More

    ಶಾಲೆಗೆ ಸೇರುವ ಮಕ್ಕಳ ಹೆಸರಲ್ಲಿ ಠೇವಣಿ! ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಿಕ್ಷಕಿ ಉಪಾಯ

    ಕುಂದಾಪುರ: ಶಿಕ್ಷಕಿಯೊಬ್ಬರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಶಾಲೆಗೆ ಸೇರುವ ಮಕ್ಕಳ ಹೆಸರಲ್ಲಿ ಡಿಪಾಸಿಟ್ ಇಡುವ ಮೂಲಕ ಹಾಜರಾತಿ ಹೆಚ್ಚಿಸಿಕೊಂಡಿದ್ದಾರೆ!

    ಈ ವಿನೂತನ ಯೋಜನೆ ಅಳವಡಿಸಿಕೊಂಡವರು ಕುಂದಾಪುರ ತಾಲೂಕು ಶಂಕರನಾರಾಯಣದ ರೇಖಾ ಪ್ರಭಾಕರ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ವಿನೂತನ ಯೋಜನೆ ಚಾಲ್ತಿಯಲ್ಲಿದೆ. ರೇಖಾ 2010ರಲ್ಲಿ ನೂಲಗ್ಗೇರಿ ಸರ್ಕಾರಿ ಶಿಕ್ಷಕಿಯಾಗಿ ಸೇರಿದಾಗ, ಶಾಲೆಯಲ್ಲಿ 1ರಿಂದ 7ನೇ ತರಗತಿ ಓದುವ ಮಕ್ಕಳ ಸಂಖ್ಯೆ 20. ಹೊಸದಾಗಿ ಸೇರುವ ಹುಡುಗರು ಪ್ರತೀ ವರ್ಷ ಎರಡರಿಂದ ಮೂರು ಮಾತ್ರ. ರೇಖಾ ಮಕ್ಕಳನ್ನು ಶಾಲೆಗೆ ಕರೆತರಲು ನಾನಾ ಪ್ರಯತ್ನ ಮಾಡಿದರು. ಪಾಲಕರ, ಊರ ಹಿರಿಯರ ಭೇಟಿಯಾಗಿ ಮನ ಒಲಿಸುವ ಪ್ರಯತ್ನವನ್ನೂ ಮಾಡಿದರು. ಆದರೆ, ಪ್ರಯತ್ನ ವಿಫಲವಾಯಿತು. ಆಗ ಹೊಳೆದ್ದೇ ಈ ಹೊಸ ಸೂತ್ರ – ಠೇವಣಿ ಯೋಜನೆ!

    ಠೇವಣಿ ವ್ಯವಸ್ಥೆ ಹೇಗೆ?
    ಇವರು ಠೇವಣಿ ಯೋಜನೆ ಪ್ರಾರಂಭಿಸಿದ್ದು 2013-14ರಲ್ಲಿ. 1ನೇ ತರಗತಿಗೆ ಶಾಲೆಗೆ ಸೇರುವ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ. ಠೇವಣಿ ಇಡುತ್ತಾರೆ. ಆ ಮಗು ಹತ್ತನೇ ತರಗತಿ ಮುಗಿಸಿದ ತಕ್ಷಣ ಬಡ್ಡಿ ಸಮೇತ ಹಣ ಸಿಗುವಂತೆ ಮಾಡುವುದೇ ಈ ಯೋಜನೆ. ಹೊಸ ಪ್ರಯತ್ನದ ಫಲವಾಗಿ ಪ್ರಸಕ್ತ ಶಾಲೆಯಲ್ಲಿ ಮಕ್ಕಳ ಸಂಖ್ಯೆ 83ಕ್ಕೇರಿದೆ. ಠೇವಣಿಗಾಗಿ ಯಾರ ಮುಂದೆಯೂ ಕೈಚಾಚದೆ ಸ್ವಂತ ಹಣವನ್ನೇ ಬಳಸುತ್ತಿದ್ದಾರೆ. ಈವರೆಗೆ ಇದಕ್ಕೆ ವ್ಯಯಿಸಿದ ಮೊತ್ತ ಎಷ್ಟು ಎಂದು ಕೇಳಿದರೆ ‘ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗ ಬಾರದು’ ಎನ್ನುತ್ತಾರೆ ರೇಖಾ. ಪತಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರಭಾಕರ್ ಪತ್ನಿಯ ಈ ಪ್ರಯತ್ನಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ.

    ನಾನು ಮತ್ತು ಪತಿ ಬಡತನದಲ್ಲೇ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ನೆರವಾಗಿದೆ. ಅದರ ಪರಿಣಾಮ ನಮ್ಮಿಬ್ಬರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅದಕ್ಕೆ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೇವೆ. ಸಮಾಜದ ಋಣ ಹೀಗಾದರೂ ಸ್ವಲ್ಪ ತೀರಿಸುವ ಅವಕಾಶ ಸಿಕ್ಕಿದೆ.

    | ರೇಖಾ ಪ್ರಭಾಕರ, ಡಿಪಾಸಿಟ್ ಯೋಜನೆ ಜಾರಿಗೆ ತಂದ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts