More

    ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ

    ಉಡುಪಿ: ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳಿಗೆ ಸ್ಪಂದಿಸಲು ಕಾಲ್‌ಸೆಂಟರ್ ತೆರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಸೂಚಿಸಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನೀರು ಕಡಿತಗೊಳಿಸುವ ನಿರ್ಣಯ ಕೈಗೊಳ್ಳುವ ಮೊದಲು ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯತತ್ಪರರಾಗಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಸ್ತುತ 90 ಮಂದಿ ಡಯಾಲಿಸಿಸ್‌ಗೆ ಒಳಪಡುತ್ತಿದ್ದು, 50 ಮಂದಿ ಕಾಯುವಿಕೆ ಪಟ್ಟಿಯಲ್ಲಿ ಇದ್ದಾರೆ ಎಂದು ಜಿಲ್ಲಾ ಸರ್ಜನ್ ತಿಳಿಸಿದರು. ಪ್ರತಿಕ್ರಿಯಿಸಿದ ಮಹೇಶ್ವರ ರಾವ್, ಜಿಲ್ಲೆಯಲ್ಲಿನ ಖಾಸಗಿ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯಿಂದ ಡಯಾಲಿಸಿಸ್ ಯಂತ್ರ ನೀಡಲು ಆಸಕ್ತಿ ತೋರಿದರೆ ಪರಿಶೀಲಿಸಿ. ಕಾರ್ಕಳದ ನೂತನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಅಳವಡಿಸಿ ಎಂದು ನಿರ್ದೇಶಿಸಿದರು. ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

    ನದಿ ನೀರು ಬದಲು ಹನಿ ನೀರಾವರಿ:
    ನದಿ ದಂಡೆಯಲ್ಲಿನ ರೈತರು ನದಿಯ ನೀರು ಬಳಸುವುದರ ಬದಲು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಕುರಿತಂತೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಸಿ, ಅವರ ಮನವೊಲಿಸುವಂತೆ ಮಾಡಬೇಕು ಎಂದು ಮಹೇಶ್ವರ ರಾವ್ ತಿಳಿಸಿದರು.

    ನೀರು ವಿತರಿಸಲು ಆ್ಯಪ್:
    ಬೇಸಿಗೆ ಸಮಯದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸುವ ಕುರಿತಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರ ಪ್ರಾಯೋಗಿಕ ಬಳಕೆ ಕುರಿತು ತಹಸೀಲ್ದಾರ್‌ಗಳಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

    ಪ್ರವಾಸೋದ್ಯಮ ಕಾಮಗಾರಿ ವೇಗ:
    ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಪಡುಕೆರೆ ಬೀಚ್‌ನಲ್ಲಿ ಲೈಟ್ ಅಳವಡಿಕೆ ಮತ್ತು ಕಾಪು ಲೈಟ್‌ಹೌಸ್ ಬಳಿ ಅಗತ್ಯ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಬೇಕು. ಜಿಲ್ಲೆಯಲ್ಲಿ ಮರಳು ಸಾಗಾಟ ಸಂದರ್ಭ ನಿಯಮ ಉಲ್ಲಂಘನೆಯಾಗಿರುವ ಪ್ರಕರಣಗಳ ಬಗ್ಗೆ ವಿವರ ಮಾಹಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.

    ಜಿಲ್ಲೆಯಲ್ಲಿ ಮಲೇರಿಯಾ ಮುಂತಾದ ರೋಗ ಹರಡುವಿಕೆ ನಿಯಂತ್ರಿಸಲು ಹೆಚ್ಚಿನ ಅರಿವು ಕಾರ್ಯಕ್ರಮ ಆಯೋಜಿಸಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸದ ಕಟ್ಟಡ ಮಾಲೀಕರಿಗೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುವಂತೆ ಹಾಗೂ ಈ ಬಗ್ಗೆ ನಗರಸಭೆಯ ಬೈಲಾದಲ್ಲಿ ಅಳವಡಿಸಿ, ಅಧಿಕಾರಿಗಳ ತಂಡ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು.
    – ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts