More

    ಏ.10ರ ವರೆಗೆ ನಾಲೆಗೆ ನೀರು ಹರಿಸಿ; ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

    ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ನೀರು ನಂಬಿಕೊಂಡು ರೈತರು ವಿವಿಧ ಬೆಳೆ ಬೆಳೆದಿದ್ದು, ಅವುಗಳ ರಕ್ಷಣೆಗೆ ಏ.10ರ ವರೆಗೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಹಸಿಲ್ ಕಚೇರಿವರೆಗೆ ಮಂಗಳವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅವೈಜ್ಞಾನಿಕವಾಗಿ ನೀರು ಬಿಡುವ ತೀರ್ಮಾನ ಕೈಗೊಂಡಿದೆ. ಇದರಿಂದ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಲಕ್ಷಾಂತರ ಹೆಕ್ಟೇರ್ ಭೂಪ್ರದೇಶದಲ್ಲಿ ಬಿತ್ತಿರುವ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿ ಎದುರಿಸುತ್ತಿವೆ. ಭತ್ತ, ಹತ್ತಿ, ಜೋಳ, ಸಜ್ಜೆ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸಮೃದ್ಧವಾಗಿ ಬೆಳೆದಿದ್ದು, ಅವುಗಳಿಗೆ ಏ.10ರವರೆಗೆ ನೀರಿನ ಅವಶ್ಯಕತೆಯಿದೆ. ಏ.10ರವರೆಗೆ ನಾಲೆಗೆ ನೀರು ಹರಿಸುವಂತೆ ರೈತ ಸಂಘ ಹಲವು ಸಲ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ಸಮಿತಿ ಸದಸ್ಯ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಸೂಗೂರಯ್ಯಸ್ವಾಮಿ, ತಾಲೂಕು ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು, ಪ್ರಭಾಕರ್ ಪಾಟೀಲ್ ಇಂಗಳದಾಳ, ಉಮಾಪತಿಗೌಡ, ಚನ್ನಪ್ಪಗೌಡ ಕಾತರಕಿ, ಬನ್ನಯ್ಯಸ್ವಾಮಿ, ವೀರನಗೌಡ ಇತರರಿದ್ದರು.

    ವಿವಿಧ ಸಂಘಟನೆಗಳಿಂದ ಸಂಚಾರ ತಡೆ: ನಾರಾಯಣಪುರ ಬಲದಂಡೆ ಕಾಲುವೆಗೆ ಏ.20ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಸಂಚಾರ ತಡೆ ನಡೆಸಿದವು. ಇದಕ್ಕೂ ಮುನ್ನ ಸಿರವಾರ ಕ್ರಾಸ್‌ನಿಂದ ನೂರಾರು ರೈತರು ಪಾದಯಾತ್ರೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ಸೇರಿ ಇತರೆ ಬೆಳೆಗಳು ನೀರಿನ ಅಭಾವದಿಂದ ಬಾಡುತ್ತಿವೆ. ನೀರು ನಂಬಿ ರೈತರು ಲಕ್ಷಾಂತರ ರೂ. ವೆಚ್ಚ ಮಾಡಿ ವಿವಿಧ ಬೆಳೆಗಳು ಬೆಳೆದಿದ್ದಾರೆ. ಮಾ.31ಕ್ಕೆ ನೀರು ಬಂದ್ ಮಾಡಿದರೆ, ಲಕ್ಷಾಂತರ ಹೆಕ್ಟೇರ್ ಜಮೀನನಲ್ಲಿ ಬೆಳೆದ ಬೆಳೆ ಹಾಳಾಗಲಿವೆ ಎಂದು ದೂರಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ್ ನಾಯಕ, ವಿವಿಧ ಸಂಘಟನೆಗಳ ಮುಖಂಡರಾದ ಗಿರಿಯಪ್ಪ ಪೂಜಾರಿ, ಹನುಮಂತ ಮನ್ನಾಪುರಿ, ನರಸಣ್ಣ ನಾಯಕ, ಯಲ್ಲನಗೌಡ, ಮರಿಲಿಂಗ ಗೌರಂಪೇಟೆ, ಶಿವಶಂಕರಗೌಡ, ಜಹೀರ್‌ಪಾಷಾ, ವಿಶ್ವನಾಥ, ರಮೇಶ ರಾಮನಾಳ ಇತರರಿದ್ದರು.

    ಏ.10ರ ವರೆಗೆ ನಾಲೆಗೆ ನೀರು ಹರಿಸಿ; ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts