More

    4 ಕೋಟಿ ಖರ್ಚಾದರೂ ಭರ್ತಿಯಾಗದ ದೇವರಗುಡ್ಡದ ಕೆರೆ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಮಳೆಯಿಂದಾಗಿ ರಾಜ್ಯಾದ್ಯಂತ ಕೆರೆ ಕಟ್ಟೆಗಳು ನೀರು ತುಂಬಿಕೊಂಡು ಕೋಡಿ ಬೀಳುತ್ತಿವೆ. ಆದರೆ, ತಾಲೂಕಿನ ದೇವರಗುಡ್ಡದಲ್ಲಿರುವ 4 ಕೆರೆಗಳಲ್ಲಿ ಕೊಡ ನೀರು ಸಹ ಸಂಗ್ರಹವಾಗದ ಕಾರಣ ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಜೀವಜಲಕ್ಕಾಗಿ ಪರಿತಪಿಸುವ ಸ್ಥಿತಿ ನಿರ್ವಣವಾಗಿದೆ.

    ಗ್ರಾಮದ ಸುತ್ತಲೂ ಮಾಳವನಕಟ್ಟೆ ಕೆರೆ, ರಣದಮ್ಮನಕಟ್ಟೆ ಕೆರೆ, ಜ್ಯೋತಿಕಟ್ಟೆ ಕೆರೆ ಹಾಗೂ ಅಪ್ಪಚ್ಚಿಬಾವಿ ಎಂಬ ನಾಲ್ಕು ಕೆರೆಗಳಿವೆ. ಇವುಗಳಿಗೆ ನೀರು ತುಂಬಿಸುವ ಸಲುವಾಗಿ 5 ವರ್ಷದ ಹಿಂದೆಯೇ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್​ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ, ಈವರೆಗೂ ಕೆರೆಗೆ ಮಾತ್ರ ಹನಿ ನೀರು ಬಂದಿಲ್ಲ.

    ಸಮಸ್ಯೆ ಏನು…?:

    ಕೆರೆ ನೀರು ತುಂಬಿಸುವ ಯೋಜನೆ ಜಾರಿಯಾದ ಬಳಿಕ ಮಳೆಗಾಲದಲ್ಲಿ ಸುತ್ತಲಿನ ಗುಡ್ಡಗಾಡು ಪ್ರದೇಶದಿಂದ ಹರಿದು ಬರುತ್ತಿದ್ದ ನೀರಿನ ದಿಕ್ಕು ಬದಲಿಸಲಾಗಿದೆ. ಹೀಗಾಗಿ ಸುತ್ತಲಿನ ಪ್ರದೇಶದಲ್ಲಿ ಮಳೆಯಾದರೂ ಹನಿ ನೀರೂ ಕೆರೆಗೆ ಬಂದು ಸೇರುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಪೈಪ್​ಲೈನ್ ಅಲ್ಲಲ್ಲಿ ಒಡೆದಿರುವುದರಿಂದ ನೀರು ಅತ್ತಿತ್ತ ಹರಿದುಹೋಗುತ್ತಿದೆಯೆ ಹೊರತು ಕೆರೆಗೆ ತಲುಪುತ್ತಿಲ್ಲ.

    ಅಲ್ಲದೆ, ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿವೆ. ಹೀಗಾಗಿ ಕಾಲುವೆಯಿಂದ ಬರುವ ನೀರು ಹರಿಯಲು ಜಾಗವಿಲ್ಲದ ಸ್ಥಿತಿ ನಿರ್ವಣವಾಗಿದ್ದು, ಅಲ್ಲಲ್ಲಿ ಪೋಲಾಗಿ ರೈತರ ಜಮೀನು ಹಾಗೂ ಕಂದಕಕ್ಕೆ ಹರಿದು ಹೋಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

    ಬರದ ಪರಿಸ್ಥಿತಿ ನಿರ್ಮಾಣ

    ದೇವರಗುಡ್ಡ ಶ್ರೀಕ್ಷೇತ್ರ ಮಾಲತೇಶ ಸ್ವಾಮಿ ನೆಲೆಸಿರುವ ಗ್ರಾಮ. ಹುಣ್ಣಿಮೆ ಸಮಯದಲ್ಲಿ ಎತ್ತಿನ ಬಂಡಿ ಸಮೇತ ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಗ್ರಾಮದಲ್ಲಿ ಕುರಿ, ಮೇಕೆ, ಎಮ್ಮೆ, ಆಕಳು, ಎತ್ತುಗಳು ಸೇರಿ ಸಾವಿರಾರು ಪ್ರಾಣಿಗಳಿವೆ. ಅವುಗಳಿಗೆ ಗ್ರಾಮದ ಕೆರೆಗಳೇ ನೀರಿನ ಮೂಲವಾಗಿವೆ. ಆದರೀಗ ಮಳೆಗಾಲದ ಸಮಯದಲ್ಲೂ ಕೆರೆಗಳು ಖಾಲಿ ಇರುವ ಕಾರಣ ಪ್ರಾಣಿ, ಪಕ್ಷಿ ಸಂಕುಲಕ್ಕೆ ಕುಡಿಯಲು ಹನಿ ನೀರು ಸಹ ದೊರೆಯುತ್ತಿಲ್ಲ.

    ದೇವರಗುಡ್ಡದ ಕೆರೆಗಳಿಗೆ ನೀರು ಹರಿಸುವ ವಿಷಯದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟವರಿಗೆ ಸೂಚಿಸಿ, ಆದಷ್ಟು ಬೇಗ ಕೆರೆಗಳನ್ನು ತುಂಬಿಸಲು ಸೂಚಿಸಲಾಗುವುದು.

    | ಟಿ.ಆರ್. ಮಲ್ಲಾಡದ, ತಾಪಂ ಇಒ, ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts