More

    ಏಳು ಆರೋಗ್ಯ ಕೇಂದ್ರ ಮಂಜೂರು- ಶಾಸಕ ಕೆ.ಶಿವನಗೌಡ ನಾಯಕ ಹೇಳಿಕೆ

    ದೇವದುರ್ಗ: ತಾಲೂಕಿನ ಏಳು ಗ್ರಾಪಂಗಳಿಗೆ ರಾಜ್ಯ ಸರ್ಕಾರ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದ್ದು, ಅಂದಾಜು 28 ಕೋಟಿ ರೂ. ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 14 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಮಸ್ಯೆ ಕುರಿತು ಹಾಗೂ ಜನಸಂಖ್ಯೆಗನುಗುಣವಾಗಿ ಆರೋಗ್ಯ ಸೇವೆ ಒದಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಏಳು ಕೇಂದ್ರಗಳನ್ನು ಮಂಜೂರು ಮಾಡಿದ್ದಾರೆ.

    ನಾಗಡದಿನ್ನಿ, ಕ್ಯಾದಿಗೇರಾ, ಕೊತ್ತದೊಡ್ಡಿ, ಕರಿಗುಡ್ಡ, ಆಲ್ಕೋಡ, ಮುಷ್ಟೂರು, ಮುಂಡರಗಿ ಗ್ರಾಮಗಳಿಗೆ ಕೇಂದ್ರ ಮಂಜೂರಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿವೆ. ಕ್ಷೇತ್ರದಲ್ಲಿ ಈಗಾಗಲೇ ಮೂಲಸೌಲಭ್ಯಕ್ಕೆ ಆದ್ಯತೆ ನೀಡಿ, ಕುಡಿಯುವ ನೀರು, ರಸ್ತೆ ಸೇರಿ ಜನರ ಅಗತ್ಯತೆಗಳನ್ನು ಪೂರೈಸಲಾಗಿದೆ. ಇದರ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿದ್ದು, ಈಗ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.

    ಹೊಸ ಶಿಕ್ಷಣ ಸಂಸ್ಥೆಗಳು, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಗತ್ಯ ಶಿಕ್ಷಕರು, ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಲಾಗಿದೆ. ಏಳು ಕೇಂದ್ರ ಮಂಜೂರ ಮಾಡುವ ಜತೆಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ತಜ್ಞ ವೈದ್ಯರ ನೇಮಕ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಶಾಸಕ ಶಿವನಗೌಡ ನಾಯಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts