More

    ಸಾಲಮನ್ನಾದಿಂದ ರೈತರ ಅಭಿವೃದ್ಧಿ ಅಸಾಧ್ಯ

    ಹುಬ್ಬಳ್ಳಿ: ಸಾಲಮನ್ನಾ ಮಾಡಿದರೆ, ವಿಶೇಷ ಪ್ಯಾಕೇಜ್ ಘೋಷಿಸಿದರೆ ರೈತರ ಅಭಿವೃದ್ಧಿಯಾಗುವುದಿಲ್ಲ. ರೈತರು ತಮ್ಮ ಮನಃಸ್ಥಿತಿ ಬದಲಾಯಿಸಿಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಗಳನ್ನು ಬಳಸಿಕೊಳ್ಳ ಬೇಕು. ಹೊಸ ತಳಿ ಬೆಳೆಯ ಬೇಕು. ಸಮಗ್ರ ಕೃಷಿ ನೀತಿ ಅಳವಡಿಸಿ ಕೊಳ್ಳಬೇಕು. ಬೆಳೆದ ಬೆಳೆಯನ್ನು

    ಸಂಸ್ಕರಣೆ ಮಾಡಿ ಮಾರಾಟ ಮಾಡಬೇಕು. ಅಂದಾಗ ಮಾತ್ರ ಹೆಚ್ಚಿನ ಲಾಭ ಸಾಧ್ಯ ಎಂದು ಸಲಹೆ ನೀಡಿದರು.

    ಪ್ರತಿ ಬಿತ್ತನೆ ಸಮಯದಲ್ಲಿ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಮಣ್ಣು ಪರೀಕ್ಷೆಗೆಂದೇ ‘ಕೃಷಿ ಸಂಜೀವಿನಿ’ ಎಂಬ ಹೊಸ ಯೋಜನೆ ಜಾರಿಗೊಳಿಸಲಾಗಿದೆ. 155313 ಸಂಖ್ಯೆಗೆ ಕರೆ ಮಾಡಿದರೆ, ಕೃಷಿ ಅಧಿಕಾರಿಗಳು ರೈತರ ಜಮೀನಿಗೆ ಬಂದು ಮಣ್ಣು ಪರೀಕ್ಷೆ ಮಾಡುವರು. ಬೆಳೆಗಳಿಗೆ ಹುಳು ಹತ್ತಿದ್ದರೆ ಅದಕ್ಕೆ ಉಪಯೋಗಿಸುವ ರಾಸಾಯನಿಕ ಔಷಧಿಯ ಮಾಹಿತಿ ನೀಡುವರು ಎಂದರು.

    ಕೊಪ್ಪಳದಲ್ಲಿ 1.50 ಲಕ್ಷ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ನೀಡಲಾಗಿದೆ. ಈ ಚೀಟಿಯಲ್ಲಿ ರೈತನ ವಿವರ, ಆತನ ಕೃಷಿ ಭೂಮಿಯ ಸರ್ವೆ ಸಂಖ್ಯೆ, ಫೋಟೊ ಹಾಗೂ ಇತರ ವಿವರಗಳಿರುತ್ತವೆ. ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಯೋಚನೆ ಇದ್ದು, 68 ಲಕ್ಷ ರೈತರಿಗೆ ಯೋಜನೆಯ ಲಾಭ ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳದ ಹೆಚ್ಚುವರಿ ನೀರನ್ನು ಕೃಷಿ ಹಾಗೂ ಕುಡಿಯಲು ಬಳಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಜಲಧಾರೆ ಯೋಜನೆಯಡಿ ಮಲಪ್ರಭಾ ನದಿಯಿಂದ ಧಾರವಾಡ ಜಿಲ್ಲೆಯ 388 ಹಳ್ಳಿಗಳ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮೊರಬದ ನಾಡಕಚೇರಿಯಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಇದೀಗ ನವಲಗುಂದದಲ್ಲಿಯೂ ದೊರಕುತ್ತಿವೆ. ಶೆಲವಡಿಯಲ್ಲಿಯೂ ಈ ಸೌಲಭ್ಯ ಸಿಗುವಂತಾಗಬೇಕು. ಹಾಗಾದಲ್ಲಿ ರೈತರು ದಾಖಲೆ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ದೂರದ ಊರುಗಳಿಗೆ ಅಲೆದಾಡುವುದು ತಪು್ಪತ್ತದೆ ಎಂದರು.

    ಮಲಪ್ರಭಾ ನದಿಯಿಂದ ರೈತರ ಜಮೀನು ಹಾಗೂ ಮನೆಗಳಿಗೆ ನೀರು ಪೂರೈಸುವುದಕ್ಕಾಗಿ ಜಲಜೀವನ ಮಿಷನ್​ನಡಿ 1,700 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

    ಆತ್ಮ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ರೈತ ದಂಪತಿಗಳಿಗೆ 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ. ಚಿಕ್ಕನಗೌಡ್ರ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ನವಲಗುಂದ ತಾಪಂ ಅಧ್ಯಕ್ಷೆ ಅನ್ನಪೂರ್ಣ ಶಿರಹಟ್ಟಿಮಠ, ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕೃಷಿ ಇಲಾಖೆ ಆಯುಕ್ತ ಬ್ರಿಜೇಶಕುಮಾರ ದೀಕ್ಷಿತ, ನಿರ್ದೇಶಕ ಬಿ.ವೈ. ಶ್ರೀನಿವಾಸ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಕೃಷಿ ವಿವಿ ಉಪ ಕುಲಪತಿ ಡಾ. ಎಂ.ಬಿ. ಚೆಟ್ಟಿ ಹಾಗೂ ಇತರರಿದ್ದರು.

    ಕೃಷಿ ಸಚಿವರ ಭಾಷಣದ ಸಾರಾಂಶ

    ಕೃಷಿ ಇಲಾಖೆಯ ಜವಾಬ್ದಾರಿ ಸುಖದ ಸುಪ್ಪತ್ತಿಗೆ ಅಲ್ಲ.

    ರೈತರು ಆತ್ಮಹತ್ಯೆಯ ಮನೋಭಾವ ಬಿಡಬೇಕು. ಇರುವ ಜಮೀನಿನಲ್ಲಿಯೇ ಲಾಭ ಮಾಡಿಕೊಳ್ಳುವ ಕಲೆ ರೂಪಿಸಿಕೊಳ್ಳಬೇಕು.

    ಮೊಬೈಲ್ ಪೋನ್​ನಲ್ಲಿ ‘ಹಲೋ’ ಬದಲು ‘ಜೈ ಕಿಸಾನ್’ ಎಂದು ಹೇಳಿ

    ಧಾರವಾಡ ಜಿಲ್ಲೆಗೆ ಬರಬೇಕಿರುವ 2019-20ನೇ ಸಾಲಿನ 77 ಕೋಟಿ ರೂ. ಬೆಳೆವಿಮೆ ಪರಿಹಾರ ಮೊತ್ತ 10-15 ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಆಗಲಿದೆ.

    ಮಣ್ಣು ಪರೀಕ್ಷೆ ಸಂದರ್ಭದಲ್ಲಿ ಕೊರತೆ ಕಾಣುವ ಲವಣಾಂಶವನ್ನು ಮಾತ್ರ ಬಿತ್ತನೆ ಸಮಯದಲ್ಲಿ ಭೂಮಿಗೆ ಹಾಕಬೇಕು.

    ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.

    ಕೋವಿಡ್​ನಿಂದಾಗಿ ನಗರ ಪ್ರದೇಶದಿಂದ ಹಳ್ಳಿಗೆ ಬಂದಿರುವ ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಬೇಕು.

    ಧಾರವಾಡ ಜಿಲ್ಲೆಯ 8,709 ರೈತರಿಗೆ ಈಗಾಗಲೇ ತಾಡಪಾಲು ವಿತರಿಸಲಾಗಿದೆ. 4-5 ದಿನಗಳಲ್ಲಿ ಇನ್ನೂ 10 ಸಾವಿರ ತಾಡಪಾಲು ವಿತರಿಸಲಾಗುವುದು.

    ಕೈ ಮುಖಂಡನ ಮನೆಗೆ ಭೇಟಿ

    ನವಲಗುಂದದ ವಿವಿಧ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ಜಾವೂರ ಗ್ರಾಮದಲ್ಲಿ ಕಾಂಗ್ರೆಸ್​ನ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರ ಮನೆಗೆ ಏಕಾಏಕಿ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ತಾವು ಪೊಲೀಸ್ ಇಲಾಖೆಯಲ್ಲಿ ಇದ್ದಾಗಿನಿಂದ ಬಿ.ಆರ್. ಯಾವಗಲ್ ಆಪ್ತರು. ನವಲಗುಂದ ಪ್ರವಾಸದ ಬಗ್ಗೆ ತಿಳಿಸಿದಾಗ, ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಅವರ ಮನೆಯಲ್ಲಿ ಅಲ್ಪೋಪಹಾರ, ಚಹಾ ಸೇವಿಸಿದ್ದು, ರಾಜಕೀಯ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕೃಷಿ ಚಟುವಟಿಕೆಗಳಲ್ಲಿ ಕೌರವ

    ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮೊರಬ ಗ್ರಾಮದಲ್ಲಿ ರೈತ ಮಹಿಳೆಯರು ಪೂರ್ಣಕುಂಭದ ಸ್ವಾಗತ ನೀಡಿದರು. ಮೊರಬದಲ್ಲಿ ರೈತ ಸಂಪರ್ಕ ಕೇಂದ್ರದ ದಾಸ್ತಾನು ಮಳಿಗೆ, ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರ, ಕೃಷಿ ಯಂತ್ರಧಾರೆಗಳನ್ನು ಉದ್ಘಾಟಿಸಿದ ಸಚಿವರು, ಶಿರಕೋಳದ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಟ್ರಾ್ಯಕ್ಟರ್ ಚಾಲಿತ ಯಂತ್ರದ ಮೂಲಕ ಕತ್ತರಿಸಿದರು. ಕಬ್ಬನ್ನು ಶುಗರ್​ಕೇನ್ ತ್ರ್ಯಾಶ್ ಕಟ್ಟಿಂಗ್ ಟ್ರಾ್ಯಕ್ಟರ್​ನಿಂದ ಕತ್ತರಿಸಿ, ಮತ್ತೊಂದು ಜಮೀನಿನಲ್ಲಿ ನೇಗಿಲು ಹೊಡೆದರು. ಕೃಷಿ ಹೊಂಡದಲ್ಲಿ ಮೀನು ಮರಿಗಳನ್ನು ಬಿಡುವ ಮೂಲಕ ಮೀನು ಸಾಕಣಿಕೆಗೆ ಚಾಲನೆ ನೀಡಿದರು. ಜಾವೂರ ಹಾಗೂ ಅಳಗವಾಡಿ ಗ್ರಾಮಗಳಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿದರು. ಅಳಗವಾಡಿಯ ಜಮೀನಿನಲ್ಲಿ ಯಂತ್ರದ ಮೂಲಕ ಗೋಧಿ ಬೆಳೆ ಕಟಾವು ಮಾಡಿದರು. ಎಲ್ಲ ಚಟುವಟಿಕೆಗಳಲ್ಲಿ ಸಚಿವರು ಉತ್ಸಾಹದಿಂದಲೇ ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts