More

    ಐತಿಹಾಸಿಕ ಮದಗ ಕೆಂಚಮ್ಮನ ಕೆರೆ ಅಭಿವೃದ್ಧಿಪಡಿಸಿ

    ರಟ್ಟಿಹಳ್ಳಿ: ಶಿವಶರಣೆ ಕೆಂಚಮ್ಮಳ ತ್ಯಾಗ- ಬಲಿದಾನದಿಂದ ಮದಗದ ಕೆರೆ ನಿರ್ವಣವಾಗಿದೆ. ಕೆರೆಯ ಸುತ್ತ್ತನ ಪ್ರದೇಶ ಉತ್ತಮ ನೈಸರ್ಗಿಕ ಪರಿಸರ ಹೊಂದಿದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಸರ್ಕಾರ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಮಾಸೂರು ಗ್ರಾಮದ ಬಳಿ ಮದಗದ ಕೆಂಚಮ್ಮನ ಕೆರೆಗೆ ಮಂಗಳವಾರ ಬಾಗಿನ ಅರ್ಪಣೆ ನೆರವೇರಿಸಿ ಅವರು ಮಾತನಾಡಿದರು.

    ಐತಿಹಾಸಿಕ ಮದಗ ಕೆಂಚಮ್ಮನ ಕೆರೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕಾಗಿದೆ. ಸರ್ಕಾರದ ಇಚ್ಛಾಶಕ್ತಿಯ ಕೊರೆತೆಯಿಂದ ಐತಿಹಾಸಿಕ ಕೆರೆಯ ಬಗ್ಗೆ ಯಾರಿಗೂ ಪರಿಚಯವಿಲ್ಲದಂತಾಗಿದೆ. ಸರ್ಕಾರ ಮದಗ- ಮಾಸೂರು ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಇದರ ಇತಿಹಾಸ, ತ್ಯಾಗ- ಬಲಿದಾನದ ಬಗ್ಗೆ ಹಾಗೂ ನೀರಿನ ಅವಶ್ಯಕತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

    ಸರ್ಕಾರ ಸರ್ವಜ್ಞ ಪ್ರಾಧಿಕಾರಕ್ಕೆ 25 ಕೋಟಿ ರೂಪಾಯಿ ಮಾತ್ರ ಇಟ್ಟಿರುವುದು ಬೇಸರ ಮೂಡಿಸಿದೆ. ಕನಿಷ್ಠ 100 ಕೋಟಿ ರೂಪಾಯಿ ಮೀಸಲಿಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ವಜ್ಞನ ಬಗ್ಗೆ ತಿಳಿಸುವ ಕೆಲಸವಾಗಬೇಕು ಎಂದರು.

    ಕೆರೆಯಲ್ಲಿರುವ ನೀರು ದೇವರು ನೀಡಿದ ವರ. ಈಗ ಲಭ್ಯವಿರುವ ನೀರನ್ನು ಸರಿಯಾಗಿ ಉಳಿಸಿಕೊಂಡು ಹೋಗದೇ ಇದ್ದರೆ ಮುಂದಿನ ದಿನದಲ್ಲಿ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ವಣವಾಗುತ್ತದೆ. ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಂತರು, ಸಮಾಜ ಹಾಗೂ ಜನಪ್ರತಿನಿಧಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೆಚ್ಚಿನ ಹಣ ಖರ್ಚು ಮಾಡಿ ದೊಡ್ಡ ದೊಡ್ಡ ಅಣೆಕಟ್ಟು ಕಟ್ಟುವ ಅವಶ್ಯಕತೆ ಇಲ್ಲ. ಇರುವ ಕೆರೆಗಳನ್ನು ಉಳಿಸಿ, ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಸಾಕು. ಕೆರೆಗಳಿಗೆ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

    ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಗುರುಮೂಕಪ್ಪ ಶಿವಯೋಗಿಗಳ ಮಠದ ಹಿರಿಯ ಶ್ರೀಗಳಾದ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಪೀಠಾಧಿಪತಿ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಾವ್ಯಾ ಹಿತ್ತಲಮನಿ, ರೈತ ಮುಖಂಡ ಪರಮೇಶಪ್ಪ ಹಲಗೇರಿ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಪಿ.ಡಿ. ಬಸನಗೌಡ್ರ, ಷಣ್ಮುಖಪ್ಪ ಚಳಗೇರಿ, ಪ್ರಕಾಶ ಜೋಗಿಹಳ್ಳಿ, ರಾಜು ಸಿದ್ದಮ್ಮನವರ, ಮಲ್ಲೇಶಪ್ಪ ಗುತ್ತೆಣ್ಣನವರ, ವೀರನಗೌಡ ಪ್ಯಾಟಿಗೌಡ್ರ ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts