More

    ಕಟ್ಟೆಹಾಡಿಯಲ್ಲಿ ಅಭಿವೃದ್ಧಿ ಪರ್ವ

    ಸುಂಟಿಕೊಪ್ಪ: ಹೋಬಳಿಯ 7ನೇ ಹೊಸಕೋಟೆಯ ಅತ್ತೂರು ನಲ್ಲೂರು ಗ್ರಾಮದಲ್ಲಿರುವ ಚಿಕ್ಲಿಹೊಳೆ ಬಳಿಯ ಕಟ್ಟೆಹಾಡಿಗೆ ಮೂಲಸೌಲಭ್ಯಗಳನ್ನು ಒದಗಿಸಲಾಗಿದ್ದು, ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದೆ.

    ಕೆಲ ವರ್ಷಗಳ ಹಿಂದೆ ಅರಣ್ಯದಂಚಿನಲ್ಲಿ ಗುಡಿಸಲು ಮತ್ತು ತಟ್ಟಿ ಕಟ್ಟಿಕೊಂಡು ವಾಸ ಮಾಡುತ್ತಿದ್ದ ನೂರಾರು ಕುಟುಂಬಗಳಿಗೆ ಮಾಧ್ಯಮ, ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಸತತ ಪ್ರಯತ್ನದಿಂದ ಮನೆ, ನೀರು, ವಿದ್ಯುಚ್ಛಕ್ತಿ ಕಲ್ಪಿಸಲಾಗಿದೆ.

    ಸಾಮಾನ್ಯವಾಗಿ ಹಾಡಿಗಳಲ್ಲಿನ ಗಿರಿಜನರ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಸಾಕಷ್ಟು ಋಣಾತ್ಮಕ ವಿಚಾರಗಳು ಕಾಣಸಿಗುತ್ತವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕಟ್ಟೆಹಾಡಿ ಇದೆ. ಇಲ್ಲಿಗೆ ಈಗ ಯಾರೇ ಭೇಟಿ ನೀಡಿದರೂ ಧನಾತ್ಮಕ ವಿಚಾರಗಳು ಕಾಣಸಿಗುತ್ತವೆ.

    36 ಕ್ಕೂ ಹೆಚ್ಚು ಕುಟುಂಬಗಳು ಈ ಹಾಡಿಯಲ್ಲಿ 8 ದಶಕಗಳಿಗಿಂತಲೂ ಹೆಚ್ಚುಕಾಲದಿಂದಲೂ ನೆಲೆಸಿವೆ. ಇವರು ಒಂದು ಕಾಲದಲ್ಲಿ ಹುಲಿನ ಜೋಪಡಿ, ಪ್ಲಾಸ್ಟಿಕ್ ಹೊದಿಕೆಯಿಂದ ಕೂಡಿದ ಗುಡಿಸಲು ನಿರ್ಮಿಸಿ ಬದುಕು ಸಾಗಿಸುತ್ತಿದ್ದರು. ಇವರ ವಾಸಿಸುವ ಸ್ಥಳದ ಮುಂಭಾಗದಲ್ಲೇ ಜಲಾಶಯವಿದ್ದರೂ ಶುದ್ಧ ಕುಡಿಯುವ ನೀರು ಉಪಯೋಗಿಸದಂತಹ ಪರಿಸ್ಥಿತಿ ಇತ್ತು. ಹುಲಿನ ಜೋಪಡಿಯಲ್ಲಿದ್ದ ಮನೆಗಳು ಮತ್ತು ಅಂಗನವಾಡಿ ಕೇಂದ್ರ ಈ ಹೆಂಚಿನ ಛಾವಣಿ ಹೊಂದಿದ ಮನೆಗಳಾಗಿ ರೂಪುಗೊಂಡಿವೆ. ಜತೆಗೆ ನೀರಿನ ಟ್ಯಾಂಕ್ ಇದ್ದು, ಕೆಲವರು ನಲ್ಲಿ ವ್ಯವಸ್ಥೆ ಮಾಡಿಕೊಂಡಿರುವುದು ವಿಶೇಷ. ಹಾಡಿ ಮಕ್ಕಳು ಅಂಗನವಾಡಿಯಿಂದ ಪದವಿ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವುದು ಇಲ್ಲಿ ಕಾಣಸಿಗುತ್ತದೆ.

    ಕಟ್ಟೆಹಾಡಿಯ ಪ್ರಮುಖರು, ಪೂಜಾರಿಯೂ ಆಗಿರುವ ಅಣ್ಣಯ್ಯ ಅವರ ಪ್ರಕಾರ, 2 ದಶಕಗಳ ಹಿಂದೆ ಮೂಲಸೌಕರ್ಯ ಎನ್ನುವುದು ಮರೀಚಿಕೆಯಾಗಿತ್ತು. ಆದರೆ ಈಕ ಕಾಲ ಬದಲಾಗಿದೆ. ಹಾಡಿಯಲ್ಲಿ ಪ್ರಮುಖ ದೇವಸ್ಥಾನ ಕೂಡ ಇದೆ. ಸಾಕಷ್ಟು ಜನರು ವಿದ್ಯಾವಂತರಾಗಿದ್ದು, ಬದಲಾವಣೆ, ಅಭಿವೃದ್ಧಿ ಎಂಬ ಗಾಳಿ ಬೀಸುತ್ತಿದೆ ಎಂದು ಅಭಿಮಾನದಿಂದ ನುಡಿದರು.

    ಈ ಹಿಂದೆ ಸೀಮೆಎಣ್ಣೆ ದೀಪದಲ್ಲಿ ಕಾಲ ಕಳೆಯುವಂತಾಗಿತ್ತು. ಆದರೆ ಈಗ ವಿದ್ಯುತ್ ದೀಪ ಬಂದಿದೆ. ಗಾರೆಯಿಂದ ನಿರ್ಮಿಸಿದ ಮನೆ, ಶೌಚಗೃಹವೂ ಇದೆ. ಬೀದಿ ದೀಪ, ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರು ಒಂದು ಕನಸು ನನಸಾಗಿದೆ. ನಮ್ಮ ಜನಾಂಗದ ಹೋರಾಟಗಾರಾರು, ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದವರ ಇಚ್ಛಾಶಕ್ತಿಯನ್ನು ಮರೆಯುವಂತಿಲ್ಲ ಎನ್ನುತ್ತಾರೆ ಹಾಡಿಯ ಅಭಿವೃದ್ಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲಿಂಗ

    ಇನ್ನು ಕಾರಣಾಂತರಗಳಿಂದ ಹಾಡಿಯ ಕೆಲವರಿಗೆ ಆಧಾರ್‌ಕಾರ್ಡ್ ಸಿಕ್ಕಿರಲಿಲ್ಲ. ಈಗ ಬಹುತೇಕರಿಗೆ ದೊರೆತಿದೆ. ಜತೆಗೆ ಕಾರ್ಯಕ್ರಮಗಳಿಗಾಗಿ ಸಮುದಾಯಭವನ್ನೂ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ತುರ್ತಾಗಿ ಅಂಗನವಾಡಿ ಕೇಂದ್ರವನ್ನು ಸ್ವಂತ ಕಟ್ಟಡದಲ್ಲಿ ತೆರೆಯಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಚಂದ್ರ ವಿಜಯವಾಣಿಗೆ ಮಾಹಿತಿ ನೀಡಿದರು.

    ಆನೆ ಸೇರಿದಂತೆ ಇತರ ವನ್ಯಪ್ರಾಣಿಗಳ ಹಾವಳಿ ಇಲ್ಲಿ ಹೆಚ್ಚಿದ್ದು, ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಕೆಲಸ ಆಗಬೇಕಿದೆ. ಬುದ್ಧಿ ತಿಳಿಯದ ವಯಸ್ಸಿನಿಂದಲೂ ಇಲ್ಲಿ ನೆಲೆಸಿದ್ದು, ಕೂಲಿ ಕೆಲಸ ಮಾಡಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದೇನೆ. ನಿತ್ಯ ಸಂಜೆ 3 ರಿಂದ 7 ರವರೆಗೆ ಆನೆಗಳು ಕಾಡಿನಿಂದ ಹಾಡಿಗೆ ಪ್ರವೇಶಿಸದಂತೆ ಕಾವಲು ಕಾಯುವ ಪರಿಸ್ಥಿತಿ ಇದ್ದು ವಿಶೇಷವಾಗಿ 3 ಆನೆಗಳು ನಿತ್ಯ ದಾಳಿ ನಡೆಸುತ್ತಿವೆ ಎಂದು ಹಾಡಿಯ ಹಿರಿಯ ರಾಜು ಅಳಲು ತೋಡಿಕೊಂಡರು.

    ಹಾಡಿಯ ಕೆಲವರಿಗೆ ಆಧಾರ್‌ಕಾರ್ಡ್ ದೊರಕಬೇಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ಆಧಾರ್ ಇಲ್ಲವಾದ್ದರಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ. ಜತೆಗೆ ಮತದಾರರ ಗುರುತಿನ ಚೀಟಿಯೂ ಕೆಲವರಿಗೆ ಸಿಕ್ಕಿಲ್ಲ. ಇಂತಹ ಸಣ್ಣ-ಪುಟ್ಟ ಸಮಸ್ಯೆಗಳನ್ನು ಪರಿಹರಿಸುವತ್ತ ಸಂಬಂಧಪಟ್ಟವರು ಗಮನರಿಸಬೇಕಿದೆ.

    ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಸಂದರ್ಭ ಹಾಡಿ ಜನರಿಗೆ ಕಂಬಳಿ ವಿತರಿಸಲಾಗಿತ್ತು. ಅಲ್ಲದೆ, ಈ ಜನಾಂಗದ ಮುಖಂಡರ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸುವ ನಿಟವಟಿನಲ್ಲಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿದ ಪರಿಣಾಮ ಕಟ್ಟೆಹಾಡಿ ಪ್ರಸ್ತುತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ನನ್ನ ಅಳಿಲು ಸೇವೆಯನ್ನು ಇಂದಿಗೂ ಸ್ಮರಿಸುತ್ತಿರುವುದು ನನಗೆ ಹೆಮ್ಮೆಯಿದೆ
    ಪಿ.ಎಂ.ಲತೀಫ್ ಜಿ.ಪಂ.ಮಾಜಿ ಸದಸ್ಯ

    ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಲವು ಹಾಡಿಗಳು ಬರಲಿವೆ. ನಮ್ಮ ವ್ಯಾಪ್ತಿಯ ಹಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಮೊದಲ ಆದ್ಯತೆ. ಅದೇ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ 5,000 ರೂ., ಪದವಿ ವ್ಯಾಸಂಗಕ್ಕೆ ತೆರಳುವ ಮಕ್ಕಳಿಗೆ 5,000 ರೂ., ಪರಿಶಿಷ್ಟ ಜನಾಂಗದವರು ಮರಣ ಹೊಂದಿದಲ್ಲಿ 5,000 ರೂ. ನೀಡಲಾಗುತ್ತದೆ
    ಸಿ.ಎಲ್.ವಿಶ್ವ ಗ್ರಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts