More

    ಕೃಷ್ಣಾ ನದಿಗೆ 2.78ಲಕ್ಷ ಕ್ಯೂಸೆಕ್ ನೀರು, ಎರಡು ಸೇತುವೆ, ದೇವಸ್ಥಾನ ಮುಳುಗಡೆ

    ದೇವದುರ್ಗ: ಭಾರಿ ಮಳೆಯಿಂದಾಗಿ ನಾರಾಯಣಪುರ ಜಲಾಶಯ ಭರ್ತಿಯಾಗುತ್ತಿದ್ದು, ಕೃಷ್ಣಾ ನದಿಗೆ ಸೋಮವಾರ 2.78ಲಕ್ಷ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

    33 ಟಿಎಂಸಿ ಅಡಿ ಸಾಮರ್ಥ್ಯದ ನಾರಾಯಣಪುರ ಜಲಾಶಯಕ್ಕೆ ಆಲಮಟ್ಟಿ ಡ್ಯಾಂನಿಂದ 2.5ಲಕ್ಷ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಿಂದ 10ಸಾವಿರ ಕ್ಯೂಸೆಕ್ ಒಳಹರಿವಿದೆ. ಡ್ಯಾಂ ಬಹುತೇಕ ಭರ್ತಿಯಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ತಡರಾತ್ರಿ 22ಗೇಟ್ ತೆರೆದು 2.37ಲಕ್ಷ ಕ್ಯೂಸೆಕ್ ನೀರು ಹೊರಹರಿಸಲಾಗಿತ್ತು. ಸೋಮವಾರ ಬೆಳಗ್ಗೆ 27ಗೇಟ್ ತೆರೆದು 2.78ಲಕ್ಷ ಕ್ಯೂಸೆಕ್ ನೀರು ಹೊರಹರಿಸಲಾಗಿದೆ. ಇದರಿಂದ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಿದ್ದು, ರಾಯಚೂರು-ಕಲಬುರಗಿ ರಸ್ತೆ ಸಂಚಾರ ಬಂದ್‌ಆಗಿದೆ. ವಾಹನಗಳು ತಿಂಥಣಿ ಮೂಲಕ ತೆರಳುವಂತಾಗಿದೆ.

    ಹೂವಿನಹೆಡಗಿಯ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದೆ. ಕೊಪ್ಪರ ಗ್ರಾಮದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನ ಜಲಾವೃತವಾಗಿದ್ದು, ಅದೇ ಗ್ರಾಮದ ಹನುಮಂತ ಹಾಗೂ ಬಸವಣ್ಣ ದೇವಸ್ಥಾನ ಮುಳುಗಿವೆ. ಗೂಗಲ್ ಗ್ರಾಮದ ಐತಿಹಾಸಿಕ ಶ್ರೀಅಲ್ಲಮಪ್ರಭು ದೇವಸ್ಥಾನ ಜಲಾವೃತವಾಗಿದೆ. ಅಲ್ಲಿನ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿದ್ದರಿಂದ 60 ಗೇಟ್ ಮೇಲೆತ್ತಿ ನೀರು ನದಿಗೆ ಹರಿಸಲಾಗುತ್ತಿದೆ. ವೀರಗೋಟದ ಶ್ರೀಅಡವಿಲಿಂಗ, ತಿಂಥಣಿ ಶ್ರೀಕನಕಗುರುಪೀಠದ ರಸ್ತೆ ಕೂಡ ನದಿ ನೀರಿಗೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತವಾಗಿದೆ.

    23 ಹಳ್ಳಿಗಳಿಗೆ ಆತಂಕ: ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ದೇವದುರ್ಗ ತಾಲೂಕಿನ ನದಿ ತೀರದ 23ಹಳ್ಳಿಗಳಿಗೆ ಪ್ರವಾಹದ ಭೀತಿ ಶುರುವಾಗಿದೆ. ತಿಂಥಣಿಯಿಂದ ಗೂಗಲ್‌ವರೆಗೆ 57ಕಿಮೀ ನದಿ ವ್ಯಾಪಿಸಿದೆ. ಈ ಪೈಕಿ 17ಹಳ್ಳಿಗಳಿಗೆ ಸದ್ಯ ನೀರು ನುಗ್ಗುವ ಆತಂಕ ಎದುರಾಗಿದೆ. ನದಿಗೆ ಜನ ಇಳಿಯದಂತೆ ತಾಲೂಕು ಆಡಳಿತ ಜಾಗೃತಿ ಮೂಡಿಸುತ್ತಿದ್ದು, ಅಗತ್ಯ ಕ್ರಮ ಕೈಗೊಂಡಿದೆ. ನದಿ ತೀರದ ಗ್ರಾಮದ ಸುಮಾರು 10ಸಾವಿರ ಹೆಕ್ಟೇರ್ ಭೂಮಿಗೆ ನೀರು ನುಗ್ಗುವ ಸಾಧ್ಯತೆಯಿದೆ.

    ಕೃಷ್ಣಾ ನದಿಗೆ 2.78ಲಕ್ಷ ಕ್ಯೂಸೆಕ್ ನೀರು, ಎರಡು ಸೇತುವೆ, ದೇವಸ್ಥಾನ ಮುಳುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts