ದೇವದುರ್ಗ: ರಾಜ್ಯ ಹಾಗೂ ದೇಶದಲ್ಲಿ ಆಡಳಿತ ನಡೆಸುವ ಜನವಿರೋಧಿ ಸರ್ಕಾರಗಳಿಂದ ಬಡವರ ಬದುಕು ಬೀದಿಗೆ ಬಂದಿದೆ. ಆಳುವ ಸರ್ಕಾರಗಳಿಂದ ದುಡಿಯುವ ವರ್ಗಕ್ಕೆ ತೊಂದರೆಯಾಗಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಆರೋಪಿಸಿದರು.

ಪಟ್ಟಣದ ಎಪಿಎಂಸಿ ಆವರಣದ ಹಮಾಲಿ ಭವನದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ದೇಶದಲ್ಲಿ ಆಡಳಿತ ಮಾಡಿದ ಎನ್‌ಡಿಎ, ಯುಪಿಎ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಬಾಲಂಗೋಚಿಗಳಾಗಿ ಕೆಲಸ ಮಾಡಿವೆ. ಕಾರ್ಮಿಕರಿಗೆ ಇರುವ 40 ಸೌಲಭ್ಯಗಳನ್ನು ತೆಗೆದು 4 ಕಾರ್ಮಿಕ ಸಂಹಿತೆ ಮಾಡಿ ಮಾಲೀಕರ ಹಿತ ಕಾಪಾಡಲಾಗುತ್ತಿದೆ. ಕಾರ್ಮಿಕ ಸಂಘಟನೆಗಳು ಬಂಡವಾಳಶಾಹಿ ಪಕ್ಷಗಳ ಸರ್ಕಾರದ ನೀತಿ ಎದುರಿಸಲು ಐಕ್ಯ ಚಳವಳಿಗೆ ಮುಂದಾಗಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ದೇಶದಲ್ಲಿ ನಿರುದ್ಯೋಗ, ಬಡತನ ಅಧಿಕವಾಗುತ್ತಿದೆ. ಖಾಯಂ ನೇಮಕಾತಿ ಪದ್ಧತಿ ತೆಗೆದು ಗುತ್ತಿಗೆ ಪದ್ಧತಿ ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ. ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಬಲಿಷ್ಠ ಸಂಘಟನೆ ಮಾಡಿ ಪ್ರಬಲ ಹೋರಾಟ ಮಾಡಬೇಕಾಗಿದೆ. ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಹಮಾಲಿ ಕಾರ್ಮಿಕ ಹನುಮಯ್ಯ ಧ್ವಜಾರೋಹಣ ಮಾಡಿದರು. ಮುಖಂಡರಾದ ರಮಾದೇವಿ, ಸಾವಿತ್ರಿ, ನಿರ್ಮಲಾ, ಮರಿಯಮ್ಮ, ಯೂಸುಫ್ ಗ್ವಾಡಿಕಾರ, ಭೀಮಪ್ಪ, ಯೂಸುಫ್ ನಾಗುಂಡಿ, ಹುಸೇನ್, ಶಿವಪ್ಪ ಬಲ್ಲಿದವ್, ಪಾಂಡುರಂಗ ನಾಯಕ ಇದ್ದರು.