More

    ಸಮಗ್ರ ಕೃಷಿ ತರಲಿದೆ ಆದಾಯದ ಖುಷಿ

    ಚನ್ನಗಿರಿ: ಸಮಗ್ರ ಕೃಷಿ ಪದ್ಧತಿ ಜತೆಗೆ ಉಪ ಕಸುಬುಗಳನ್ನು ಕೈಗೊಳ್ಳುವ ಮೂಲಕ ರೈತರು ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
    ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಶೀತಲೀಕರಣ ಘಟಕ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ, ಕೃಷಿ ಪರಿಕರ ವಿತರಿಸಿ ಮಾತನಾಡಿದರು.
    ರಾಜ್ಯ ಸರ್ಕಾರ ಜೇನುಗೂಡು, ಗೊಬ್ಬರ, ಬೀಜಗಳಿಗೆ ಸಹಾಯಧನ ನೀಡುತ್ತದೆ. ಕಿಸಾನ್ ಸಮ್ಮಾನ್ ಸೇರಿ ಹತ್ತು ಹಲವು ಯೋಜನಗೆಳ ಮೂಲಕ ಕೃಷಿಕರ ಬದುಕಿಗೆ ಬೆನ್ನಲುಬಾಗಿ ನಿಂತಿದೆ ಎಂದರು.
    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 53 ಲಕ್ಷ ರೈತರಿಗೆ ಒಟ್ಟು 10 ಸಾವಿರ ರೂ. ನೀಡಲಾಗುತ್ತಿದ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳು ಓದಲು ಇದ್ದ ಮೀಸಲು ಪ್ರಮಾಣವನ್ನು ಶೇ.40- ಶೇ.50ಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು.
    ವಿದ್ಯಾನಿಧಿ ಯೋಜನೆ ಅನ್ವಯ 8-10ನೇ ತರಗತಿವರೆಗಿನ ಹೆಣ್ಣುಮಕ್ಕಳಿಗೆ 2ಸಾವಿರ ರೂ., ಪಿಯುಸಿ-ಸ್ನಾತಕೋತ್ತರ ಪದವಿವರೆಗೆ 11ಸಾವಿರ ರೂ. ನೀಡಲಾಗುತ್ತಿದೆ. ಮುಖ್ಯಮಂತ್ರಿ ವಿದ್ಯಾನಿಧಿ ಅಡಿ ರಾಜ್ಯದ 11 ಲಕ್ಷ ಮಕ್ಕಳಿಗೆ 483 ಕೋಟಿ ರೂ.ಸ್ಕಾಲರ್‌ಶಿಪ್ ನೀಡಲಾಗಿದೆ. ರೈತರಿಗೆ 1-5 ಎಕರೆವರೆಗೆ 10 ಲೀಟರ್ ಡೀಸೆಲ್‌ಗೆ 1250 ರೂ.ನಂತೆ 53 ಲಕ್ಷ ರೈತರಿಗೆ 430 ಕೋಟಿ ರೂ.ನೀಡಲಾಗಿದೆ ಎಂದು ಮಾಹಿತಿ ನೀಡಿದರು.
    ದೇಶದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತ ಶ್ರೀಮಂತರಿದ್ದಾರೆ. ಅವರಿಗೆ ಅನ್ನ ನೀಡುವ ಶಕ್ತಿ ಇಲ್ಲ. ದೇವರು ರೈತರಿಗೆ ಮಾತ್ರ ಈ ಶಕ್ತಿ ನೀಡಿದ್ದಾನೆ. ಕೃಷಿಯಲ್ಲಿ ಲಾಭವಿಲ್ಲ ಎಂದು ಹೇಳುವವರಿಗೆ ಬುದ್ಧಿಯಿಲ್ಲ ಎಂದರು. ಕೃಷಿ ಇಲಾಖೆಯಿಂದ ಚನ್ನಗಿರಿ ಕ್ಷೇತ್ರಕ್ಕೆ ಒಟ್ಟು 281 ಕೋಟಿ ರೂ. ನೀಡಲಾಗಿದೆ ಎಂದ ವಿವರಿಸಿದರು.
    2500 ಮೆ.ಟನ್ ಸಾಮರ್ಥ್ಯದ ಘಟಕ:
    ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ದೇವರಹಳ್ಳಿಯಲ್ಲಿ 9.50 ಕೋಟಿ ವೆಚ್ಚದಲ್ಲಿ ಶೀತಲ ಘಟಕ ನಿರ್ಮಿಸಲಾಗುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ರೈತರು ಬೆಳೆದ ಹಣ್ಣು, ತರಕಾರಿ, ಮೆಕ್ಕೆಜೋಳ ಸೇರಿ ಇತರೆ ಬೆಳೆಗಳನ್ನು ತಾಜಾ ಆಗಿಡಲು 2500 ಮೆಟ್ರಿಕ್ ಟನ್ ಸಾಮರ್ಥ್ಯದ ಈ ಘಟಕ ನೆರವಾಗಲಿದೆ ಎಂದರು. ಕೃಷಿಯಲ್ಲಿ ಸಾಧನೆ ಮಾಡಿದ ತಾಲೂಕಿನ ನಾಲ್ವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಗ್ರಾಪಂ ಸದಸ್ಯರಾದ ಡಿ.ಆರ್.ರಾಜಪ್ಪ, ಸಿ.ಡಿ.ಕರಿಯಪ್ಪ, ಕೆ.ಎಸ್.ಭೈರಪ್ಪ, ಆರ್.ಬಿ.ಸಿದ್ದಪ್ಪ, ಎ.ಆರ್.ರಂಗನಾಥ್, ಸಿ.ಆರ್.ತಿಮ್ಮಪ್ಪ, ಜಿ.ಎಸ್.ಶ್ರೀನಿವಾಸ್, ಹನುಮಂತಪ್ಪ, ರಾಕೇಶ್, ಎಂ.ಲಕ್ಷ್ಮಣಪ್ಪ, ಬಿ.ಆರ್.ಭೈರೇಶ್, ಸಿ.ಜಿ.ಪರಶುರಾಮ್, ಟಿ.ಶಿವಪ್ಪ, ಕೆ.ಆರ್.ಹಾಲೇಶ್, ತಾಪಂ ಮಾಜಿ ಅಧ್ಯಕ್ಷ ಎ.ಎಸ್.ಬಸವರಾಜ್, ಜಂಟಿ ಕೃಷಿ ನಿರ್ದೇಶಕ ವಿ.ಶ್ರೀನಿವಾಸ ಚಿಂತಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts