More

    ಮನೋಲ್ಲಾಸ: ದೇವಕೀ ಪರಮಾನಂದಂ…

    | ಸುಬ್ರಹ್ಮಣ್ಯ ಸೋಮಯಾಜಿ

    ಶ್ರೀಕೃಷ್ಣ ಜನ್ಮದ ಪವಿತ್ರ ಸಂದರ್ಭ. ಕಂಸನ ಕಾರಾಗೃಹದ ಅಂಧಕಾರದಲ್ಲಿ ಝುಗಮಗಿಸುವ ಬೆಳಕಿನ ಆವಿರ್ಭಾವ. ವಸುದೇವ ದೇವಕಿಯರ ಮುಂದೆ ತನ್ನ ಸಕಲ ವೈಭವಗಳೊಂದಿಗೆ ಭಗವಂತನು ಜನ್ಮತಾಳಿದನು. ವಸುದೇವನು ಆ ಅದ್ಭುತರೂಪಿಯಾದ ಬಾಲಕನನ್ನು ಹೀಗೆ ನೋಡಿದನು-ಅವನು ಕಮಲದ ಕಣ್ಣುಗಳಿಂದ ಕೂಡಿದ್ದನು. ಚತುರ್ಭಜಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿದ್ದನು. ವಕ್ಷಸ್ಥಳದಲ್ಲಿ ಸುಂದರವಾದ ಶ್ರೀವತ್ಸಮಚ್ಚೆ. ಕತ್ತಿನಲ್ಲಿ ಝುಗಝುಗಿಸುವ ಕೌಸ್ತುಭಮಣಿ. ಶ್ಯಾಮಲವರ್ಣದಿಂದ ಕಂಗೊಳಿಸುತ್ತಿದ್ದ ಸುಂದರ ಶರೀರವು ಪೀತಾಂಬರದಿಂದ ಅಲಂಕೃತವಾಗಿತ್ತು. ವೈಢೂರ್ಯಮಣಿಖಚಿತವಾದ ಕಿರೀಟ, ಮತ್ತು ಕರ್ಣಕುಂಡಲಗಳ ಕಾಂತಿಯಿಂದ ಬೆಳಗುತ್ತಿದ್ದ ಅವನ ಕೂದಲುಗಳು ಸೂರ್ಯಕಿರಣಗಳಂತೆ ಪ್ರಕಾಶಿಸುತ್ತಿದ್ದವು. ಇಂತಹ ಭಗವಂತನನ್ನು ವಸುದೇವನು ನೋಡಿದನು ಎಂದು ಭಾಗವತ ವರ್ಣಿಸುತ್ತದೆ.

    ಹಾಗೆಯೇ ಅದೇ ಸಮಯದಲ್ಲಿ ದೇವಕಿಯೂ ಅವನನ್ನು ನೋಡಿದಳು. ವಸುದೇವನು ನೋಡಿದ ವೈಭವವೆಲ್ಲವೂ ಅವಳ ಮುಂದೆಯೂ ಇದ್ದಿತ್ತಾದರೂ ಅವಳು ನೋಡಿದ ಮತ್ತು ಅರುಹಿದ ಭಗವಂತನ ಸ್ವರೂಪ ಹೀಗಿತ್ತು- ‘ಪ್ರಭುವೇ! ಯಾವ ನಿನ್ನ ದಿವ್ಯ ರೂಪವನ್ನು ಯೋಗಿಗಳು ಅವ್ಯಕ್ತವೆಂದೂ, ಆದಿಕಾರಣವೆಂದೂ, ಬ್ರಹ್ಮವಸ್ತುವೆಂದೂ, ಜ್ಯೋತಿಯೆಂದೂ, ನಿರ್ಗಣ-ನಿರ್ವಿಕಾರವೆಂದೂ, ನಿರ್ವಿಶೇಷವೆಂದೂ, ಈಹಾರಹಿತನೆಂದೂ ಹೊಗಳುವರೋ ಅಂತಹ ಅಧ್ಯಾತ್ಮಕ್ಕೆ ದೀಪಪ್ರಾಯನಾದ ಸಾಕ್ಷಾತ್ ವಿಷ್ಣುವೇ ಆಗಿರುವೆ’ ಎನ್ನುತ್ತಾಳೆ.

    ಶ್ರೀರಂಗ ಮಹಾಗುರುಗಳು ಈ ಎರಡು ದೃಷ್ಟಿಗಳಲ್ಲಿನ ವ್ಯತ್ಯಾಸವನ್ನು ಬಹಳ ಸುಂದರವಾಗಿ ತಿಳಿಸಿದ್ದರು. ‘ವಸುದೇವನಿಗೆ ಭಗವಂತನ ಹೊರ ವೈಭವಗಳೆಲ್ಲವೂ ಕಾಣಿಸಿ ಅದನ್ನೇ ಅವನು ಅನುಭವಿಸಿದನು. ಆದರೆ ದೇವಕಿಯ ಕಣ್ಣು ತಪಸ್ಸಿನಿಂದ ಪಕ್ವವಾಗಿತ್ತು. ಯೋಗಿಗಳು ಅನುಭವಿಸುವ ಒಳಬೆಳಗುವ ಜ್ಯೋತಿಯನ್ನೇ ನೇರವಾಗಿ ನೋಡಿದಳಪ್ಪಾ. ಅದಕ್ಕೇ ‘ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ಎಂದು ಅವನನ್ನು ಕೊಂಡಾಡಿರುವುದು. ದೇವಕಿಯು ಅಂತರಂಗದಲ್ಲಿ ಸಾಕ್ಷಾತ್ ಜ್ಯೋತಿಯ ದರ್ಶನವನ್ನೇ ಮಾಡಿದಳು, ಅದನ್ನು ಅಪ್ರಯತ್ನವಾಗಿ ಪ್ರಕಟಪಡಿಸಿದಳು ಸಹ. ನಮ್ಮ ದೇಶದ ತಾಯಂದಿರು ದೇವಕಿಯಂತೆ ಅಂತರಂಗದ ಆನಂದವನ್ನು ಅನುಭವಿಸುವ ಹಾಗೆ ಆಗಬೇಕಪ್ಪಾ’ ಎನ್ನುತ್ತಿದ್ದರು.

    ವಸುದೇವನ ದರ್ಶನವೂ ಅಭಿನಂದನೀಯವೇ. ಅದೂ ಸಾಮಾನ್ಯರಿಗೆ ಅಲಭ್ಯವೇ. ಆದರೆ ದೇವಕಿಯು ಆ ಹೊರ ಸೌಂದರ್ಯದ ಸ್ರೋತಸ್ಸಾದ ಅಂತರಂಗದ ಜ್ಯೋತಿಯನ್ನೇ ಕಂಡು, ಅನುಭವಿಸಿ, ಆನಂದಿಸಿದುದು ಪರಮಾದರ್ಶ ಎಂಬುದನ್ನು ಮರೆಯುವಂತಿಲ್ಲ. ಲೋಕದಲ್ಲಿ ಎಲ್ಲದಕ್ಕೂ ಸ್ಥೂಲ, ಸೂಕ್ಷ್ಮ, ಪರಾ ಎಂಬ ಮೂರು ರೂಪಗಳಿರುತ್ತೆ ಎಂಬುದು ಮಹರ್ಷಿಗಳ ಮಾತು. ನಾವೆಲ್ಲರೂ ಸ್ಥೂಲ ರೂಪವನ್ನಷ್ಟೇ ಸಾಮಾನ್ಯವಾಗಿ ಗಮನಿಸುವುದು. ಕಣ್ಣಿಗೆ ಕಾಣುವ ವೃಕ್ಷವನ್ನು ನೋಡುತ್ತೇವೆ. ಅದನ್ನು ಧರಿಸಿರುವ ಬೇರು ಸೂಕ್ಷ್ಮವಾಗಿ ಭೂಮಿಯಲ್ಲಿ ಅಡಗಿರುತ್ತದೆ. ಅದಕ್ಕೂ ಚೈತನ್ಯವನ್ನು ನೀಡುತ್ತಿರುವ ಪರ ರೂಪ ವ್ಯವಸಾಯಜ್ಞನಿಗೆ ಮಾತ್ರವೇ ಅನುಭವಗೊಚರ. ನಮ್ಮ ಕಣ್ಣಿಗೆ ಕಾಣುವ ವೃಕ್ಷದ ಸ್ಥೂಲರೂಪವೂ ಆ ಪರವಾದ ಚೈತನ್ಯದಿಂದಲೇ ವ್ಯಕ್ತವಾಗಿರುವುದು ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗೆಯೇ ಶ್ರೀ ಕೃಷ್ಣನ ಸ್ಥೂಲರೂಪದ ಹಿಂದಿನ ಸೂಕ್ಷ್ಮ, ಪರಾ ರೂಪಗಳನ್ನು ಅರಿಯುವಂತಾದರೆ ನಮ್ಮ ಜೀವನಗಳು ಧನ್ಯ. ದೇವಕಿ ದೇವಿಯು ತನ್ನ ಭಕ್ತಿ, ತಪಸ್ಸು, ಸಾಧನೆಗಳಿಂದ ಅದನ್ನು ಕಂಡು ನಮಗೆಲ್ಲರಿಗೂ ಆದರ್ಶವಾಗಿದ್ದಾಳೆ.

    (ಲೇಖಕರು ಅಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts