More

    ಲಾಕ್‌ಡೌನ್ ಪರಿಣಾಮ ಹೆಚ್ಚಿದ ಖಿನ್ನತೆ, ಕಾಡುವ ಚಿಂತೆಗೆ ಬಾಡುವ ಮನಸ್ಸು

    – ವೇಣುವಿನೋದ್ ಕೆ.ಎಸ್. ಮಂಗಳೂರು

    ಜಗತ್ತಿನೆಲ್ಲೆಡೆ ಕರೊನಾ ಕಾಯಿಲೆ ಮರಣಮೃದಂಗ…ಎಲ್ಲೆಡೆ ಸಾವು, ನೋವು…ಮನೆಯಲ್ಲೇ ಕುಳಿತಾಗ ಕಾಡುವ ಚಿಂತೆ, ಮುಂದೇನೋ ಎನ್ನುವ ಆತಂಕ…
    ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲೂ ಅನೇಕ ಮಂದಿಯಲ್ಲಿ ಖಿನ್ನತೆ ಕಾಡತೊಡಗಿದೆ. ನಗರದ ಪ್ರಮುಖ ಮಾನಸಿಕ ರೋಗ ತಜ್ಞರು ಈ ವಿಚಾರ ದೃಢಪಡಿಸಿದ್ದಾರೆ.

    ಮನೆಯೊಳಗೇ ಕುಳಿತಾಗ ಹಲವು ರೀತಿಯ ಚಿಂತೆಗಳು ಕಾಡುವುದರಿಂದ ಮನಸ್ಸು ದೃಢವಿಲ್ಲದವರಲ್ಲಿ ಈ ಖಿನ್ನತೆ ಕಾಡುತ್ತದೆ. ಆಗುತ್ತಿರುವ ಆರ್ಥಿಕ ನಷ್ಟ, ಭವಿಷ್ಯದ ಚಿಂತೆ ಒಂದು ಕಡೆಯಾದರೆ ಕರೊನಾ ತಮಗೆ ಬಾಧಿಸಬಹುದೇ? ತಾವು ಕರೊನಾದಿಂದ ಸಾಯಬಹುದೇ? ಕುಟುಂಬಕ್ಕೇನಾದರೂ ಆದರೆ….ಅನ್ನುವ ಚಿಂತೆಗಳು ಮಂಗಳೂರಿಗರನ್ನು ಬಾಧಿಸುತ್ತಿವೆ.

    ಓಡಾಟವಿಲ್ಲದೆ ಚಿಂತೆ: ಜನರಿಗೆ ಮನೆಯಲ್ಲೇ ಕುಳಿತು ಅಭ್ಯಾಸವಿಲ್ಲ, ಹಾಗಾಗಿ ಕರೊನಾ ಲಾಕ್‌ಡೌನ್‌ನಿಂದಾಗಿ ದೊಡ್ಡ ಸಮಸ್ಯೆಯಾಗಿರುವುದೇ ಮನೆಯೊಳಗಿರುವುದು. ಅದರಿಂದಾಗಿ ಜನ ಡಿಸ್ಟರ್ಬ್ಡ್ ಆದಂತೆ ಕಾಣುತ್ತದೆ. ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಚಿಂತೆಯಾದರೆ ಉದ್ಯೋಗಿಗಳಿಗೆ ಕೆಲಸ ಹೋಗುವ ಬಗ್ಗೆ ಆತಂಕ, ಅಂತಹ ವಿಚಾರದ ಬಗ್ಗೆ ಹೆಚ್ಚು ಜನ ಸಂಪರ್ಕ ಮಾಡುತ್ತಿರುವುದು ಹೌದು ಎನ್ನುತ್ತಾರೆ ನಗರದ ಸೈಕಿಯಾಟ್ರಿಸ್ಟ್ ಡಾ.ಕಿರಣ್ ಕುಮಾರ್.

    ಜನರಿಗೆ ಡಿಪ್ರೆಷನ್, ಫೋಬಿಯಾ(ಅಸಹಜ ಭೀತಿ) ಕಾಡತೊಡಗಿದೆ, ಹಿಂದೆ ಅಂತಹ ಸಮಸ್ಯೆ ಇದ್ದವರಿಗೆ ಈಗ ಉಲ್ಬಣಿಸುತ್ತಿದೆ. ಬಹಳಷ್ಟು ಮಂದಿಗೆ ಸುಸೈಡ್ ಮಾಡುವ ಮನಸ್ಥಿತಿ ಜಾಸ್ತಿಯಾಗಿದೆ. ಸುದ್ದಿ, ಸೋಶಿಯಲ್ ಮೀಡಿಯಾ ನೋಡಿ ಕೆಲವರು ಭಯ ಪಡುತ್ತಾರೆ, ಖಿನ್ನರಾಗುತ್ತಾರೆ. ಸುಮ್ಮನೆ ಕುಳಿತಾಗ ನೆಗೆಟಿವ್ ಯೋಚನೆಗಳೇ ಬರುತ್ತವೆ, ಚಿಕಿತ್ಸೆಗೆ ಬರಲಾಗದೆ ಔಷಧ ಸಿಗದೆಯೂ ತೊಂದರೆಯಾಗಿದೆ, ದಿನಕ್ಕೆ 40-50 ಕರೆಗಳು ಬರುತ್ತಿವೆ ಎನ್ನುತ್ತಾರೆ ಹಿರಿಯ ಮನೋರೋಗ ತಜ್ಞ ಡಾ.ರವೀಶ್ ತುಂಗ.

    ಖಿನ್ನತೆ ಲಕ್ಷಣಗಳೇನು?: ಅಯ್ಯೋ ನನಗೆ ಮನೆಯಲ್ಲೇ ಕುಳಿತು ಏನು ಮಾಡಲೂ ತೋಚುತ್ತಿಲ್ಲ ಎನ್ನುವಂತಹ ಸ್ಥಿತಿ, ಬೇಸರ, ಉತ್ಸಾಹ ಕಳೆದುಕೊಳ್ಳುವುದು, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಋಣಾತ್ಮಕ ಯೋಚನೆಗಳೇ ಕಣ್ಣಮುಂದೆ ಬರುವುದು. ಬದುಕು ಬೇಡವೆನ್ನಿಸುವುದು, ಕೆಲವೊಮ್ಮೆ ಇದು ಹೆಚ್ಚಾಗಿ ಆತ್ಮಹತ್ಯೆಯ ಯೋಚನೆಯೂ ಬರಬಹುದು.

    ಚಿಂತಿಸದಿರಿ, ಹೊಸ ಕೌಶಲ ಕಲಿಯಿರಿ: ಲಾಕ್‌ಡೌನ್ ವೇಳೆ ಮನೆಯಲ್ಲೇ ಇರಬೇಕಾಗುತ್ತದೆ, ಹಾಗೆಂದು ನಮ್ಮ ಸ್ಥಿತಿಯಲ್ಲೇ ಒಂದಷ್ಟು ಬದಲಾವಣೆ ರೂಢಿಸಿಕೊಳ್ಳಬಹುದು ಎನ್ನುತ್ತಾರೆ ಮನೋವೈದ್ಯರು. ಯೋಗ, ಧ್ಯಾನ, ವರ್ಕ್ ಔಟ್ ಮಾಡಬಹುದು. ಅನೇಕ ಹೊಸ ವಿಷಯ, ಕೌಶಲಗಳನ್ನು ಆನ್‌ಲೈನ್ ಕೋರ್ಸ್ ಮೂಲಕ ಕಲಿತುಕೊಳ್ಳಬಹುದು. ಹೊಸ ಬಿಸಿನೆಸ್ ಮಾಡುವುದಾದರೆ ಅದಕ್ಕೆ ಸೂಕ್ತ ಯೋಜನೆ ರೂಪಿಸಿಕೊಳ್ಳಬಹುದು. ಮುಖ್ಯವಾಗಿ ಮನೆಯವರೊಂದಿಗೆ ಬೆರೆಯಿರಿ. ಬಂಧುಮಿತ್ರರಿಗೆ ಫೋನ್‌ಮೂಲಕ ಕರೆ ಮಾಡಿ ಮನಬಿಚ್ಚಿ ಮಾತನಾಡಿ, ನೀವೂ ಹಗುರಾಗಿ, ಅವರಿಗೂ ನಿರಾಳತೆ ನೀಡಿ.

    ಲಾಕ್‌ಡೌನ್‌ನಿಂದ ಜನರ ಮಾನಸಿಕ ಸ್ಥಿತಿ ಮೇಲೆ ದೊಡ್ಡ ಪರಿಣಾಮ ಆಗಿರುವುದು ನಿಜ. ಚಿಕಿತ್ಸೆಗೆ ಬರಲು ಆಗುತ್ತಿಲ್ಲ, ಗಂಭೀರ ಸ್ಥಿತಿ ಇರುವವರಷ್ಟೇ ಬರುತ್ತಾರೆ, ಆದಷ್ಟೂ ನಾವು ಟೆಲಿಮೆಡಿಸಿನ್ ಮೂಲಕ ಕೌನ್ಸೆಲಿಂಗ್ ಮಾಡುತ್ತಿದ್ದೇವೆ.
    – ಡಾ.ರವೀಶ್ ತುಂಗ, ಮನೋವೈದ್ಯ, ಮಂಗಳೂರು

    ಎಲ್ಲ ಕಡೆಯಲ್ಲೂ ಕರೊನಾ ಸಮಸ್ಯೆ ಇದೆ. ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ, ನಷ್ಟ, ಸೋಲು ಇದ್ದದ್ದೇ..ಹೊಸ ಕೌಶಲ ಕಲಿತುಕೊಳ್ಳಿ.ನೆಂಟರಿಷ್ಟರಿಗೆ ಫೋನ್ ಮೂಲಕ ಮಾತನಾಡಿ…ಹೊಸ ಯೋಜನೆಗಳನ್ನು ಸಿದ್ಧಪಡಿಸಿ.
    -ಡಾ.ಕಿರಣ್ ಕುಮಾರ್, ಮನೋವೈದ್ಯ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts