More

    ಕುಂಟ್ಲಿಗಿತ್ತಿ ರಾಜಕಾರಣ ಮಾಡಲ್ಲ- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿಕೆ

    ದೇವದುರ್ಗ: ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುತ್ತಿವೆ. ನಾನು ಮತ್ತು ನಮ್ಮ ಕುಟುಂಬ ಎಂದೂ ಕುಂಟ್ಲಗಿತ್ತಿ ರಾಜಕಾರಣ ಮಾಡಿಲ್ಲ, ಮಾಡೋದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿದರು.

    ಮಾನಸಗಲ್ ಗ್ರಾಮದಲ್ಲಿ ಆಯೋಜಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ಹಾಗೂ 371(ಜೆ) ಸಮಾವೇಶ ಪೂರ್ವಭಾವಿ ಸಭೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ನಾನು ಮಾನ-ಮರ್ಯಾದೆ ಬಿಟ್ಟು ರಾಜಕಾರಣ ಮಾಡಲ್ಲ. ನನ್ನ ತಂದೆ ಎ.ವೆಂಕಟೇಶ ನಾಯಕ ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು. ನಮ್ಮ ಕುಟುಂಬದ ಬಗ್ಗೆ ಯಾರೇ ನಾಲಿಗೆ ಹರಿಬಿಟ್ಟರೆ, ಇಲ್ಲಸಲ್ಲದ ಆರೋಪದ ಮಾಡಿದರೆ ಸಹಿಸಲ್ಲ ಎಂದರು.

    ಕಾರ್ಯಕರ್ತರನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ನಾನು ದೇವದುರ್ಗ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ ನನ್ನ ಅಕೌಂಟ್‌ನಿಂದ ಹಣ ಡಿಪಾಸಿಟ್ ಮಾಡಿದ್ದೇನೆ. ಉಳಿದೆರಡು ಕಡೆ ಅಭಿಮಾನಿಗಳು ಅರ್ಜಿ ಪಡೆದು ನನ್ನ ಸಹಿ ಹಾಕಿಸಿ ತಾವೇ ಹಣಕೊಟ್ಟು ಅರ್ಜಿ ಸಲ್ಲಿಸಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದದೆ, ವಿರೋಧಿಗಳ ಮಾತುಕೇಳದೆ ತಾಳ್ಮೆಯಿಂದ ಇರಬೇಕು. ನಿರಾಸೆಗೆ ಒಳಗಾಗಿ ಧೈರ್ಯ ಕಳೆದುಕೊಳ್ಳಬಾರದು ಎಂದರು.

    ಭ್ರಷ್ಟಾಚಾರವೇ ಬಿಜೆಪಿ ಧರ್ಮವಾಗಿದೆ. ಶಾಸಕರು ಹಾಗೂ ಸಚಿವರು ಜಿದ್ದಿಗೆ ಬಿದ್ದವರಂತೆ ವ್ಯಾಪಾರ ಮಾಡುತ್ತಿದ್ದಾರೆ. ಕಾಟಾಚಾರಕ್ಕೆ ಸರ್ಕಾರ ನಡೆಯುತ್ತಿದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಎಲ್ಲ ಸಮೀಕ್ಷೆಗಳು ಇದನ್ನೇ ಹೇಳಿವೆ. ಬಿಜೆಪಿಗೆ ಎದುರಾಳಿ ಎಂದರೆ ಕಾಂಗ್ರೆಸ್ ಮಾತ್ರ. ಕಾರ್ಯಕರ್ತರು, ಅಧಿಕಾರಕ್ಕೆ ಬಾರದ ಪಕ್ಷ ಎತ್ತಿಕಟ್ಟಿದರೆ ಅದು ಬಿಜೆಪಿಗೆ ಲಾಭವಾಗಲಿದೆ. ಹೀಗಾಗಿ ಎದೆಗುಂದಬಾರದು. ಡಿ.10ರ ನಂತರ ತಾಲೂಕಿನ ಎಲ್ಲ ಗ್ರಾಪಂಯಲ್ಲಿ ಸಭೆ ಮಾಡಿ ಪಕ್ಷ ಬಲಪಡಿಸಿ ಗೆಲ್ಲಿಸುತ್ತೇವೆ ಎಂದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಿ, ಅಭಿನಂದನೆ ಸಮಾವೇಶ ಯಶಸ್ವಿಗೊಳಿಸಲು ರಾಯಚೂರು, ಮಸ್ಕಿ, ಮಾನ್ವಿ, ದೇವದುರ್ಗದಲ್ಲಿ ಮೀಟಿಂಗ್ ಮಾಡಿದ್ದು, ಜಿಲ್ಲೆಯಿಂದ ಒಂದು ಲಕ್ಷ ಜನರನ್ನು ಕರೆದೊಯ್ಯಲಾಗುವುದು. ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ, ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಜಿಲ್ಲೆಯಲ್ಲಿ ಐದು ಕ್ಷೇತ್ರ ಗೆಲ್ಲಲಿದೆ. ಎಐಸಿಸಿ ಹಾಗೂ ಕೆಪಿಸಿಸಿ ಸೂಚನೆಯಿಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

    ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಮಾತನಾಡಿದರು. ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ರವಿ ಪಾಟೀಲ್, ಕೆಂಚಯ್ಯತಾತ, ಗಂಗಪ್ಪಯ್ಯ ಪೂಜಾರಿ, ರಾಮನಗೌಡ, ಶರಣಗೌಡ ಬಕ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಗುರುವಿನ ಸಿದ್ದಯ್ಯತಾತ ಇತರರಿದ್ದರು.

    ವೇದಿಕೆಗೆ ನುಗ್ಗಿದ ಕಾರ್ಯಕರ್ತರು: ಮಾಜಿ ಸಂಸದ ಬಿ.ವಿ.ನಾಯಕ ಮಾತು ಮುಗಿಸುತ್ತಿದ್ದಂತೆ ನೂರಾರು ಕಾರ್ಯಕರ್ತರು ವೇದಿಕೆಗೆ ನುಗ್ಗಿಬಂದು ಕಾಂಗ್ರೆಸ್ ನಾಯಕರಿಗೆ ದಿಗ್ಬಂಧನ ಹಾಕಿದರು. ಬಿ.ವಿ.ನಾಯಕರನ್ನು ಅಭ್ಯರ್ಥಿ ಮಾಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ದೇವದುರ್ಗ ಕ್ಷೇತ್ರದಿಂದ ಮಾತ್ರ ಅರ್ಜಿ ಸಲ್ಲಿಸಿದ್ದು, ಇಲ್ಲಿಯೇ ಸ್ಪರ್ಧಿಸುವ ಇಚ್ಛಾಶಕ್ತಿಯಿದೆ. ಹೈಕಮಾಂಡ್ ಒಪ್ಪಿದರೆ ದೇವದುರ್ಗದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬಿ.ವಿ.ನಾಯಕ ಘೋಷಿಸಿದರು. ನಂತರ ಕಾರ್ಯಕರ್ತರು ಬಿ.ವಿ.ನಾಯಕಗೆ ಜೈಕಾರ ಹಾಕಿಸಭೆಯಿಂದ ಹೊರನಡೆದರು.

    ಬಾಬಾಸಾಹೇಬ್ ಅಂಬೇಡ್ಕರ್ ಮೀಸಲು ನೀಡಿ ಸಾಮಾಜಿಕ ನ್ಯಾಯ ಒದಗಿಸಿದ್ದರೆ, ಮಲ್ಲಿಕಾರ್ಜುನ ಖರ್ಗೆ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಸೌಲಭ್ಯ ಕಲ್ಪಿಸಿ ಆಧುನೀಕ ಬಾಬಾಸಾಹೇಬ್ ಆಗಿದ್ದಾರೆ. ಮಹಾತ್ಮ ಗಾಂಧೀಜಿ, ನೆಹರು, ಪಾಟೀಲ್‌ನಂಥ ಮಹಾನ್ ನಾಯಕರು ಅಲಂಕರಿಸಿದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಭಾಗದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು ಕರ್ನಾಟಕದ ಹೆಮ್ಮೆ. ಡಿ.10ರಂದು ಅಭಿನಂದನೆ ಸಮಾವೇಶ ಆಯೋಜಿಸಲಾಗಿದೆ.
    | ಬಿ.ವಿ.ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts