More

    ಬೇಸಿಗೆ ಬಿಸಿಲಿಂದ ಬಸವಳಿದ ಜನ, ಮರದ ನೆರಳಿನಲ್ಲಿ ಆಶ್ರಯ

    ಅಮರೇಶ ಚಿಲ್ಕರಾಗಿ ದೇವದುರ್ಗ

    ಸೂರ್ಯನ ಶಾಖ ಏರುಗತಿಯಲ್ಲಿದೆ. ದಿನೇ ದಿನೆ ತಾಪಮಾನ ಹೆಚ್ಚುತ್ತಿದ್ದು ಜನರನ್ನು ಹೈರಾಣ ಮಾಡಿದೆ. ಬೇಸಿಗೆ ಸೆಖೆ ತಣಿಸಲು ಜನರು ನಾನಾ ಕಸರತ್ತು ನಡೆಸಿದ್ದಾರೆ.

    ತಾಲೂಕು ನೀರಾವರಿ ಪ್ರದೇಶಕ್ಕೆ ಒಳಪಟ್ಟಿದ್ದರೂ ಬೇಸಿಗೆ ಬಿಸಿಲಿನಲ್ಲಿ ವ್ಯತ್ಯಯವಾಗಿಲ್ಲ. ತಾಪಮಾನ ತಣಿಸಿಕೊಳ್ಳಲು ಯುವಕರು ನದಿ, ಬಾವಿ, ಕೆರೆ, ಕಾಲುವೆಯಲ್ಲಿ ಈಜಾಡಿದರೆ, ಕೆಲವರು ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಹಿರಿಯರು ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜಾನುವಾರುಗಳು ಜೀವಜಲಕ್ಕಾಗಿ ಹಳ್ಳ-ಕೊಳ್ಳ, ನದಿ, ಕೆರೆಗಳಿಗೆ ಅಲೆಯುತ್ತಿವೆ.

    ಇದನ್ನೂ ಓದಿ: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಇಂದು ಬೆಂಗಳೂರಿನಲ್ಲಿ ದಾಖಲಾಗಲಿದೆ ಗರಿಷ್ಠ ತಾಪಮಾನ!

    ತಾಲೂಕಿನಲ್ಲಿ ನಿತ್ಯ 36ರಿಂದ 38 ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಇದರಿಂದಾಗಿ ಜನ-ಜಾನುವಾರುಗಳು ಸುಸ್ತಾಗುತ್ತಿವೆ. ಪಕ್ಷಿಗಳು ದಾಹ ಇಂಗಿಸಿಕೊಳ್ಳಲು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಸಂಘ, ಸಂಸ್ಥೆಯವರು, ಸ್ವಯಂ ಸೇವಕರು ಜನರಿಗಾಗಿ ನೀರಿನ ಅರವಟಿಗೆ ತೆರೆದಿದ್ದು, ಕೆಲವರು ಪ್ರಾಣಿ, ಪಕ್ಷಿಗಳಿಗೆ ಮನೆ ಮುಂದೆ ನೀರುಣಿಸುತ್ತಿದ್ದಾರೆ.

    ಬೇಸಿಗೆಯಲ್ಲೂ ಕೃಷ್ಣಾ ನದಿ ತಾಲೂಕಿನಲ್ಲಿ ಸುಮಾರು 57 ಕಿಮೀ ಝರಿಯಂತೆ ಹರಿಯುತ್ತಿದೆ. ಇದರಿಂದಾಗಿ ಯುವಕರು ಕೃಷ್ಣಾ ನದಿ ಈಜಾಡಲು ಅನುಕೂಲವಾಗಿದೆ. ತಿಂಥಣಿ ಬ್ರಿಡ್ಜ್, ವೀರಗೋಟ, ಲಿಂಗದಹಳ್ಳಿ, ಹೂವಿನಹೆಡಗಿ, ಕೊಪ್ಪರ, ಗೂಗಲ್ ಸೇರಿ ವಿವಿಧೆಡೆ ನದಿಯಲ್ಲಿ ಯುವಕರು ಈಜಲು ಹೋಗುತ್ತಿದ್ದಾರೆ.

    ಕೆಲವರು ಸಮೀಪದ ಕಾಲುವೆಯಲ್ಲಿ ಈಜಾಡಿದರೆ ಚಿಕ್ಕಹೊನ್ನಕುಣಿ, ಕಕ್ಕಲದೊಡ್ಡಿ, ಮುಷ್ಟೂರು, ಗಬ್ಬೂರು, ಗಲಗ ಸೇರಿ ವಿವಿಧೆಡೆ ಪುರಾತನ ಬಾವಿಗಳಲ್ಲಿ ಯುವಕರು ಈಜಾಡುತ್ತಿದ್ದಾರೆ. ಪಟ್ಟಣದ ವಿವಿಧೆಡೆ ತಂಪು ಪಾನೀಯ ಅಂಗಡಿ ಆರಂಭವಾಗಿದ್ದರೆ, ಕಲ್ಲಂಗಡಿ, ಕರಬುಜ ಲಗ್ಗೆ ಹಾಕಿವೆ. ಮಣ್ಣಿನ ಮಡಕೆಗಳಿಗೂ ಬೇಡಿಕೆ ಬಂದಿದೆ.

    ವೃದ್ಧರು ವಿವಿಧ ದೇವಸ್ಥಾನಗಳ ಆವರಣದಲ್ಲಿರುವ ಮರದ ನೆರಳಿನಲ್ಲಿ ಆಶ್ರಯ ಪಡೆದು ನಿದ್ದೆಗೆ ಜಾರುತ್ತಿದ್ದಾರೆ. ಇಲ್ಲಿನ ಸಾರ್ವಜನಿಕ ಗ್ರಂಥಾಲಯ, ಆಸ್ಪತ್ರೆ ಆವರಣ, ಅಂಬಾಭವಾನಿ ದೇವಸ್ಥಾನ, ಗೂಗಲ್ ಅಲ್ಲಮಪ್ರಭು ದೇವಸ್ಥಾನದ ಮರಗಳು ಆಶ್ರಯ ತಾಣಗಳಾಗಿವೆ. ಬಿಸಿಲಿನ ಹೊಡೆತಕ್ಕೆ ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

    ಆರೋಗ್ಯದ ಬಗ್ಗೆ ಇರಲಿ ಎಚ್ಚರ

    ಉಷ್ಣತೆ ಹೆಚ್ಚುತ್ತಿರುವ ಕಾರಣ ಜನರು ಆರೋಗ್ಯದ ಕಾಳಜಿ ವಹಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರಿಗೆ ಸಮಸ್ಯೆಯಾಗಲಿದೆ.

    ತಲೆನೋವು, ಮೈ-ಕೈ ನೋವು, ಮಕ್ಕಳಲ್ಲಿ ವಾಂತಿ, ಭೇದಿ, ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಾಗಿ ನೀರು ಸೇವಿಸುವ ಜತೆಗೆ ತಂಪು ಪಾನೀಯ ಹಾಗೂ ಸರಳ ಆಹಾರ ಸೇವಿಸಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

    ಬೇಸಿಗೆ ಬಿಸಿಲಿಂದ ಬಸವಳಿದ ಜನ, ಮರದ ನೆರಳಿನಲ್ಲಿ ಆಶ್ರಯ

    ಬಿಸಿಲಿನ ಪ್ರಖರತೆ ಹೆಚ್ಚಾದಂತೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಕಾಯಿಲೆ ಬರುವುದು ಸಹಜ. ಆದರೆ, ಆತಂಕಪಡುವ ಅಗತ್ಯವಿಲ್ಲ. ನೀರಿನ ಅಂಶ ಹೆಚ್ಚಿರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಆಗಾಗ ನೀರು ಕುಡಿಯಬೇಕು. ಇಲ್ಲದಿದ್ದರೆ ನಿಶ್ಯಕ್ತಿಯಾಗುವ ಸಾಧ್ಯತೆಯಿದೆ.
    | ಡಾ.ಬನದೇಶ್ವರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts