More

    ನೂತನ ಸಚಿವರಿಗಿಂದು ಖಾತೆ ಹಂಚಿಕೆ? ಪಟ್ಟಿ ಸಿದ್ಧಪಡಿಸಿದ ಸಿಎಂ ಯಡಿಯೂರಪ್ಪ…

    ಬೆಂಗಳೂರು: ನೂತನ ಸಚಿವರಿಗೆ ಯಾವ ಖಾತೆ ನೀಡಬೇಕೆಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದ್ದು, ದೆಹಲಿ ವರಿಷ್ಠರು ಸಮ್ಮತಿಸಿದರೆ ಸೋಮವಾರವೇ ರಾಜ್ಯಪಾಲರ ಅಂಕಿತಕ್ಕೆ ರವಾನೆಯಾಗುವ ಸಾಧ್ಯತೆಗಳಿವೆ. ಸಚಿವ ಸಂಪುಟಕ್ಕೆ ಸೇರಲು ಎರಡು ತಿಂಗಳು ಕಾದೆವು. ಇದೀಗ ಸಚಿವರಾಗಿ ನಾಲ್ಕು ದಿನಗಳಾಗಿದ್ದು, ಖಾತೆರಹಿತ ಮಂತ್ರಿಗಳಾಗಿ ಮತ್ತಷ್ಟು ದಿನ ದೂಡಬೇಕಾದೀತು ಎಂಬ ಅಳುಕು ಹೊಸಬರ ಪೈಕಿ ಕೆಲವರಲ್ಲಿ ಮೂಡಿದೆ. ಆದರೂ ಸಿಎಂ ಪದೇ ಪದೆ ನೀಡುತ್ತಿರುವ ಹೇಳಿಕೆ ವಿಶ್ವಾಸ ಹೆಚ್ಚಿಸಿದೆ.

    ಪಕ್ಷ ಹಾಗೂ ಸರ್ಕಾರದ ಮಧ್ಯೆ ಸಮತೋಲನಕ್ಕೆ ಆದ್ಯತೆ ನೀಡಿ ಹೊಸಬರು ಹಾಗೂ ಹಳಬರನ್ನು ಸರಿದೂಗಿಸಿಕೊಂಡು ಹೋಗು ವಂತಹ ಪಟ್ಟಿ ಸಿದ್ಧಪಡಿಸಿದ್ದು, ಹೈಕಮಾಂಡ್ ಸುಲಭವಾಗಿ ಒಪ್ಪುತ್ತದೆ ಎಂಬ ಅಂದಾಜಿನಲ್ಲಿಯೇ ಸಿಎಂ ಖಾತೆ ಹಂಚಲು ಉತ್ಸುಕರಾಗಿದ್ದಾರೆ. ಪಕ್ಷ ಮೂಲ ಮತ್ತು ಹೊಸ ಸಚಿವರಿಗೆ ‘ಸಮಾನ ನ್ಯಾಯ’ ನೀಡಬೇಕೆಂಬ ವರಿಷ್ಠರ ಸೂಚನೆಯಂತೆ ಬಿಎಸ್​ವೈ ಖಾತೆ ಹಂಚಿಕೆ ಕಸರತ್ತು ನಡೆಸಿದ್ದಾರೆ.

    ವರಿಷ್ಠರ ಬಯಕೆ: ‘ಆಯ್ದ ಖಾತೆ’ಗಳು ಸಿಎಂ ಹಾಗೂ ಪ್ರಮುಖರ ಬಳಿಯೇ ಇರಬೇಕು ಎಂದು ವರಿಷ್ಠರು ಬಯಸಿದ್ದಾರೆ. ಬಜೆಟ್ ಸಿದ್ಧತೆ ಹೊಸ್ತಿಲಲ್ಲಿ ಖಾತೆಗಳ ಹಂಚಲಿರುವುದು ಮತ್ತೊಂದು ಮಹತ್ವದ ಸಂಗತಿಯಾಗಿದ್ದು, ಹೊಸಬರಲ್ಲಿ ಎಂಟು ಜನರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಇಲಾಖೆ ಮುಖ್ಯಸ್ಥರ ಪರಿಚಯದ ಬೆನ್ನಲ್ಲೇ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಬೇಕಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಖಾತೆಗಳನ್ನು ಹೊಸಬರಿಗೆ ಕೊಟ್ಟರೆ ಸಮಸ್ಯೆ ಉಂಟಾದೀತು ಎಂಬ ಆತಂಕ ವರಿಷ್ಠರದ್ದು ಎಂದು ಉನ್ನತ ಮೂಲಗಳು ತಿಳಿಸಿವೆ.

    ಮನವರಿಕೆ ಪ್ರಯತ್ನ: ಖಾತೆಗಳ ಹಂಚಿಕೆ ವಿಷಯದಲ್ಲೂ ವರಿಷ್ಠರ ಮನವೊಲಿಸಲು ಬಿಎಸ್​ವೈ ಮತ್ತೊಂದು ಸುತ್ತಿನ ಸರ್ಕಸ್ ನಡೆಸಬೇಕಾದ ಲಕ್ಷಣಗಳಿವೆ. ನೂತನ ಸಚಿವರ ಪೈಕಿ ಕೆಲವರಿಗಾದರೂ ಮಹತ್ವದ ಖಾತೆಗಳನ್ನು ನೀಡಿದರೆ ಉಳಿದವರಿಗೆ ಒಪ್ಪಿಸುವುದು ಸುಲಭ. ರಮೇಶ ಜಾರಕಿಹೊಳಿ, ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ, ಬೈರತಿ ಬಸವರಾಜ, ಬಿ.ಸಿ.ಪಾಟೀಲ್ ಹಾಗೂ ಕೆ.ಗೋಪಾಲಯ್ಯ ಪ್ರಮುಖ ಖಾತೆಗಳನ್ನು ಹಂಚಲು ಸಿಎಂ ನಿರ್ಧರಿಸಿದ್ದಾರೆ. ಪಕ್ಷ ಮೂಲದವರಲ್ಲಿ ಹೆಚ್ಚುವರಿಯಾಗಿದ್ದ ಖಾತೆಗಳನ್ನು ವಾಪಸ್ ಪಡೆದು ಹಂಚಲಿದ್ದು, ಸಿಎಂ ಬಳಿಯಿರುವ ಬಹುತೇಕ ಖಾತೆಗಳನ್ನು ಹಾಗೆಯೇ ಉಳಿಸಿಕೊಳ್ಳಲಿದ್ದಾರೆ.

    ಯಾರಿಗೆ ಯಾವ ಖಾತೆ ?
    1. ಎಸ್.ಟಿ.ಸೋಮಶೇಖರ- ಸಹಕಾರ/ಸಾರಿಗೆ
    2. ಆನಂದ್ ಸಿಂಗ್- ಇಂಧನ/ ಸಣ್ಣ ಕೈಗಾರಿಕೆ
    3. ಬೈರತಿ ಬಸವರಾಜ- ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ)
    4. ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ
    5. ರಮೇಶ ಜಾರಕಿಹೊಳಿ- ಜಲ ಸಂಪನ್ಮೂಲ
    6. ಬಿ.ಸಿ.ಪಾಟೀಲ್- ಅರಣ್ಯ/ ತೋಟಗಾರಿಕೆ
    7. ಕೆ.ಗೋಪಾಲಯ್ಯ- ಕಾರ್ವಿುಕ
    8. ಶಿವರಾಮ್ ಹೆಬ್ಬಾರ್- ಪೌರಾಡಳಿತ
    9. ಕೆ.ಸಿ.ನಾರಾಯಣಗೌಡ- ಆಹಾರ ಮತ್ತು ನಾಗರಿಕ ಸರಬರಾಜು/ ಸಣ್ಣ ನೀರಾವರಿ
    10. ಶ್ರೀಮಂತ ಪಾಟೀಲ್- ಸಕ್ಕರೆ/ ಜವಳಿ

    ‘ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ. ಅವರ ಹಿಂದೆ ಇಡೀ ಪಕ್ಷವಿದ್ದು, ಸರ್ಕಾರ ಬೀಳುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಹಗಲುಗನಸು. ರಾಜ್ಯದಲ್ಲಿ ಇನ್ನೆರಡು ಅವಧಿಗೆ ಬಿಜೆಪಿಯದ್ದೇ ಆಡಳಿತ.

    | ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

    ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲು ಒಪ್ಪಿದ್ದರು. ಆದರೆ ನಂತರ ಅವರ ಮನಸ್ಸು ಬದಲಾಯಿತು. ಆಗ ನಮ್ಮೊಂದಿಗೆ ಬಂದಿದ್ದರೆ, ಅವರ ಕ್ಷೇತ್ರದ ಎಲ್ಲ ನೀರಿನ ಟ್ಯಾಂಕ್​ಗಳು ಭರ್ತಿಯಾಗುತ್ತಿದ್ದವು.

    | ಬಿ.ಸಿ. ಪಾಟೀಲ್ ಸಚಿವ (ಹಳೇಬೀಡಿನಲ್ಲಿ)

    ವಿಶ್ವನಾಥ್, ಎಂಟಿಬಿಗೆ ಕೊಟ್ಟಿರುವ ಮಾತಿಗೆ ತಪ್ಪಲ್ಲ

    ಮೈಸೂರು: ಯಡಿಯೂರಪ್ಪ ಕೊಟ್ಟ ಮಾತು ತಪ್ಪಿಲ್ಲ. ಈಗ ಹತ್ತು ಶಾಸಕರನ್ನು ಮಂತ್ರಿ ಮಾಡಿದ್ದು, ಎಚ್.ವಿಶ್ವನಾಥ್ ಹಾಗೂ ಎಂ.ಟಿ.ಬಿ.ನಾಗರಾಜು ಅವರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಇದ್ದ ಎಲ್ಲ ಗೊಂದಲ ನಿವಾರಣೆ ಮಾಡಿದ ಯಡಿಯೂರಪ್ಪ ಅವರು ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದರು. ಬಜೆಟ್ ಬಗ್ಗೆ ಮುಖ್ಯಮಂತ್ರಿ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳುವ ಕಾಂಗ್ರೆಸ್ ಮೊದಲು ಕೆಪಿಸಿಸಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts