More

    654 ಬಿಪಿಎಲ್ ಕಾರ್ಡ್ ರದ್ದು

    654 ಬಿಪಿಎಲ್ ಕಾರ್ಡ್ ರದ್ದು

    ಕೊಪ್ಪ: ತಾಲೂಕಿನಲ್ಲಿ ಒಂದು ವರ್ಷದಿಂದ ವಿವಿಧ ಕಾರಣಕ್ಕಾಗಿ 654 ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ ಎಂದು ತಾಲೂಕು ಆಹಾರ ಇಲಾಖೆ ನಿರೀಕ್ಷಕ ಶ್ರೀಕಾಂತ್ ತಿಳಿಸಿದರು.

    ಗುರುವಾರ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ವಾಹನ ಹೊಂದಿರುವುದು, ಹೆಚ್ಚು ಆದಾಯ ಸೇರಿ ವಿವಿಧ ಕಾರಣದಿಂದ ಕೆಲವು ಬಿಪಿಎಲ್ ಕಾರ್ಡ್​ಗಳನ್ನು ಅನರ್ಹಗೊಳಿಸಲಾಗಿದೆ. ಇನ್ನೂ ಕೆಲವರು ಇಲಾಖೆಗೆ ಬಂದು ಬಿಪಿಎಲ್ ಕಾರ್ಡ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು ಎಂದು ಮಾಹಿತಿ ನೀಡಿದರು.

    ಮೇಗುಂದ ಹೋಬಳಿ ಕಲ್ಲುಗುಡ್ಡೆ ಮತ್ತು ಗಣಪತಿಕಟ್ಟೆಯಲ್ಲಿರುವ ಅಂಗನವಾಡಿಗೆ ಅನುಮತಿ ಪಡೆಯದೆ ಎರಡು ದಿನ ರಜೆ ನೀಡಲಾಗಿತ್ತು. ಈ ಸಂಬಂಧ ಅಂಗನವಾಡಿ ಸಹಾಯಕಿ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಿರ ಎಂದು ತಾಪಂ ಉಪಾಧ್ಯಕ್ಷೆ ಲಲಿತಾ ಅವರು ಸಿಡಿಪಿಒ ಮೋಹಿನಿ ಅವರನ್ನು ಪ್ರಶ್ನಿಸಿದರು.

    ಪತ್ರಿಕ್ರಿಯಿಸಿದ ಸಿಡಿಪಿಒ ಅವರು, ಜಾತ್ರೆ ನಿಮಿತ್ತ ರಜೆ ಮಾಡಿರುವುದು ಹಾಗೂ ಅಂಗನವಾಡಿಯನ್ನು ತೆರೆದಿಲ್ಲ ಎಂದು ತಿಳಿಸಿದ್ದಾರೆ. ಅನುಮತಿ ಪಡೆಯದೆ ಅಂಗನವಾಡಿ ಮುಚ್ಚಿದ್ದರಿಂದ ಉನ್ನತ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

    ಕೆಡಿಪಿ ಸಭೆಗೆ ಪ್ರತಿ ಬಾರಿಯೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಬರುವುದಿಲ್ಲ. ಯಾವುದೇ ಮಾಹಿತಿ ಇರದ ಅಧಿಕಾರಿಗಳನ್ನು ಸಭೆಗೆ ಕಳುಹಿಸಿ ಸಮರ್ಪಕ ಮಾಹಿತಿ ನೀಡುವುದಿಲ್ಲ. ಅರಣ್ಯ ಇಲಾಖೆಯ ಈ ನಡೆ ಸರಿಯಲ್ಲ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

    ಆಂಬುಲೆನ್ಸ್ ಚಾಲಕನ ಸಂಬಳಕ್ಕೆ ತಡೆ: ಜಯಪುರ ಆಸ್ಪತ್ರೆ ಆಂಬುಲೆನ್ಸ್ ಚಾಲಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಹಿಂದೆಯೂ ಕೆಡಿಪಿ ಸಭೆಯಲ್ಲಿ ರ್ಚಚಿಸಲಾಗಿತ್ತು. ಬಸರೀಕಟ್ಟೆಯಲ್ಲಿಯೇ ಆಂಬುಲೆನ್ಸ್ ಇರಿಸಿಕೊಂಡು ದಿನ ಕಳೆಯುತ್ತಾನೆ. ಹಾಜರಾತಿ ನೀಡಲು ಜಯಪುರಕ್ಕೆ ಬರುತ್ತಾನೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರೀಟಿ ಸಭೆಗೆ ತಿಳಿಸಿದರು. ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್ ಮಾತನಾಡಿ, ಆತನ ಸಂಬಳ ತಡೆಹಿಡಿಯಿರಿ ಎಂದು ವೈದ್ಯಾಧಿಕಾರಿಗೆ ತಿಳಿಸಿದರು.

    ನಿವೇಶನ ವಿತರಣೆಗೆ ಸರ್ವೆ: ಹರಿಹರಪುರ, ಅಸಗೋಡು, ಶಾನುವಳ್ಳಿ ಗ್ರಾಪಂಗಳ ಆಶ್ರಯ ನಿವೇಶನಕ್ಕೆ ಗುರುತಿಸಿದ್ದ ಜಾಗಗಳು ಸೆಕ್ಷನ್ 4 ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಸಂಬಂಧ ಅರಣ್ಯ ಇಲಾಖೆ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗೆ ಪತ್ರ ಬರೆದು ಸರ್ವೆ ನಡೆಸುವಂತೆ ಶೀಘ್ರದಲ್ಲಿ ಸೂಚಿಸಲಾಗುತ್ತದೆ ಎಂದು ಶಿರಸ್ತೇದಾರ್ ಶೇಷಮೂರ್ತಿ ಸಭೆಗೆ ಮಾಹಿತಿ ನೀಡಿದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್ ಮಾತನಾಡಿ, 94ಸಿ ಅಡಿಯಲ್ಲಿ ಬ್ಯಾಂಕ್​ಗೆ ಹಣ ಕಟ್ಟಿದವರಿಗೆ ಯಾಕೆ ಹಕ್ಕುಪತ್ರ ವಿತರಣೆ ಮಾಡಿಲ್ಲ ಎಂದು ಶಿರಸ್ತೇದಾರ್ ಅವರನ್ನು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಶಿರಸ್ತೇದಾರ್, ಇನ್ನೂ 110 ಹಕ್ಕುಪತ್ರ ವಿತರಿಸಲು ಬಾಕಿಯಿದೆ. ಅದು ಸೆಕ್ಷನ್ 4 ಮತ್ತು ಗೋಮಾಳ ಪ್ರದೇಶದಲ್ಲಿ ಬಂದರೆ ವಿತರಿಸಲು ಸಾಧ್ಯವಿಲ್ಲ ಎಂದು ಸಭೆಗೆ ಸ್ಪಷ್ಟಪಡಿಸಿದರು.

    ಒಂದು ಗಂಟೆ ತಡವಾಗಿ ಪ್ರಾರಂಭವಾದ ಸಭೆ: ಗುರುವಾರ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕೆಡಿಪಿ ಸಭೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿದ್ದರಿಂದ ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಬಿಜೆಪಿ ಸುಧಾಕರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ತಾಪಂ ಸಭಾಂಗಣದಲ್ಲಿ ಬಿಜೆಪಿ ಮುಖಂಡರು, ಅಧಿಕಾರಿಗಳ ಸಮ್ಮುಖದಲ್ಲಿ ಅಭಿನಂದನೆ ಕಾರ್ಯಕ್ರಮ ನಡೆಸಿದ್ದರಿಂದ ಕೆಡಿಪಿ ಸಭೆ ತಡವಾಗಿ ಪ್ರಾರಂಭವಾಯಿತು.

    ತಾಪಂ ಇಒ ನವೀನ್​ಕುಮಾರ್, ಸದಸ್ಯರಾದ ಪ್ರವೀಣ್​ಕುಮಾರ್, ಮಧುರಾ ಶಾಂತಪ್ಪ, ಕೃಷ್ಣಯ್ಯ ಶೆಟ್ಟಿ, ಮಂಜುಳಾ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts