More

    ಅಭಿವೃದ್ಧಿ ಕೊಂಡಿಯಾಗಿ ಕೆಲಸ ಮಾಡುವೆ

    ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಅಭಿವೃದ್ಧಿ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದ್ದಾರೆ.

    ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಶನಿವಾರ ಬೆಳಗಾವಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನಗೆ ರಾಜ್ಯಸಭಾ ಸ್ಥಾನ ಸಿಕ್ಕಿರುವುದರಿಂದ ಬೆಳಗಾವಿ ಬಿಜೆಪಿಯಲ್ಲಿ ಹಾಗೂ ಯಾರಿಗೂ ಅಸಮಾಧಾನವಾಗಿಲ್ಲ ಎಂದರು.

    ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುವುದರ ಜೊತೆಗೆ ಕುಂದಾನಗರಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವೆ. ಬೆಳಗಾವಿ ಜಿಪಂ ಅಧ್ಯಕ್ಷನಾಗಿ ಕೆಲಸ ಮಾಡಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ರಾಜ್ಯಸಭೆಯ ಅನುದಾನ ಸರಿಯಾಗಿ ಸದ್ಬಳಕೆಯಾಗದೆ ವಾಪಸ್ ಹೋಗಿರುವ ಬಗ್ಗೆ ಉದಾಹರಣೆಗಳಿವೆ. ಆದರೆ, ನನ್ನ ಅವಧಿಯಲ್ಲಿ ಅನುದಾನ ವಾಪಸ್ ಹೋಗದಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.

    ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಘಟಕ ಅಧ್ಯಕ್ಷ ಶಶಿಕಾಂತ ಪಾಟೀಲ ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಇದ್ದರು.

    ಸಹಕಾರಿ ಕ್ಷೇತ್ರದಲ್ಲಿ ಬೆಳಗಾವಿಯ ಡಿಸಿಸಿ ಬ್ಯಾಂಕ್ ತನ್ನದೆಯಾದ ಕೊಡುಗೆ ನೀಡುತ್ತಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವರಿಷ್ಠರ ನಿರ್ಧಾರ ಅಂತಿಮವಾಗಿದೆ. ಬಿಜೆಪಿಯವರೇ ಅಧ್ಯಕ್ಷರಾಗುತ್ತಾರೆ. ಈ ಬಗ್ಗೆ ಯಾರೂ ಅನುಮಾನ ಪಡುವ ಅವಶ್ಯಕತೆಯಿಲ್ಲ.
    | ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts