More

    ವಿತ್ತಸಂಕಷ್ಟಕ್ಕೆ ಸಿಗುವುದೇ ಪರಿಹಾರ?

    2021-22ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಮುಂಗಡಪತ್ರ ಮಂಡನೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು (ಸೋಮವಾರ) ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾನ್ಯರ ಬಜೆಟ್ ನಿರೀಕ್ಷೆಗಳ ಕಿರು ಅವಲೋಕನ ಇಲ್ಲಿದೆ.

    ಬಜೆಟ್ ಎಂದ ಕೂಡಲೇ ಜನರ ನಿರೀಕ್ಷೆಗಳು ಗರಿಗೆದರುವುದು ಸಹಜ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಆಯಾ ಕ್ಷೇತ್ರಗಳ ಸುಧಾರಣೆಗೆ ಸರ್ಕಾರದ ಕ್ರಮಗಳೇನಿರಬಹುದು ಎಂಬ ಕುತೂಹಲ, ಇಂಥದ್ದಾಗಬೇಕು ಎಂಬ ನಿರೀಕ್ಷೆಗಳಿರುತ್ತವೆ. ಅದರಲ್ಲೂ, ಸಾಮಾನ್ಯ ಜನರಿಗೆ ನೆನಪಾಗುವುದು ಆದಾಯ ತೆರಿಗೆ. ಕೋವಿಡ್ ಸಂಕಷ್ಟದ ಕಾರಣ ಎಲ್ಲರೂ ಒಂದಿಲ್ಲೊಂದು ಪರಿಹಾರ, ತೆರಿಗೆ ವಿನಾಯಿತಿ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

    • ಕಳೆದ ವರ್ಷ ಆದಾಯ ತೆರಿಗೆಯ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಹಳೆಯದನ್ನೂ ಉಳಿಸಲಾಗಿತ್ತು. ಹಳೆಯ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಈಗಿರುವ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಿದರೆ ಒಳಿತು.
    • ಸೆಕ್ಷನ್ 80ಸಿ ಮಿತಿಯನ್ನು ಹೆಚ್ಚಿಸಬೇಕು. ವಾರ್ಷಿಕ 1.5 ಲಕ್ಷ ರೂಪಾಯಿಯಷ್ಟೇ ಇದೆ. ಈ ಮಿತಿ ಏರಿಕೆಯಾಗದೇ ಬಹಳ ವರ್ಷಗಳಾಗಿವೆ. ಈ ಸೆಕ್ಷನ್​ನಲ್ಲಿರುವ ಅಂಶಗಳ ಪರಿಷ್ಕರಣೆಯೂ ಆಗಬೇಕು. ಹೆಚ್ಚು ಆದಾಯದವರಿಗೆ ಹೆಚ್ಚು ಉಳಿತಾಯಕ್ಕೆ ಅನುಕೂಲವಾಗುವಂತೆ ಸ್ಲ್ಯಾಬ್​ಗಳ ಮಾದರಿಯಲ್ಲಿ ನಿಯಮ ಪರಿಷ್ಕರಿಸಿದರೆ ಉತ್ತಮ.
    • ಪ್ರತಿಯೊಬ್ಬರೂ ಮನೆ ಖರೀದಿಸಲು ಬಯಸುತ್ತಾರೆ. ಬಹುತೇಕರು ಅದಕ್ಕಾಗಿ ಸಾಲದ ಮೊರೆ ಹೋಗಲೇಬೇಕು. ಸೆಕ್ಷನ್ 80ಸಿ ಮತ್ತು ಸೆಕ್ಷನ್ 24ಬಿ ಪ್ರಕಾರ ಈಗಾಗಲೇ ಕೆಲವು ವಿನಾಯಿತಿ ಇವೆ. ಆದರೆ, ಮನೆ ನಿರ್ಮಾಣ ವೆಚ್ಚ ಹೆಚ್ಚಾಗಿರುವ ಕಾರಣ ಗೃಹಸಾಲದ ಮೂಲಧನ ಮರುಪಾವತಿಯಲ್ಲಿ -ಠಿ; 1.5 ಲಕ್ಷದಿಂದ -ಠಿ; 2.5 ಲಕ್ಷದವರೆಗೆ ಸಹಾಯಧನ ನೀಡುವ ಕಡೆಗೆ ಸರ್ಕಾರ ಗಮನಹರಿಸಬೇಕಾಗಿದೆ.
    • ಎಂಡೋಮೆಂಟ್, ಮನಿಬ್ಯಾಂಕ್ ಮುಂತಾದ ಸಾಂಪ್ರದಾಯಿಕ ಜೀವವಿಮೆಗಳ ಜನಪ್ರಿಯತೆಯ ಹೊರತಾಗಿಯೂ ಭಾರತೀಯರಲ್ಲೂ ಜೀವವಿಮೆಯ ವಲಯದೊಳಗಿಲ್ಲ. ಅವಧಿ ವಿಮೆ (ಟರ್ಮ್ ಪ್ಲ್ಯಾನ್​) ಉತ್ತಮ ವಾಗಿದ್ದು, ಇದನ್ನು ಉತ್ತೇಜಿಸಲು ಸೆಕ್ಷನ್ 80ಸಿ ಪ್ರಕಾರ ಪ್ರತ್ಯೇಕ ತೆರಿಗೆ ವಿನಾಯಿತಿ ಅವಕಾಶ ನೀಡಬೇಕು.
    • ಷೇರುಗಳ ಮೂಲಕ ಸಿಗುವ ಗಳಿಕೆ ಮೇಲಿನ ಲಾಂಗ್ ಟಮ್ರ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ತೆಗೆದು ಹಾಕಿದರೆ ಮಾರುಕಟ್ಟೆ ಭಾವನೆಗಳಿಗೆ ಉತ್ತೇಜನ ಸಾಧ್ಯ. ಎನ್​ಪಿಎಸ್ ದೀರ್ಘಾವಧಿ ಹೂಡಿಕೆಯ ಉತ್ಪನ್ನವಾಗಿ ಬದಲಾಗುತ್ತಿದ್ದು, ಹೆಚ್ಚುವರಿ ವಿನಾಯಿತಿ ಸಿಗಬೇಕಿದೆ.
    • ಸೆಕ್ಷನ್ 24 ಬಿಯಲ್ಲಿ ಬಡ್ಡಿ ಪಾವತಿಯ ಮಿತಿಯನ್ನು -ಠಿ; 5 ಲಕ್ಷಕ್ಕೇರಿಸಲು ಚಿಂತನೆ ನಡೆಸಬಹುದು. ಇದನ್ನು ಎಲ್ಲ ಮಧ್ಯಮ, ದೊಡ್ಡ ನಗರಗಳಿಗೆ ಅನ್ವಯಿಸಿದರೆ ಚೆನ್ನ.
    • ಕರೊನಾ ಸಂಕಷ್ಟದ ಕಾರಣ ಎಲ್ಲರ ಗಮನ ಆರೋಗ್ಯ ವಿಮೆ ಕಡೆಗೆ ಹೊರಳಿದೆ. ಆರೋಗ್ಯ ವಿಮೆ ಹೊಂದುವುದಕ್ಕೆ ಜನರನ್ನು ಉತ್ತೇಜಿಸಲು ಸರ್ಕಾರ ಇನ್ನಷ್ಟು ವಿನಾಯಿತಿ ಒದಗಿಸುವುದು ಸೂಕ್ತ. ಸೆಕ್ಷನ್ 80ಡಿ ಪ್ರಕಾರ 1 ಲಕ್ಷ ರೂಪಾಯಿ ತನಕದ ಪ್ರೀಮಿಯಂ ವಿನಾಯಿತಿ ಬಗ್ಗೆ ಗಮನಿಸುವುದು ಅಗತ್ಯ.
    • ಕೋವಿಡ್ ಸಂಕಷ್ಟದ ನಂತರದಲ್ಲಿ ವರ್ಕ್ ಫ್ರಂ ಹೋಮ್ ಸದ್ಯ ‘ನ್ಯೂ ನಾರ್ಮಲ್’ ಆದ ಕಾರಣ, ಅನೇಕ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ನೀತಿ ಮುಂದುವರಿಸಿವೆ. ಹೆಚ್ಚುವರಿ ಅಲೋವೆನ್ಸ್ ಒದಗಿಸುವುದಕ್ಕೆ ಸರ್ಕಾರ ಪೂರಕ ನೆರವು ನೀಡಿದರೆ ಒಳಿತು.

    ವ್ಯಾಪಾರೋದ್ಯಮಿಗಳಿಗೇನು ಬೇಕು?

    ಕರೊನಾದಿಂದ ನಷ್ಟಕ್ಕೆ ಒಳಗಾಗಿರುವ ರಂಗಗಳ ಪುನಶ್ಚೇತನದ ಕಡೆಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ಹಂತ-ಹಂತವಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಲಾಗುತ್ತದೆ. ಇನ್ನಷ್ಟು ಪ್ಯಾಕೇಜ್ ಮತ್ತು ತೆರಿಗೆ ವಿನಾಯಿತಿಗಳ ನಿರೀಕ್ಷೆಯಲ್ಲಿದೆ ಉದ್ಯಮ, ವ್ಯಾಪಾರೀ ವಲಯ. ಷೇರುಪೇಟೆಯಲ್ಲೂ ಅದಕ್ಕೆ ತಕ್ಕಂತೆ ಏರಿಳಿತ ದಾಖಲಾಗಿದ್ದು, ನಿರೀಕ್ಷೆಗಳನ್ನು ಇರಿಸಿಕೊಂಡ ಹೂಡಿಕೆದಾರರ ಗಮನ ಬಜೆಟ್ ಕಡೆಗೆ ನೆಟ್ಟಿದೆ.

    ಉದ್ಯೋಗದ ನಿರೀಕ್ಷೆಯಲ್ಲಿ ಮಹಿಳೆಯರು

    ಕರೊನಾ ಸೋಂಕಿನ ಪ್ರಸರಣ ತಡೆಯಲು ಲಾಕ್​ಡೌನ್ ಮಾಡಿದ್ದರಿಂದ ಉಂಟಾದ ಉದ್ಯೋಗ ನಷ್ಟದ ಪ್ರಮಾಣ ತೀವ್ರ. 2020ರ ಏಪ್ರಿಲ್​ನಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರ ಪಾಲು ಶೇಕಡ 13.9. ನವೆಂಬರ್ ವೇಳೆಗೆ ಇದು ಶೇ.49ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ಡೇಟಾ ಉಲ್ಲೇಖಿಸಿದೆ. ಆದ್ದರಿಂದ ಮಹಿಳೆಯರಿಗೆ ಮತ್ತೆ ಉದ್ಯೋಗ ದೊರಕಿಸಿಕೊಡುವ, ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಅನುಕೂಲ ಮಾಡಿಕೊಡುವ ಕ್ರಮಗಳನ್ನು ಬಜೆಟ್ ಘೋಷಿಸಬೇಕಾಗಿದೆ.

    ಹಿರಿಯ ನಾಗರಿಕರ ಆಸೆ-ಆಕಾಂಕ್ಷೆ

    ಕೋವಿಡ್ ಕಾರಣ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಹಿರಿಯ ನಾಗರಿಕರು. ದೇಶದಲ್ಲಿ ಶೇಕಡ 8ರಿಂದ 9 ಹಿರಿಯ ನಾಗರಿಕರಿದ್ದು, ಅವರ ಪೈಕಿ 60 ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಪಾವತಿದಾರರು. ಅವರ ಆದಾಯವನ್ನು ಸಂಪೂರ್ಣ ತೆರಿಗೆ ಮುಕ್ತವನ್ನಾಗಿಸಿದರೆ ಒಳ್ಳೆಯದೆಂದು ಆಶಿಸುತ್ತಿದ್ದಾರೆ. ಅದಾಗದೇ ಹೋದರೆ, ಹಿರಿಯ ನಾಗರಿಕರ ಬಡ್ಡಿ ಆದಾಯ ವಿನಾಯಿತಿಯನ್ನು ಸೆಕ್ಷನ್ 80ಟಿಟಿಬಿ ಪ್ರಕಾರ ಈಗಿರುವ -ಠಿ; 50 ಸಾವಿರದಿಂದ -ಠಿ; 1.5 ಲಕ್ಷಕ್ಕೆ ಏರಿಸಿದರೆ ನಿವೃತ್ತರ ಬದುಕು ಇನ್ನಷ್ಟು ಸರಾಗವೆನಿಸಲಿದೆ. ಅದೇ ರೀತಿ ಉಳಿತಾಯಕ್ಕೆ ಹೆಚ್ಚಿನ ಬಡ್ಡಿದರವನ್ನೂ ನಿರೀಕ್ಷಿಸುತ್ತಿದ್ದಾರೆ.

    ಯುವಜನರ ಅಪೇಕ್ಷೆ

    ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ 2020ರ ನವೆಂಬರ್​ನಲ್ಲಿ ಶೇಕಡ 7.8ಕ್ಕೆ ತಲುಪಿದೆ. ಈ ಪೈಕಿ ಯುವಕರ ಪಾಲು ಶೇಕಡ 20ಕ್ಕೂ ಹೆಚ್ಚು. ಬಜೆಟ್​ನಲ್ಲಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಹಣ ಮೀಸಲಿಡುವುದರ ಜತೆಗೆ ಗ್ರಾಮೀಣ ಯುವಜನರಲ್ಲಿ ಉದ್ಯಮಶೀಲತೆ, ತರಬೇತಿ ಮತ್ತು ಇತರ ಸವಲತ್ತು ನೀಡುವತ್ತ ಗಮನಹರಿಸಬೇಕು. ಇದು ಗ್ರಾಮೀಣ ಪ್ರದೇಶದಲ್ಲಿ ಕಿರು ಉದ್ಯಮ ಶುರುವಾಗಲು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಕಾರಣವಾದೀತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts