More

    1947ರಲ್ಲಿ ಜನರು ಬದುಕಿದ್ದು ಕೇವಲ 32 ವರ್ಷವೇ?

    1947ರಲ್ಲಿ ಜನರು ಬದುಕಿದ್ದು ಕೇವಲ 32 ವರ್ಷವೇ?ಆಯುಸ್ಸು ದೀರ್ವಾಗಿರಬೇಕು ಎಂಬುದು ಪ್ರತಿ ವ್ಯಕ್ತಿಯ ಆಶಯವಾಗಿರುತ್ತದೆ. ಆಯುರ್ವೇದ ಹೇಳಿದ್ದೂ ಅದನ್ನೇ. “ಜೀವೇಮ ಶರದ ಶತಮ್​’ ಎನ್ನುವಾಗ ಕೇವಲ ನೂರುವರ್ಷ ಬದುಕಿ ಎಂಬುದಾಗಿ ಮಾತ್ರ ಭಾರತೀಯ ಪರಂಪರೆ ಹರಸಿದ್ದಲ್ಲ. ನರಳಾಟವಿಲ್ಲದೆ ಮರಣ ಪ್ರಾಪ್ತಿಯಾಗಬೇಕು, ರೋಗರುಜಿನಗಳ ತೊಂದರೆಯಿಲ್ಲದೆ ಜೀವನ ಸಾಗಬೇಕು ಎಂಬುದನ್ನು “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ’ ಎಂದು ಅಂತರಾಳದಿಂದ ಸ್ಪಷ್ಟಪಡಿಸಿದರು. ಆದರೆ ಇಲ್ಲೊಂದು ಸೋಜಿಗವಿದೆ. ಇಷ್ಟೆಲ್ಲ ಹೇಳಿದ ಆಯುರ್ವೇದದ ಮೂಲ ನೆಲದಲ್ಲೇ ಸ್ವಾತಂತ್ರ$್ಯದ ಕಾಲದಲ್ಲಿ ಜನರ ಸರಾಸರಿ ಜೀವಿತಕಾಲ ಕೇವಲ 32 ವರ್ಷ ಎಂದು ಅಂಕಿಅಂಶಗಳು ಹೇಳುತ್ತವೆ! ಎಲ್ಲಿಯ ನೂರು, ಎಲ್ಲಿಯ ಮೂವತ್ತೆರಡು? ಎಂದು ಆಯುರ್ವೇದವನ್ನು ಅಪಹಾಸ್ಯ ಮಾಡುವವರಿದ್ದಾರೆ. ಇದಕ್ಕೂ ಹಿಂದೆ ಸಾಗಿದರೆ ಕ್ರಿಸ್ತಶಕ 1882 ರಲ್ಲಿ ಭಾರತೀಯರ ಸರಾಸರಿ ಆಯಸ್ಸು ಕೇವಲ 25.44 ವರ್ಷಗಳು, 1920ರಲ್ಲಿ 24.86 ವರ್ಷಗಳು ಎಂದು ಮತ್ತದೇ ಅಂಕಿಅಂಶಗಳು ಹೇಳುತ್ತವೆ. ಅಲ್ಲಿಂದ ಮುಂದೆ 2021ರಲ್ಲಿ ಅದು 70.80 ವರ್ಷಕ್ಕೇರಿದೆ ಎನ್ನುವುದು ಸಂತಸದ ವಿಚಾರ. 1950ರ ಸುಮಾರಿಗೆ ಭಾರತೀಯರ ಸರಾಸರಿ ಬದುಕು 36.62 ವರ್ಷಗಳಾಗಿದ್ದರೆ ಜಗತ್ತಿನ ಎಲ್ಲಾ ಜನರ ಸರಾಸರಿಯೇ 46.98 ವರ್ಷಗಳಾಗಿತ್ತು! 1950 ರಲ್ಲೇ ಅಮೇರಿಕಾದವರು 63, ಆಸ್ಟ್ರೆಲಿಯಾದಲ್ಲಿ 69, ಇಂಗ್ಲೆಂಡ್​ನಲ್ಲಿ 69, ರಷ್ಯಾದಲ್ಲಿ 58, ಜಪಾನ್​ನಲ್ಲಿ 63, ಚೀನಾದಲ್ಲಿ 43, ಆಫ್ರಿಕಾದಲ್ಲಿ 37 ವರ್ಷಗಳ ಸರಾಸರಿ ಜೀವಿತಾವಧಿ ಇತ್ತು. 2015ರ ಹೊತ್ತಿಗೆ ಜಾಗತಿಕ ಸರಾಸರಿ 70.79 ಇದ್ದರೆ ಭಾರತದ್ದು 67.57 ವರ್ಷಗಳು. ನಮ್ಮ ರಾಷ್ಟ್ರವು ಇದೀಗ ವಿಶ್ವದ ಸರಾಸರಿಯ ಸನಿಹಕ್ಕೆ ಬಂದಿದ್ದರೂ ಹಿಂದೆ ನಮ್ಮದೇ ದೇಶದಲ್ಲೇಕೆ ಇದು ಕಡಿಮೆಯಾಗಿತ್ತೆಂಬ ವಿಷಯ ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

    ಹಾಗಿದ್ದರೆ ಸ್ವಾತಂತ್ರ$್ಯ ಕಾಲದಲ್ಲಿ ಬಹುತೇಕ ಜನರಿಗೆ 32 ವರ್ಷ ಪ್ರಾಯಕ್ಕಿಂತ ಹೆಚ್ಚುಕಾಲ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದು ನಾವೆಣಿಸಿದ್ದರೆ ಅದು ಮೂಢ ಚಿಂತನೆಯಾಗುತ್ತದೆ. ಸರಾಸರಿ ವಯಸ್ಸು ಕಡಿಮೆಯಾಗಿರಲು ಅತಿಮುಖ್ಯ ಕಾರಣವೆಂದರೆ ಅಂದಿನ ನವಜಾತ ಶಿಶುಗಳ ಮರಣಪ್ರಮಾಣ. ಭಾರತದಲ್ಲಿ 1990ರಲ್ಲಿ ಪ್ರತಿಶತ 53.4ರಷ್ಟು 5 ವರ್ಷದೊಳಗಿನ ಶಿಶುಗಳು ಮರಣ ಹೊಂದುತ್ತಿದ್ದವು! ಅಂದರೆ ಹುಟ್ಟಿದವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳಿಗೆ ಜೀವಿತಕಾಲವೇ ಇರಲಿಲ್ಲ! ಇಬ್ಬರು ಮಕ್ಕಳು ಹುಟ್ಟಿದಾಗ ಒಂದು ಮಗು ತಕ್ಷಣ ಅಸುನೀಗಿ ಇನ್ನೊಂದು ಮಗು ನೂರು ವರ್ಷ ಬಾಳಿಬದುಕಿದರೆ ಜೀವಿತ ಕಾಲದ ಸರಾಸರಿ ಕೇವಲ 50 ವರ್ಷವಾಗಿಬಿಡುತ್ತದೆ! ಆರಂಭದ ಹಂತವನ್ನು ಯಶಸ್ವಿಯಾಗಿ ದಾಟಿದರೆ ದೀರ್ಕಾಲ ಗಟ್ಟಿಮುಟ್ಟಾಗಿ ಬದುಕುವ ಕಲೆ ಭಾರತೀಯರಲ್ಲಿತ್ತು. 1945ರ ವೇಳೆಗೆ ಪ್ರತಿಶತ 26.25ರಷ್ಟು ಶಿಶುಗಳ ಮರಣ ಪ್ರಮಾಣವಿತ್ತು. ಇಂದು ನವಜಾತ ಶಿಶುಗಳ ಮರಣ ಪ್ರಮಾಣ ನೂರಕ್ಕೆ ಮೂರಕ್ಕಿಂತಲೂ ಕಡಿಮೆಯಿದ್ದು ಪ್ರತಿಶತ 2.87ರಷ್ಟಿದೆ!

    ಹಸುಗೂಸುಗಳ ಮರಣ ಪ್ರಮಾಣ ಯಾಕೆ ಅಂದು ಹೆಚ್ಚಾಗಿತ್ತು ಎಂಬುದಕ್ಕೂ ಅನೇಕ ಕಾರಣಗಳಿವೆ. ಹೆರಿಗೆಯಾಗಬೇಕಾದ ಕಾಲಕ್ಕೆ ವೈದ್ಯರ ಸಂಪರ್ಕ ಸುಲಭವಿರಲಿಲ್ಲ. ಮೊಬೈಲ್​ ಬಿಡಿ, ದೂರವಾಣಿ ವ್ಯವಸ್ಥೆಯೇ ಇಲ್ಲದ ಕಾಲವದು. ವಾಹನ ಸೌಕರ್ಯವೂ ಸರಿಯಾಗಿಲ್ಲದ ದಿನಗಳವು. ರಸ್ತೆಯ ಸಂಪರ್ಕ 4 ಲಕ್ಷ ಕಿಲೋಮೀಟರ್​ ಆಗ ಇದ್ದುದು ಈಗ 64 ಲಕ್ಷ ಕಿಲೋಮೀಟರ್​ ಗಳಾಗಿದೆ! ಹೋಗಲಿ, ಪ್ರಸವದ ಜ್ಞಾನ ಎಲ್ಲೆಡೆ ಇತ್ತೇ ಎಂದರೆ ಅದೂ ಇರಲಿಲ್ಲ. ಅಂದು ಸಾಕ್ಷರತೆಯ ಪ್ರಮಾಣ ಶೇ. 12. ಅದು 2018ರ ವೇಳೆಗೆ 77.7 ಪ್ರತಿಶತವಾಗಿತ್ತು ಎಂದು ರಾಷ್ಟ್ರೀಯ ಅಂಕಿಅಂಶಗಳ ಆಯೋಗ ಹೇಳುತ್ತದೆ.

    ಹಳ್ಳಿಗಳಲ್ಲೇ ಅಂದು ಹೆಚ್ಚು ಜನರು ಜೀವಿಸುತ್ತಿದ್ದರು. ನಗರ ಪ್ರದೇಶಗಳಲ್ಲಿ ಪ್ರತಿಶತ 17 ಜನರಿದ್ದರೆ ಇಂದು ದುಪ್ಪಟ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ! ವೈದ್ಯರ ಸಂಖ್ಯೆಯೂ ಕಡಿಮೆ. ಆಸ್ಪತ್ರೆಗಳು ಜಿಲ್ಲೆಗೊಂದೋ, ಎರಡೋ ಇದ್ದರೂ ಅಲ್ಲಿಗೆ ತಲುಪುವುದು ಸುಲಭವಿರಲಿಲ್ಲ. ಹೀಗೆ ಸಂಪರ್ಕದ ಅಲಭ್ಯತೆಯಿಂದಾಗಿಯೇ
    ಎಳೆಮಗುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಬಡತನದಿಂದಾಗಿಯೂ ಎಳವೆಯಲ್ಲೇ ಪ್ರಾಣಕಳೆದುಕೊಳ್ಳಬೇಕಾದ ದುಸ್ಥಿತಿ ಇಂದಿಗಿಂತ ಅಂದು ಅದೆಷ್ಟೋ ಹೆಚ್ಚಿತ್ತು. ಸರಿಯಾದ ಆಹಾರವಿಲ್ಲದೆ ಪ್ರತಿವರ್ಷ 7 ಲಕ್ಷಕ್ಕಿಂತಲೂ ಹೆಚ್ಚು 5 ವರ್ಷದೊಳಗಿನ ಮಕ್ಕಳು ಇಂದಿಗೂ ಅಸುನೀಗುತ್ತಿದ್ದಾರೆಂದರೆ ಅಂದಿನ ಸ್ಥಿತಿಯನ್ನು ಗ್ರಹಿಸಿಕೊಳ್ಳಬಹುದು. ಅಲ್ಲದೆ, ಸಾಂಕ್ರಾಮಿಕ ರೋಗಗಳು ಬಂದಾಗ ಶುಚಿತ್ವ ಪಾಲನೆ ಸಾಧ್ಯವಾಗದೆ ಹಾಗೂ ಸೂರೇ ಇಲ್ಲದ ಲಾಂತರ ಕುಟುಂಬಗಳಿಗೆ ಎಲ್ಲಾ ಹಸುಗೂಸುಗಳನ್ನೂ ಕಾಪಾಡಿಕೊಳ್ಳಲು ಆಗಲಿಲ್ಲ ಎಂಬುದೂ ವಾಸ್ತವ. ಇಂತಹ ಅಡೆತಡೆಗಳನ್ನು ಎಳವೆಯಲ್ಲಿ ದಾಟಿದವರು ಕೇವಲ ಜೀವಂತವಾಗಿರದೆ ಇಂದಿನವರಿಗಿಂತ ದೃಢಕಾಯರಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕಿದ್ದೂ ನಮ್ಮ ಕಣ್ಣೆದುರಿರುವ ಪರಮಸತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts