More

    ಮತ್ತೆ ಚಿಗುರೊಡೆದ ಕೈಮಗ್ಗ, ನೇಕಾರರ ಸಂಖ್ಯೆಯಲ್ಲಿ ಏರಿಕೆ

    ನಿಶಾಂತ್ ಶೆಟ್ಟಿ ಕಿಲೆಂಜೂರು

    ಕಿನ್ನಿಗೋಳಿ: ಅಳಿವಿನಂಚಿನಲ್ಲಿರುವ ಕೈಮಗ್ಗ ಕ್ಷೇತ್ರ ಚಿಗುರೊಡೆಯುತ್ತಿದೆ. ಕೈಮಗ್ಗಗಳಲ್ಲಿ ತಯಾರಾಗುತ್ತಿರುವ ಸೀರೆಗೆ ಬೇಡಿಕೆ ಹೆಚ್ಚಿದೆ. ಎರಡು ವರ್ಷಗಳಿಂದ ಹಂತ ಹಂತವಾಗಿ ನೇಕಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೊಸ ತಲೆಮಾರಿನ ಪದವಿ, ಡಿಪ್ಲೊಮಾ ಪದವೀಧರರೂ ಕಲಿತು ಕೈಮಗ್ಗದಲ್ಲಿ ಸೀರೆ, ಶಾಲು, ಟವೆಲ್, ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಅಳಿವಿನಂಚಿನಲ್ಲಿದ್ದ ಕರಾವಳಿಯ ಕೈಮಗ್ಗಗಳಲ್ಲಿ ಹೊಸ ಹುರುಪು ಕಾಣಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ ಕಾರ್ಕಳದ ಕದಿಕೆ ಟ್ರಸ್ಟ್, ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿ 25-30 ವರ್ಷಗಳ ಹಿಂದೆ 500ಕ್ಕಿಂತಲೂ ಹೆಚ್ಚು ಕೈಮಗ್ಗಗಳಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕುಲಕಸುಬುಗಳಂತೆ ನೇಕಾರಿಕೆಯಿಂದ ಜನ ಹಿಮ್ಮುಖವಾಗಿ, ಹೆಚ್ಚು ಸಂಬಳ ಸಿಗುವ ಬೇರೆ ಉದ್ಯೋಗಗಳತ್ತ ಸಾಗಿದ್ದರು. 2018ರಿಂದ ಕಾರ್ಕಳದ ಕದಿಕೆ ಟ್ರಸ್ಟ್‌ನ ಸತತ ಪ್ರಯತ್ನದ ಫಲವಾಗಿ ನೇಕಾರಿಕೆ ಇದೀಗ ಮತ್ತೆ ಮರು ಜೀವ ಪಡೆಯುತ್ತಿದೆ.

    ಪದವೀಧರರೂ ನೇಕಾರಿಕೆಗೆ: ದಶಕಗಳ ಹಿಂದೆ ನೇಕಾರಿಕೆ ಮಾಡಿಕೊಂಡಿದ್ದ ಕೆಲವರು ಮತ್ತೆ ನೇಕಾರಿಕೆಯತ್ತ ಒಲವು ತೋರಿಸಿದಲ್ಲದೆ, ಎಂಎ, ಬಿಎಡ್ ಮಾಡಿ ಶಿಕ್ಷಕಿಯಾಗಿದ್ದ ಪಯಸ್ವಿನಿ ಕುಮಾರಿ, ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ನಲ್ಲಿ ಡಿಪ್ಲೊಮಾ ಮಾಡಿರುವ ಹರ್ಷಿತಾ ಕುಮಾರಿ, ಸಾಧನಾ, ಬಿಬಿಎಂ ಪದವೀಧರೆ ರೇಖಾ, ಬಿಎಸ್ಸಿ ಮಾಡಿರುವ ಅಕ್ಷತಾ, ಐಟಿಐ ಕಲಿತಿರುವ ದಿನೇಶ್ ಹೀಗೆ ಪದವೀಧರರೂ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಮಗ್ಗದ ಸೀರೆ, ಬಟ್ಟೆ ನೇಯುವ ತರಬೇತಿ ಪಡೆಯುತ್ತಿದ್ದಾರೆ. ನೇಕಾರಿಕೆಯನ್ನು ಕುಲಕಸುಬು ಮಾಡಿಕೊಂಡಿದ್ದ ಪದ್ಮಶಾಲಿ ಸಮಾಜದವರಷ್ಟೇ ಅಲ್ಲದೆ, ಇತರರೂ ನೇಕಾರಿಕೆ ಕಲಿಯಲು ಮುಂದಾಗಿರುವುದು ಉತ್ತಮ ಬೆಳವಣಿಗೆ.

    ಕರಾವಳಿಯಲ್ಲಿದ್ದಾರೆ 72 ನೇಕಾರರು: ಎರಡು ವರ್ಷಗಳ ಹಿಂದೆ ತಾಳಿಪಾಡಿ ನೇಕಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿದ್ದ ನೇಕಾರರ ಸಂಖ್ಯೆ 8. ಇದೀಗ 34ಕ್ಕೇರಿದೆ. ಕರಾವಳಿಯ ಉಭಯ ಜಿಲ್ಲೆಗಳಲ್ಲಿದ್ದ ಎಂಟು ನೇಕಾರರ ಸಹಕಾರ ಸಂಘಗಳಲ್ಲಿ ಮಿಜಾರು ಮುಚ್ಚಿದ್ದರೆ, ಬಸ್ರೂರು ಮತ್ತು ಮಂಗಳೂರಲ್ಲಿ ನೇಕಾರರಿಲ್ಲ. ಹಳೆಯಂಗಡಿ ಸಮೀಪದ ಪಡುಪಣಂಬೂರಿನಲ್ಲಿದ್ದ ಇಬ್ಬರಿಂದ 4ಕ್ಕೇರಿದೆ. ಶಿವಳ್ಳಿಯಲ್ಲಿ 5 ಮಂದಿಯಿಂದ 10ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ 10, ಬ್ರಹ್ಮಾವರದಲ್ಲಿ 5 ಹಾಗೂ ಮಂಗಳೂರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ 11 ನೇಕಾರರಿದ್ದಾರೆ. ಒಟ್ಟು 72 ನೇಕಾರರಿದ್ದಾರೆ. ತಿಂಗಳಿಗೆ ನೂರು ಸೀರೆ ತಯಾರಾಗುತ್ತಿವೆ. ನಬಾರ್ಡ್ ಸಹಕಾರದೊಂದಿಗೆ ಕದಿಕೆ ಟ್ರಸ್ಟ್ ಪ್ರಯತ್ನದಿಂದ ತಾಳಿಪಾಡಿ ಸಂಘದಲ್ಲಿ 25 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ.

    ಬಹು ವರ್ಷಗಳ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದ ನಮ್ಮ ಸಂಘದಲ್ಲಿ ಇತೀಚಿನ ವರ್ಷಗಳಲ್ಲಿ ನೇಕಾರಿಕೆ ಮುಚ್ಚುವ ಸಾಧ್ಯತೆ ಇತ್ತು. ಆದರೆ ಕದಿಕೆ ಟ್ರಸ್ಟ್‌ನ ಸತತ ಪ್ರಯತ್ನದಿಂದ ಇದೀಗ ಚಟುವಟಿಕೆ ಪುನರಾರಂಭವಾಗಿದೆ. ಯುವ ಪೀಳಿಗೆಯೂ ಇದರತ್ತ ಚಿತ್ತ ಹರಿಸಿದ್ದು ಹೆಮ್ಮೆ ಎನಿಸುತ್ತದೆ.

    ಮಾಧವ ಶೆಟ್ಟಿಗಾರ್
    ವ್ಯವಸ್ಥಾಪಕ ನಿರ್ದೇಶಕರು, ತಾಳಿಪಾಡಿ ನೇಕಾರರ ಸಹಕಾರಿ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts