More

    ಠೇವಣಿ ಮರುಪಾವತಿ ಸಾಲಗಾರರ ಹೊಣೆ!

    ಬೆಳಗಾವಿ: ಸಹಕಾರಿ ಸಂಸ್ಥೆಗಳಲ್ಲಿ ಗ್ರಾಹಕರು ಹೂಡಿರುವ ಠೇವಣಿ ಮರುಪಾವತಿಸುವಲ್ಲಿ ಸೊಸೈಟಿಗಳಿಗೆ ಸಾಧ್ಯವಾಗದಿದ್ದರೆ ಆಯಾ ಸೊಸೈಟಿಗಳಲ್ಲಿ ಸಾಲ ಪಡೆದವರೇ ಇನ್ಮುಂದೆ ನೇರ ಹೊಣೆಗಾರರಾಗಲಿದ್ದಾರೆ.

    ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಹೊಂದಿರುವ ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸದ ಕಾರಣಕ್ಕೆ ರಾಜ್ಯದ ಹಲವು ಸಂಸ್ಥೆಗಳು ಈಗಾಗಲೇ ಆರ್ಥಿಕ ಇಕ್ಕಟ್ಟಿಗೆ ಸಿಲುಕಿವೆ. ಸಾಲಗಾರರು ಸಾಲ ಮರುಪಾವತಿಸದಿದ್ದರೆ ಅವುಗಳ ಆಡಳಿತ ಮಂಡಳಿಯವರು ಠೇವಣಿ ನೀಡುವುದಾದರೂ ಎಲ್ಲಿಂದ? ಇಂತಹ ಬಹುತೇಕ ಪ್ರಕರಣಗಳಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಜೈಲು ಪಾಲಾದರೂ ಇದುವರೆಗೂ ಯಾವುದೇ ಠೇವಣಿದಾರರಿಗೆ ಹಣ ಕೈಸೇರಿಲ್ಲ..!

    ಇಂಥದ್ದೇ ಪ್ರಕರಣಗಳಿಂದ ಸೂಪರ್‌ಸೀಡ್ ಆಗಿದ್ದ ಸಂಸ್ಥೆಯೊಂದರ ವಿಚಾರಣೆ ಕೈಗೆತ್ತಿಕೊಂಡಿರುವ ಬೆಳಗಾವಿ ಜಿಲ್ಲಾ ಗ್ರಾಹಕರ ನ್ಯಾಯಾಲಯವು, ಠೇವಣಿ ಮರುಪಾವತಿಗೆ ಸಾಲಗಾರರನ್ನೇ ಹೊಣೆಗಾರರನ್ನಾಗಿಸಿದೆ. ಈ ಕ್ರಮವೇ ಸೂಕ್ತ ಎಂದು ಮನ್ನಣೆ ನೀಡಿ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಸಾಲಗಾರರಿಗೆ ನೋಟಿಸ್ ನೀಡಿದೆ.

    ಅಧಿಕಾರಿಗಳ ಸಬೂಬು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿರುವ ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತದಲ್ಲಿ 43.23 ಲಕ್ಷ ರೂ. ಠೇವಣಿ ಹೂಡಿದ್ದ ಕಲ್ಲಪ್ಪ ಪಾರಿಸ ಮಾಳಗೆ ಅವರು ಮೆಚ್ಯುರಿಟಿ ನಂತರ ಮರುಪಾವತಿಸಲು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೌಹಾರ್ದ ಫೆಡರೇಷನ್ ಅಧಿಕಾರಿಗಳು, ‘2020ರ ಜ. 30ರಂದೇ ಸೊಸೈಟಿ ಸೂಪರ್ ಸೀಡ್ ಆಗಿದೆ. ಹೀಗಾಗಿ ಕೇಳುವವರೇ ಇಲ್ಲ ಎಂದು ಸಾಲಗಾರರು ಮರುಪಾವತಿಸುತ್ತಿಲ್ಲ’ ಎಂದು ಸಬೂಬು ನೀಡಿದ್ದಾರೆ.

    ಯಾರ ವಿರುದ್ಧ ದೂರು?

    ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಲು ಮುಂದಾದಾಗ ಯಾರ ವಿರುದ್ಧ ನೀಡುವುದು ಎಂಬ ಗೊಂದಲ ಎದುರಾಗಿದೆ. ಸೊಸೈಟಿಗೆ ಲಾಭ ತಂದುಕೊಡುವಲ್ಲಿ ಸಾಲ ವಿತರಿಸಿದ ಆಡಳಿತ ಮಂಡಳಿ ವಿರುದ್ಧ ದೂರುವುದು ಸರಿಯೇ? ಈ ಪ್ರಶ್ನೆ ಎದುರಾದಾಗ, ಈಗಾಗಲೇ ರಾಜ್ಯದಲ್ಲಿ ಇಂತಹ ಅನೇಕ ಪ್ರಕರಣಗಳಲ್ಲಿ ಆಡಳಿತ ಮಂಡಳಿಯನ್ನೇ ತಪ್ಪಿತಸ್ಥರೆಂದು ದಾಖಲಾದ ಪ್ರಕರಣಗಳಲ್ಲಿ ಅವರೆಲ್ಲ ಜೈಲು ಸೇರಿದ್ದಾರೆಯೇ ವಿನಹ ಠೇವಣಿದಾರರಿಗೆ ಮರುಪಾವತಿಯಾಗಿಲ್ಲ. ಹೀಗಾಗಿ ಸಾಲ ಪಡೆದು ಆಡಳಿತ ಮಂಡಳಿಗೂ ವಂಚಿಸುತ್ತಿರುವ ಸಾಲಗಾರರನ್ನೇ ಹೊಣೆಯನ್ನಾಗಿಸುವುದು ಸೂಕ್ತ ಎಂದು ಅವರ ವಿರುದ್ಧವೇ ಸೆ. 10ರಂದು ದೂರು ದಾಖಲಿಸಿಕೊಂಡು ನೋಟಿಸ್ ನೀಡಿದೆ.

    ಸಾಲಗಾರರ ವಿರುದ್ಧ ಪ್ರಕರಣ ದಾಖಲು

    ಸೊಸೈಟಿಯಲ್ಲಿ ತಕ್ಕಮಟ್ಟಿಗೆ ಠೇವಣಿ ಹೂಡಿ ಸೊಸೈಟಿಯಿಂದ ಸಾಲ ಪಡೆದಿರುವ ಮಾಜಿ ಸಚಿವ ಶಶಿಕಾಂತ ನಾಯಕ , ಜಗದೀಶ ಕಲಬುರ್ಗಿ, ಶಿವಗೌಡ ಪಾಟೀಲ, ಗೌಸಮೋಹಿದ್ದೀನ್, ದಯಾನಂದ ಮಠಪತಿ, ಸದಾಶಿವ ಮಠಪತಿ ಇತರರು ಸಾಲಪಡೆದು ಮರುಪಾವತಿಸದೇ ಇರುವವರಿಗೆ ನೋಟಿಸ್ ನೀಡಲಾಗಿದೆ. ಸಹಕಾರಿ ಸಂಸ್ಥೆ ಸೂಪರ್ ಸೀಡ್ ಆಗಿದೆ ಎಂದು ಜಾರಿಕೊಳ್ಳುತ್ತಿರುವ ಆಡಳಿತಾಧಿಕಾರಿ, ಎಲ್ಲ ಸಾಲಗಾರರು ಮತ್ತು ಜಾಮೀನುದಾರರ ವಿರುದ್ಧ ಗ್ರಾಹಕ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ ಎಂದು ವಕೀಲ ಶಿವಾನಂದ ಹುರುಳಿ ತಿಳಿಸಿದ್ದಾರೆ.

    ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಬಹುತೇಕ ಎಲ್ಲ ಪ್ರಕರಣಗಳಲ್ಲಿ ಅವರು ಜೈಲು ಸೇರಿ, ಸೊಸೈಟಿಗಳ ಆಸ್ತಿ ಹರಾಜು ಮಾಡಿದ್ದಾರೆ. ಆದರೂ ಎಲ್ಲ ಠೇವಣಿದಾರರಿಗೆ ಹಣ ಮರುಪಾವತಿಸಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಅದಕ್ಕೆ ಪರಿಹಾರವಾಗಿ ಸಾಲಗಾರರನ್ನೇ ಹೊಣೆಯಾಗಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದು ಸಹಕಾರಿ ಕ್ಷೇತ್ರದ ಸಾಲ ವಸೂಲಾತಿಗೂ ಅನುಕೂಲವಾಗಲಿದೆ. ಹೀಗಾಗಿ ಈ ಪ್ರಕರಣ ಸಹಕಾರಿಗೆ ದಿಕ್ಸೂಚಿ ಎನ್ನಬಹುದು.
    ಶಿವಾನಂದ ಹುರುಳಿ ಅರ್ಜಿದಾರರ ಪರ ವಕೀಲ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts