More

    ಏರ್ತಿದೆ ಗ್ರಾಫ್ ಆದ್ರೂ ಸೇಫ್; ಟೆಸ್ಟ್ ಹೆಚ್ಚಳದಿಂದಷ್ಟೇ ಸಂಖ್ಯೆ ಏರಿಕೆ, ಅನ್ಯ ರಾಜ್ಯದವರ ಆಗಮನವೂ ಕಾರಣ

    | ರಮೇಶ ದೊಡ್ಡಪುರ 

    ಬೆಂಗಳೂರು: ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ 155 ಕರೊನಾ ಪ್ರಕರಣಗಳು ದೃಢಪಟ್ಟಿರುವುದು ತುಸು ಆತಂಕ ಹೆಚ್ಚಿಸಿದರೂ ಕರ್ನಾಟಕ ಇನ್ನೂ ಸುರಕ್ಷಿತವಾಗಿದೆ ಎಂಬುದು ಸಮಾಧಾನಕರ ಸಂಗತಿ. ಮೇ 4ರಂದು ರಾಜ್ಯದಲ್ಲಿ ಮೊದಲ ಬಾರಿಗೆ ಗುಣಮುಖರಾದವರ ಸಂಖ್ಯೆ ಏರುಗತಿಯತ್ತ ಸಾಗಿತ್ತು. ಆದರೆ ಪ್ರತಿ ದಿನ 20ರಿಂದ 50 ಪ್ರಕರಣಗಳು ಹೊಸದಾಗಿ ವರದಿಯಾಗುತ್ತಲೇ ಈ ಗ್ರಾಫ್ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಪರೀಕ್ಷಾ ಸಂಖ್ಯೆಯಲ್ಲಿ ಹೆಚ್ಚಳ, ಲಾಕ್​ಡೌನ್​ನ ಅಲ್ಪ ಸಡಿಲಿಕೆ, ಅನ್ಯ ರಾಜ್ಯಗಳಿಂದ ಜನರ ಆಗಮನ ಸೇರಿ ಅನೇಕ ಕಾರಣಗಳು ಪ್ರಕರಣ ಹೆಚ್ಚಳದ ಹಿಂದಿವೆ ಎಂಬುದು ವಾಸ್ತವವಾದರೆ, ಕಳೆದ ಕೆಲವು ದಿನಗಳಿಂದ ಪ್ರತಿ 100 ಪರೀಕ್ಷೆಯಲ್ಲಿ ಒಬ್ಬರಿಗಷ್ಟೇ ಸೋಂಕು ದೃಢಪಡುತ್ತಿರುವುದು ನೆಮ್ಮದಿ ತಂದಿದೆ.

    5 ದಿನದಲ್ಲಿ ಹಳೆಯ ಸ್ಥಿತಿ: ಮಾ.9ಕ್ಕೆ ಮೊದಲ ಪ್ರಕರಣ ವರದಿಯಾಗಿದ್ದ ಕರ್ನಾಟಕ ಮಾ.31ಕ್ಕೆ 100 ಪ್ರಕರಣಗಳಿಗೆ ತಲುಪಿತ್ತು. ನಂತರ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆ ಯಾಗುತ್ತಲೇ ಇದೆ. ತೀವ್ರ ಸೋಂಕಿಗೆ ಒಳಗಾಗಿ ಕೆಲವರು ಮೃತಪಟ್ಟರೂ ಹೆಚ್ಚಿನವರು ಗುಣಮುಖರಾಗಿ ಮನೆಗೆ ತೆರಳಿದ್ದು ವಿಶ್ವಾಸ ಹೆಚ್ಚಿಸಿತ್ತು. ಕರೊನಾ ಕುರಿತು ರಿಯಲ್​ಟೈಮ್ ವರದಿ ನೀಡಲು ರಾಜ್ಯ ಸರ್ಕಾರದ http://covid19dashboard.karnataka.gov.in/ ಪೋರ್ಟಲ್​ನಲ್ಲಿರುವ ದತ್ತಾಂಶದಂತೆ ಮೇ 4ಕ್ಕೆ ರಾಜ್ಯದಲ್ಲಿ ಸಕ್ರಿಯ ಸೋಂಕಿತರಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿನದಾಗಿತ್ತು. ಅಂದಿಗೆ ಒಟ್ಟು 656 ಸೋಂಕಿತರಲ್ಲಿ 308 ಸಕ್ರಿಯ ಪ್ರಕರಣಗಳಿದ್ದರೆ, ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ 321ಕ್ಕೆ ಏರಿತ್ತು. ಇದೇ ಸ್ಥಿತಿ ಮುಂದಿನ ನಾಲ್ಕು ದಿನವೂ ಮುಂದುವರಿಯಿತು. ಆದರೆ ಕಳೆದ ಮೂರು ದಿನಗಳಿಂದ ಪ್ರತಿದಿನದ ಸೋಂಕಿತರ ಸಂಖ್ಯೆ ವೇಗ ಪಡೆದುಕೊಂಡಿದ್ದು, ಮೇ 8ಕ್ಕೆ ಮತ್ತೆ ಹಳೆಯ ಸ್ಥಿತಿಗೆ (ಒಟ್ಟು ಸೋಂಕಿತರು 775, ಸಕ್ರಿಯ 377, ಗುಣಮುಖ 368) ಮರಳಿತು.

    ಇದನ್ನೂ ಓದಿ: ಪ್ರತ್ಯೇಕತಾವಾದಿ ಬೆಂಬಲಿಗರಿಗೆ ಪ್ರಶಸ್ತಿ ನೀಡಿತಾ ಪುಲಿಟ್ಜರ್​; ಸಮಿತಿಗೆ ನೂರಾರು ಗಣ್ಯರಿಂದ ಪತ್ರ

    ಹೆದರಬೇಕಿಲ್ಲ: ಮೇ 7ರಿಂದ ಮೇ 10ರವರೆಗೆ 155 ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ನಾಲ್ಕು ದಿನದಲ್ಲಿ 68 ಸೋಂಕಿತರು ಗುಣಮುಖರಾಗಿದ್ದಾರೆಂಬುದು ಸಮಾಧಾನಕರ ಸುದ್ದಿ. ಇದೇ ವೇಳೆ ಪರೀಕ್ಷಾ ಸಾಮರ್ಥ್ಯ ಹೆಚ್ಚಳವಾಗಿದ್ದು, ಇಲ್ಲಿವರೆಗೆ 1.07 ಲಕ್ಷ ಪರೀಕ್ಷೆ ನಡೆಸಲಾಗಿದೆ. ಅದರಲ್ಲೂ ಕೇವಲ ಕಳೆದ 13 ದಿನದಲ್ಲಿ 61,644 ಅಂದರೆ ಒಟ್ಟು ಪರೀಕ್ಷೆಯ ಶೇ.57 ಮಾದರಿ ಪರೀಕ್ಷೆ ನಡೆದಿದೆ. ಪರೀಕ್ಷೆ ಹೆಚ್ಚಳದಿಂದಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

    ಇದರಲ್ಲೂ ಸಮಾಧಾನದ ಸಂಗತಿಯೆಂದರೆ ರಾಜ್ಯದಲ್ಲಿ ಪ್ರತಿ 100 ಮಾದರಿ ಪರೀಕ್ಷೆಯಲ್ಲಿ 1ರಲ್ಲಿ ಮಾತ್ರ ಸೋಂಕು ದೃಢಪಡುತ್ತಿದೆ. ಈ ಪ್ರಮಾಣ ಮಹಾರಾಷ್ಟ್ರದಲ್ಲಿ 9, ದೆಹಲಿಯಲ್ಲಿ 8 ಹಾಗೂ ದೇಶದ ಸರಾಸರಿ 4 ಇದ್ದು, ಕರ್ನಾಟಕ 20ನೇ ಸ್ಥಾನದಲ್ಲಿದೆ. ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದ ಅಂದರೆ ತೀವ್ರ ಉಸಿರಾಟದ ತೊಂದರೆ(ಎಸ್​ಎಆರ್​ಐ) ಹಾಗೂ ಶೀತದ ಗುಣಲಕ್ಷಣದ ಜ್ವರದಿಂದ (ಐಎಲ್​ಐ) ಶೇ.8 ಜನರಲ್ಲಷ್ಟೇ ಸೋಂಕು ದೃಢಪಟ್ಟಿದೆ. ಶೇ.72 ಸೋಂಕಿತರು, ಈಗಾಗಲೆ ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ಹೊರರಾಜ್ಯ, ದೇಶದಿಂದ ಬಂದವರೇ ಆಗಿದ್ದಾರೆ. ಹೀಗಾಗಿ ಸಮುದಾಯಕ್ಕೆ ಹಬ್ಬುವ ಅಪಾಯವಿಲ್ಲ. ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶೇ.3 ಕೋವಿಡ್-19 ಹಾಸಿಗೆಗಳು ಭರ್ತಿ: ಜಿಲ್ಲಾ ಮಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆ ಎಂದು ನಿಗದಿಪಡಿಸಿದ್ದರಿಂದ ರಾಜ್ಯದಲ್ಲಿ ಏ.6ಕ್ಕೆ 4,030 ಕರೊನಾ ಹಾಸಿಗೆಗಳು ಲಭ್ಯವಾಗಿದ್ದವು. ನಂತರದಲ್ಲಿ, ಸೋಂಕು ಹೆಚ್ಚಾಗುತ್ತಿರುವಂತೆ ಮತ್ತು ಸಮುದಾಯಕ್ಕೆ ಹರಡಿದರೆ ಕೈಗೊಳ್ಳುವ ಕ್ರಮದ ಭಾಗವಾಗಿ ಅನೇಕ ಖಾಸಗಿ ಆಸ್ಪತ್ರೆಗಳನ್ನೂ ಸೇರ್ಪಡೆ ಮಾಡಲಾಗಿದೆ. ಇದೀಗ ರಾಜ್ಯದ ಎಲ್ಲ ನಿಗದಿಪಡಿಸಿದ ಕೋವಿಡ್ ಆಸ್ಪತ್ರೆಗಳೂ ಸೇರಿ 13,733 ಹಾಸಿಗೆಗಳು ಲಭ್ಯವಿವೆ. ಸದ್ಯ 422 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಒಟ್ಟಾರೆ ಲಭ್ಯ ಹಾಸಿಗೆಗಳ ಪೈಕಿ ಶೇ.3 ಬಳಕೆಯಲ್ಲಿವೆ. ಇನ್ನೂ ಸುಮಾರು 30 ಪಟ್ಟು ರೋಗಿಗಳು ಹೆಚ್ಚಿದರೂ ನಿಭಾಯಿಸುವಷ್ಟು ಸೌಲಭ್ಯವಿದೆ. ಅಗತ್ಯ ಪ್ರಮಾಣದಲ್ಲಿ ಟೆಸ್ಟಿಂಗ್ ಕಿಟ್, ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್​ಗಳೂ ಲಭ್ಯವಿವೆ. ಕಡಿಮೆಯಾದರೆ, ಬೇರೆ ರಾಜ್ಯಗಳಿಂದ ತ್ವರಿತವಾಗಿ ಪಡೆಯಲು ಕೇಂದ್ರ ಸರ್ಕಾರದ ಕೇಂದ್ರೀಕೃತ ಪೋರ್ಟಲ್​ನಲ್ಲಿ ಅವಕಾಶವಿದೆ.

    ಸರ್ಕಾರ ಸನ್ನದ್ಧ: ಕರೊನಾ ಆತಂಕ ಎದುರಿಸುತ್ತಿರುವ ಎಲ್ಲರನ್ನೂ ಪರೀಕ್ಷೆ ಮಾಡಿದರಷ್ಟೇ ವೈರಸ್​ನ ಗಂಭೀರತೆಯ ಸ್ಪಷ್ಟ ರೂಪ ಸಿಗುತ್ತದೆ ಹಾಗೆಯೇ ಚಿಕಿತ್ಸೆ ನೀಡುವುದಕ್ಕೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 30 ಪಟ್ಟು ಹೆಚ್ಚಾದರೂ ನಿಭಾಯಿಸುವಷ್ಟು ಕೋವಿಡ್-19 ಹಾಸಿಗೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಬೇಕಾಗಬಹುದಾದ ಔಷಧ, ಪಿಪಿಇ ಕಿಟ್​ಸಾಕಷ್ಟು ಪ್ರಮಾಣದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts