More

    ನನ್ನ ಜೀವಕ್ಕೆ ಧಕ್ಕೆಯಾದರೆ ಜಿಲ್ಲಾಡಳಿತವೇ ಹೊಣೆ

    ವಿಜಯಪುರ: ಭೀಮಾತೀರ ಛೋಟಾ ಕಾಶ್ಮೀರ ಆಗಿದೆ, ಅಪರಾಧ ಕೃತ್ಯಗಳು ಹೆಚ್ಚುತ್ತಿವೆ, ಶಾಸಕರಿಗೇ ಜೀವ ಬೆದರಿಕೆ ಒಡ್ಡುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ಪೊಲೀಸ್ ಇಲಾಖೆ ಅಪರಾಧ ತಡೆಯುವಲ್ಲಿ ವಿಫಲವಾಗಿದೆ. ಡ್ರಗ್ಸ್, ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕಾಗಿಯೇ ನನಗಿಂದು ಜೀವ ಬೆದರಿಕೆ ಒಡ್ಡಿದ್ದಾರೆಂದು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ತಿಳಿಸಿದರು.
    ಜೀವ ಬೆದರಿಕೆ ಹಿನ್ನೆಲೆ ಗುರುವಾರ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಭೀಮಾತೀರದಲ್ಲಿ ದಿನೇ ದಿನೆ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಮನೆಯಿಂದ ಹೊರ ಹೋದ ವ್ಯಕ್ತಿ ಸಂಜೆ ಮರಳಿ ಬರುತ್ತಾನೆಂಬ ಭರವಸೆ ಇಲ್ಲ. ಅಷ್ಟೇ ಅಲ್ಲ, ಶಾಸಕರಿಗೇ ಜೀವ ಬೆದರಿಕೆ ಬರುತ್ತಿದ್ದರೂ ಹೆಚ್ಚಿನ ಭದ್ರತೆ ಸಿಗುತ್ತಿಲ್ಲವೆಂದವರು ಆರೋಪಿಸಿದರು.

    ವಾರದ ಹಿಂದೆ ನನಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಬ್ಬರು ಗನ್ ಮ್ಯಾನ್ ಸಹ ನೀಡಿದ್ದಾರೆ. ಆದರೆ, ರಾತ್ರಿ ಒಬ್ಬರೇ ಓಡಾಡುವ ಹಿನ್ನೆಲೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ. ನನ್ನ ಜೀವಕ್ಕೆ ಅಪಾಯವಾದರೆ ಅದಕ್ಕೆ ಪೊಲೀಸ್ ಮತ್ತು ಜಿಲ್ಲಾಡಳಿತವೇ ಕಾರಣ ಎಂದರು.

    ಕೆಲ ದಿನಗಳ ಹಿಂದೆ ಮಧ್ಯರಾತ್ರಿ 3 ಕ್ಕೆ ಮನೆ ಪಕ್ಕದಲ್ಲಿ ಶ್ರೀಗಂಧ ಮರ ಕಳ್ಳತನಕ್ಕೆ ಯತ್ನ ನಡೆಯಿತು. ಆದರೆ, ಅದು ನಿಜವಾದ ಕಳ್ಳತನ ಅಂತ ಅನ್ನಿಸುತ್ತಿಲ್ಲ. ಅದರ ಹಿಂದೆ ಬೇರೆಯದೇ ಸಂಚು ಕಾಣಿಸುತ್ತಿದೆ. ಏಕೆಂದರೆ ಅವರು ಕಳ್ಳತನ ಮಾಡಿ ಹೋಗದೆ ನಮ್ಮ ಮನೆ ಆವರಣಕ್ಕೆ ಬಂದಿದ್ದಾರೆ. ನಾನು ವಿಚಾರಿಸಿದಾಗ ನನ್ನನ್ನೇ ನೋಡಲು ಬಂದಿದ್ದಾಗಿ ಹೇಳಿದರು. ಗುಂಡು ಹೊಡೆದು ಸಾಯಿಸುವುದಾಗಿ ಹೆದರಿಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಲಾಗಿ ಓಡಿ ಹೋದರು. ಇದಕ್ಕೂ ಮುನ್ನ ಹಂಚನಾಳ ತಾಂಡಾ ಬಳಿ ನಮ್ಮ ತಾಂಡಾದವರನ್ನು ಕರೆದು ಸಂಪೂರ್ಣ ಮಾಹಿತಿ ಕಲೆ ಹಾಕಿದರು. ನಾವು ಮಹಾದೇವ ಸಾಹುಕಾರ ಕಡೆಯವರು, ನಿಮ್ಮ ಶಾಸಕನಿಗೆ ಹೊಡೆಯುತ್ತೇವೆ. ಎಷ್ಟು ದಿನ ಗನ್ ಮ್ಯಾನ್‌ಗಳನ್ನಿಟ್ಟುಕೊಂಡು ತಿರುಗುತ್ತಾನೋ ನೋಡುತ್ತೇವೆಂದು ಹೆದರಿಕೆ ಹಾಕಿದ್ದಾರೆ.
    ಈ ಹಿಂದೆ ನಾನು ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ ತಡೆಯಲು ಶ್ರಮಿಸಿದ್ದು ಅದೇ ದ್ವೇಷದಿಂದ ಈ ಕೃತ್ಯ ನಡೆಯುತ್ತಿದೆ ಎಂದೆನಿಸುತ್ತಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕಾನೂನು ಬಾಹಿರ ಕೃತ್ಯ ನಡೆಯುತ್ತಿವೆ. ಹೀಗಾಗಿ ಭಯ ಹೆಚ್ಚಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇನೆಂದು ಚವಾಣ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts