More

    ಕರೊನಾಕ್ಕೆ ಲಾಕ್​ಡೌನ್ ಒಂದೇ ಪರಿಹಾರವಲ್ಲ

    ಕರೊನಾಕ್ಕೆ ಲಾಕ್​ಡೌನ್ ಒಂದೇ ಪರಿಹಾರವಲ್ಲ

    ಚಿಕ್ಕಮಗಳೂರು: ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ವೊಂದೇ ಪರಿಹಾರವಲ್ಲ, ಅಭಿವೃದ್ಧಿ ಕಾರ್ಯಗಳ ಜತೆಯಲ್ಲೇ ಕರೊನಾ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

    ರಾಕ್ಷಸ ಸ್ವರೂಪದ ಕರೊನಾ ಸಂಕಷ್ಟ ಇಂದು-ನಾಳೆಗೆ ಮುಗಿಯದು. ಎಲ್ಲಿವರೆಗೆ ಇರುತ್ತದೆ ಎಂದು ಹೇಳಲಾಗದು. ಪ್ರಾರಂಭದಲ್ಲಿ ಲಾಕ್​ಡೌನ್ ಮಾಡಿದೆವು. ಸ್ವಲ್ಪ ನಿಯಂತ್ರಣಕ್ಕೆ ಬಂತು. ಸಡಿಲಿಸಿದ ಕೂಡಲೇ ಮತ್ತೆ ಹೆಚ್ಚಾಯಿತು. ಈ ಕಾರಣಕ್ಕೆ ಈಗ ಅದರ ಚೈನ್​ಲಿಂಕ್ ಕತ್ತರಿಸುವ ಕೆಲಸ ಮಾಡಬೇಕಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈಗಳಲ್ಲಿ ಅಲ್ಲಿನ ಸರ್ಕಾರಗಳು ಕರೊನಾ ನಿಯಂತ್ರಣ ವಿಚಾರದಲ್ಲಿ ಕೈಚೆಲ್ಲಿವೆ. ಬೆಂಗಳೂರನ್ನು ಆ ಸ್ಥಿತಿಗೆ ತಲುಪಲು ನಾವು ಬಿಟ್ಟಿಲ್ಲ. ಅಲ್ಲಿಗೆ ಹೋಲಿಸಿದರೆ ಶೇ.10ರಷ್ಟು ಸಕ್ರಿಯ ಪ್ರಕರಣಗಳು ಮಾತ್ರ ನಮ್ಮಲ್ಲಿವೆ. ಆದರೂ ಮುಂದಿನ ಆರು ತಿಂಗಳು ಶ್ರಮವಹಿಸಿ ಸೇವೆ ಸಲ್ಲಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದರು.

    ಪ್ರತಿದಿನ ಸಿಎಂ ಮನೆಯಲ್ಲಿ ಎರಡರಿಂದ ಮೂರು ಗಂಟೆ ಚರ್ಚೆ ಆಗುತ್ತಲೇ ಇದೆ. ಶನಿವಾರ ಲಾಕ್​ಡೌನ್ ಮಾಡಬೇಕೆಂಬ ತೀರ್ಮಾನ ಆಗಿಲ್ಲ. ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿದ ಬಳಿಕ ಜು.7ರ ನಂತರ ಈ ಬಗ್ಗೆ ಮತ್ತೆ ಸಮಾಲೋಚಿಸಲಾಗುವುದು. ಕರೊನಾ ತೊಲಗಿಸಲು ದಾರಿ ಹುಡುಕುತ್ತಿದ್ದು, ಅದಕ್ಕಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದುವರೆಗೆ ಕರೊನಾ ನಿಯಂತ್ರಣಕ್ಕೆ ಕಂದಾಯ ಇಲಾಖೆಯಿಂದ ವಿಪತ್ತು ನಿರ್ವಹಣಾ ನಿಧಿಯ 385 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ 300 ಕೋಟಿ ರೂ. ಲಭ್ಯವಿದ್ದು, ಆರ್ಥಿಕ ಮುಗ್ಗಟ್ಟು ತಲೆದೋರದಂತೆ ನೋಡಿಕೊಳ್ಳಲಾಗುವುದು. ಬೇಗನೆ ಔಷಧ ಕಂಡುಹಿಡಿದರೆ ಕರೊನಾ ನಿರ್ವಹಣೆ ಸಾಧ್ಯ. ಅಲ್ಲಿಯವರೆಗೆ ಕರೊನಾ ಜತೆಗೆ ಬದುಕುವುದು ಹೇಗೆ? ಅಭಿವೃದ್ಧಿ ಹಾಗೂ ಜನಜೀವನ ಹೇಗೆ ನಡೆಯಬೇಕು ಎನ್ನುವ ಕುರಿತು ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದರು.

    ರಾಜ್ಯಾದ್ಯಂತ ಬಡವರಿಗೆ ಶೇ.30ರಷ್ಟು ಉದ್ಯೋಗ ನಷ್ಟವಾಗಿದೆ. ಶೇ.100 ರಷ್ಟು ಬಡವರ ಆರ್ಥಿಕ ಚಟುವಟಿಕೆ ಆರಂಭಿಸಲು ಪರಿಹಾರ ಮಾರ್ಗ ಹುಡುಕುತ್ತಿದ್ದೇವೆ. ಶೈಕ್ಷಣಿಕ ಪರಿಸ್ಥಿತಿ ಸ್ತಬ್ಧವಾಗಿದೆ. ಎಲ್ಲ ಸಚಿವರು, ಸರ್ಕಾರ ಹಾಗೂ ಅಧಿಕಾರಿಗಳು ಈಗಲೂ ಪೂರ್ತಿ ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ. ಅತಿವೃಷ್ಟಿ ನಂತರ ಕರೊನಾ ಮಹಾಮಾರಿ ಬಂದಿದೆ. ಇದರಿಂದ ಹೊರಬರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

    ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಕೆ: ರಾಜ್ಯದ ಜನರಿಗೆ ತೊಂದರೆಯಾಗದ ರೀತಿ ಕಾನೂನು ರೂಪಿಸಲು ಕೇಂದ್ರದ ಜತೆ ಸೇರಿ ಕೆಲಸ ಮಾಡಲಾಗುವುದು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಡೀಮ್್ಡ ಫಾರೆಸ್ಟ್ ಸಮಸ್ಯೆ ವಿಚಾರದಲ್ಲಿ ಸರ್ಕಾರ ಜನಪರವಾಗಿರುತ್ತದೆ. ಮಲೆನಾಡು ಸೇರಿ ರಾಜ್ಯದ ಬಯಲು ಪ್ರದೇಶದಲ್ಲೂ ಡೀಮ್್ಢ ಫಾರೆಸ್ಟ್ ಸಮಸ್ಯೆ ಇದೆ. ಮಹಾರಾಜರು ಸೇರಿ ನಂತರ ಬಂದ ಸರ್ಕಾರಗಳು ಸಹ ಕಂದಾಯ ಜಮೀನನ್ನು ಅರಣ್ಯ ಎಂದು ಆದೇಶ ಮಾಡಿಟ್ಟಿದ್ದಾರೆ. ಈಗ ಸಮಸ್ಯೆ ಆರಂಭವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಜನಪರವಾಗಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

    ಖಾಸಗಿ ವೈದ್ಯರಿಗೂ ವಿಮಾ ಸೌಲಭ್ಯ: ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯರಿಗೆ ವಿಮಾ ಸೌಲಭ್ಯ ಒದಗಿಸಲು ಮುಖ್ಯಮಂತ್ರಿ ತೀರ್ವನಿಸಿದ್ದಾರೆ. ಪತ್ರಕರ್ತರಲ್ಲಿ ಸೋಂಕು ಕಾಣಿಸಿಕೊಂಡರೆ ಚಿಕಿತ್ಸೆಗೆ ಪ್ರತ್ಯೇಕವಾದ ಆಸ್ಪತ್ರೆ ತೆರೆಯಲು ಸರ್ಕಾರ ನಿರ್ಧರಿಸಿದೆ. ಮಾಧ್ಯಮದವರ ಬಗ್ಗೆಯೂ ಜವಾಬ್ದಾರಿ, ಕಾಳಜಿ ಇದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts