More

    ನಿವೃತ್ತ ಕಾರ್ಯಕರ್ತೆಯರಿಗೆ ಗ್ರಾಚ್ಯೂಟಿ ನೀಡಿ

    ದೇವದುರ್ಗ: ನಿವೃತ್ತಿ ಹೊಂದಿರುವ 6 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯೂಟಿ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ (ಸಿಐಟಿಯು ಸಂಯೋಜಿತ) ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಅಂಗನವಾಡಿ ನೌಕರರು ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಮಹಿಳೆಯರು, ಮಕ್ಕಳು, ಬಾಣಂತಿ, ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದರೆ, ನಿವೃತ್ತರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.

    ನಿವೃತ್ತಿಯಾಗಿರುವ ಹಾಗೂ ನಿವೃತ್ತರಾಗುವ ನೌಕರರಿಗೆ ಗ್ರಾಚ್ಯೂಟಿ ನೀಡಬೇಕು. ಕನಿಷ್ಠ 26 ಸಾವಿರ ರೂ. ವೇತನ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ, ಖಾಲಿ ಇರುವ ಮೇಲ್ವಿಚಾರಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು.

    ಎರಡು ತಿಂಗಳ ಬಾಕಿ ವೇತನ, ಹೆಚ್ಚುವರಿ ಗೌರವ ಧನ, ಮಾತೃವಂದನ ಹಣ ನೀಡಬೇಕು. ತರಕಾರಿ ಬಿಲ್, ಬಾಡಿಗೆ ಹಣ, ಪೋಷಣಾ ಅಭಿಯಾನದ ಪ್ರೋತ್ಸಾಹ ಧನ, ಕ್ರೀಡಾ ಸಾಮಗ್ರಿ, ಔಷಧ ಕಿಟ್ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ಮತ್ತು ಕಾಂಪೌಂಡ್ ನಿರ್ಮಿಸಬೇಕೆಂದು ಒತ್ತಾಯಿಸಿದರು. ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ರೇಣುಕಾ ಬೊಮ್ಮನಾಳ, ಚಂದ್ರಕಲಾ, ಬನ್ನಮ್ಮ, ರಾಧಿಕಾ, ನಿರ್ಮಲಾ, ಲೀಲಾವತಿ, ಭೀಮಾಬಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts