96ರಲ್ಲಿ ನೂರಾರು ಎಕರೆ ಅರಣ್ಯ ಭೂಮಿ ಪ್ರಭಾವಿ ರಾಜಕಾರಣಿಯ ಕೈವಶವಾಗಿದೆ ಎಂದು ಆರೋಪಿಸಿದರು.

    ಈ ಪ್ರಕರಣಗಳಲ್ಲಿ ನನ್ನನ್ನೂ ಸೇರಿದಂತೆ ಯಾವುದೇ ಪಕ್ಷದ ರಾಜಕಾರಣಿಗಳು ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕಬಳಿಕೆಯಾಗಿರುವ ಸರ್ಕಾರಿ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಈ ಅಕ್ರಮದಲ್ಲಿ ತಾಲೂಕು ಆಡಳಿತದ ಬಹಳಷ್ಟು ಅಧಿಕಾರಿಗಳು ಶಾಮೀಲಾಗಿದ್ದರೂ ಒಬ್ಬ ಅಧಿಕಾರಿಯ ಮೇಲಷ್ಟೇ ಕ್ರಮ ವಹಿಸುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದೆ. ನನ್ನ ಅವಧಿ ಸೇರಿದಂತೆ ಕಳೆದ 25 ವರ್ಷಗಳಿಂದ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸುವ ಮೂಲಕ ಭೂ ಹಗರಣವನ್ನು ಬಯಲಿಗೆಳಿದು ಭೂಗಳ್ಳರನ್ನು ಜೈಲಿಗಟ್ಟಬೇಕೆಂದು ಒತ್ತಾಯಿಸಿದರು.

    ಭೂ ಅಕ್ರಮದ ಸಂಬಂಧ ಶಾಸಕರು ನನಗೆ ಮಂಪರು ಪರೀಕ್ಷೆ ಮಾಡಿಸಬೇಕೆಂದು ಹೇಳಿದ್ದಾರೆ. ನಾನು ಅದಕ್ಕೆ ಸಿದ್ಧನಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲೂಕಿನಲ್ಲಿ ನೂರಾರು ಎಕರೆ ಅಕ್ರಮ ಖಾತೆಗಳಾಗಿವೆ. ಮೊದಲು ಹಾಲಿ ಶಾಸಕರಿಗೆ ಮಂಪರು ಪರೀಕ್ಷೆ ಮಾಡಿಸಿದರೆ ಎಲ್ಲ ಹಗರಣಗಳು ಬೆಳಕಿಗೆ ಬರಲಿವೆ ಎಂದರು.

    ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಸೀಲ್ದಾರ್ ಲೋಕೇಶ್ ಭೇಟಿ ನೀಡಿ ಧರಣಿನಿರತರಿಂದ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದ ನಂತರ ಧರಣಿ ಕೈ ಬಿಡಲಾಯಿತು.

    ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಕಂಸಾಗರ, ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಎಸ್‌ಸಿ, ಎಸ್‌ಟಿ ಘಟಕ ಕಾರ್ಯಾಧ್ಯಕ್ಷ ಕಾಂತರಾಜು, ಪುರಸಭಾ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಮಣಿ ನಾರಾಯಣ, ಭಾಗ್ಯಮ್ಮ ಅಂಕನಾಥ, ತಾಪಂ ಮಾಜಿ ಸದಸ್ಯ ಹನುಮಂತು, ಬಿಜೆಪಿ ರಾಜ್ಯ ಮುಖಂಡ ಯಮದೂರು ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಮಧು ಗಂಗಾಧರ್, ತಾಲೂಕು ಅಧ್ಯಕ್ಷ ಕೃಷ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts