More

    ಡೆಂಟಲ್​ ಕೇರ್​ | ಆಹಾರ ಮತ್ತು ಬಾಯಿಯ ಆರೋಗ್ಯ

    ಡೆಂಟಲ್​ ಕೇರ್​ | ಆಹಾರ ಮತ್ತು ಬಾಯಿಯ ಆರೋಗ್ಯ

    ಉತ್ತಮ ಮೌಖಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಯಿಯ ಸ್ವಚ್ಛತೆಯ ಜೊತೆಗೆ ನಮ್ಮ ಆಹಾರಪದ್ಧತಿ ಕೂಡ ಅತ್ಯಂತ ಮುಖ್ಯ. ಆಹಾರಪದ್ಧತಿ ಮತ್ತು ಆಹಾರದ ಆಯ್ಕೆಗಳು ಬಾಯಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ದೇಹದ ಪ್ರಮುಖ ಅಂಗಾಂಗಗಳಲ್ಲಿ ಬಾಯಿಯೂ ಒಂದಾಗಿದ್ದು ಜೀರ್ಣಾಂಗವ್ಯವಸ್ಥೆಯ ಮೊದಲ ಅಂಗವೂ ಹೌದಾಗಿದೆ. ನಾವು ತಿನ್ನುವ ಆಹಾರಪದಾರ್ಥಗಳನ್ನು ಹಲ್ಲು ಮತ್ತು ನಾಲಗೆಗಳು ಲಾಲಾರಸದ ಸಹಾಯದೊಂದಿಗೆ ಅಗಿದು ಪುಡಿಯನ್ನಾಗಿಸಿ ನುಂಗಲು ಯೋಗ್ಯವನ್ನಾಗಿಸುತ್ತವೆ. ಆಹಾರವು ಹೊಟ್ಟೆಯನ್ನು ತಲುಪುವ ಮೊದಲೇ ಲಾಲಾರಸದಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಪ್ರಾರಂಭಿಸಿರುತ್ತವೆ. ಹೀಗೆ ನಾವು ಸೇವಿಸುವ ಆಹಾರ ಮತ್ತು ಬಾಯಿಯ ಆರೋಗ್ಯವು ಪರಸ್ಪರ ಪೂರಕವಾಗಿದೆ.

    ನಾವು ಸೇವಿಸುವ ಆಹಾರ ಮತ್ತು ಕುಡಿಯುವ ಪಾನೀಯಗಳು ಬಾಯಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಹೆಚ್ಚು ಸಕ್ಕರೆ ಅಂಶ ಮತ್ತು ಆಮ್ಲೀಯ ಆಹಾರಪದಾರ್ಥಗಳಿಂದ ಹಲ್ಲು ಹುಳುಕಾಗುವ / ಸವೆಯುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ ಈ ರೀತಿಯ ಆಹಾರವನ್ನು ಪದೇಪದೆ ಸೇವಿಸುವುದರಿಂದ ಹಲ್ಲು ಹುಳುಕಾಗುವುದಲ್ಲದೆ ದುರ್ಬಲಗೊಳ್ಳುತ್ತವೆ. ಜಿಗುಟಾದ ಸಿಹಿ ಪದಾರ್ಥಗಳು ಕೂಡ ಅಪಾಯಕಾರಿ. ಹಲ್ಲಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಪದೇಪದೆ ಆಹಾರ ಸೇವಿಸುವುದನ್ನು (avoid snacking inbetween meals) ಕಡಿಮೆ ಮಾಡಬೇಕು. ಕೆಲವೊಮ್ಮೆ ತಿನ್ನಲೇಬೇಕೆನಿಸಿದಲ್ಲಿ ಹಣ್ಣು-ತರಕಾರಿ, ಒಣ ಹಣ್ಣು – ಹೀಗೆ ಆರೋಗ್ಯಕರ ತಿನಿಸುಗಳನ್ನು ಸೇವಿಸುವುದು ಸೂಕ್ತ, ಇದರಿಂದ ಬಾಯಿಯ ಆರೋಗ್ಯದ ಜೊತೆ ದೇಹದ ಆರೋಗ್ಯವೂ ಉತ್ತಮವಾಗಿರುತ್ತದೆ. ಚಾಕಲೇಟ್, ಕೇಕ್, ಸಿಹಿತಿನಿಸುಗಳು, ಜಿಗುಟಾದ/ಆಮ್ಲೀಯ ಆಹಾರಪದಾರ್ಥಗಳನ್ನು ತಿಂದ ನಂತರ ಬಾಯಿಯನ್ನು ಸ್ವಚ್ಛಗೊಳಿಸಬೇಕು. ನಾರಿನ ಅಂಶ ಹೆಚ್ಚಾಗಿರುವ ಹಣ್ಣು ಮತ್ತು ತರಕಾರಿಗಳು ಆರೋಗ್ಯವನ್ನು ಕಾಪಾಡುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಇವುಗಳನ್ನು ಅಗಿದು ತಿನ್ನುವುದರಿಂದ ಹಲ್ಲುಗಳು ಸ್ವಾಭಾವಿಕವಾಗಿ ಸ್ವಚ್ಛಗೊಳ್ಳುತ್ತವೆ. ಸಕ್ಕರೆಯನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ಹಲ್ಲು ಹುಳುಕಾಗುವುದನ್ನು ತಡೆಯಬಹುದು. ವಿಟಮಿನ್ ಸಿ ಇರುವ ಆಹಾರಗಳು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿರುತ್ತವೆ. ಅಧಿಕ ಕ್ಯಾಲ್ಸಿಯಂ ಹೊಂದಿರುವ ಆಹಾರಗಳಾದ ಹಾಲು-ಮೊಸರು, ಸೊಪ್ಪು, ಬ್ರೊಕೋಲಿಯನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಅಧಿಕ ಆಮ್ಲೀಯ ಆಹಾರಗಳ ಸೇವನೆಯಿಂದ ಹಲ್ಲುಗಳ ಮೇಲಿನ ಎನಾಮಲ್ ಕ್ರಮೇಣ ಹಾನಿಗೊಂಡು ಹಲ್ಲುಗಳು ದುರ್ಬಲವಾಗಿ ಹುಳುಕಾಗತೊಡಗುತ್ತವೆ.

    ಮಕ್ಕಳಿಗೆ ಬಾಟಲಿಯಲ್ಲಿ ಹಾಲು ಕೊಡುತ್ತಿದ್ದರೆ ಸಕ್ಕರೆಯ ಪ್ರಮಾಣದ ಮೇಲೆ ಗಮನವಿರಲಿ. ಅಧಿಕ ಸಕ್ಕರೆ ಹಲ್ಲುಗಳಿಗೆ ಅಪಾಯಕಾರಿ. ವರ್ಷದ ನಂತರ ರಾತ್ರಿ ಹಾಲುಣಿಸುವ ಅಭ್ಯಾಸ ನಿಲ್ಲಿಸುವುದು ಸೂಕ್ತ. ಮಕ್ಕಳು ಸಿರಪ್ / ಔಷಧ ಸೇವಿಸಿದ ನಂತರ ಬಾಯಿಯ ಸ್ವಚ್ಛತೆಯ ಬಗ್ಗೆ ಗಮನ ಕೊಡಿ. ಬಾಯಿಯ ಸ್ವಚ್ಛತೆಯ ಜತೆಗೆ ಪೌಷ್ಟಿಕ ಮತ್ತು ಸಮತೋಲನ ಆಹಾರವೂ ಹಲ್ಲು ಮತ್ತು ವಸಡಿನ ಆರೋಗ್ಯವನ್ನು ಕಾಪಾಡಲು ಬಹಳ ಪ್ರಮುಖವಾಗಿರುತ್ತವೆ. ನಾವು ತಿನ್ನುವ ಆಹಾರವನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭ.

    ಪ್ರಶ್ನೋತ್ತರ

    ನನಗೆ ಉಸಿರಿನ ದುರ್ವಾಸನೆಯ ಸಮಸ್ಯೆ ಇದೆ. ಸಸ್ಯಾಹಾರಿ, ಯಾವುದೇ ದುರಭ್ಯಾಸ ಇಲ್ಲ. ರಕ್ತದೊತ್ತಡ, ಮಧುಮೇಹ ಕೂಡ ಇಲ್ಲ. ದೇಹ ಪಿತ್ತ ಪ್ರಕೃತಿಯದಾದರೂ ಎದೆಯುರಿಯ ಯಾವುದೇ ಲಕ್ಷಣಗಳಿಲ್ಲ. ಉಸಿರಿನ ದುರ್ವಾಸನೆಗೆ ವಸಡಿನ ಉರಿಯೂತ ಕಾರಣ ಎಂದುಕೊಂಡಿದ್ದೇನೆ. ಪರಿಹಾರ ಸೂಚಿಸಿ.

    | ಕಾಮತ್ 74 ವರ್ಷ, ಹುಬ್ಬಳ್ಳಿ

    ಒಮ್ಮೆ oral prophylaxis (ಹಲ್ಲುಗಳ ಶುಚಿ) ಮಾಡಿಸಿಕೊಳ್ಳುವುದು ಉತ್ತಮ. ಅಸಿಡಿಟಿ ಕೂಡ ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣವಾಗಿರುತ್ತದೆ. ಸರಿಯಾದ ಸಮಯಕ್ಕೆ ಊಟ, ಸಾಕಷ್ಟು ನಿದ್ರೆ ಮಾಡುವುದರಿಂದ ಅಸಿಡಿಟಿಯನ್ನು ನಿಯಂತ್ರಿಸಬಹುದು ಮತ್ತು ಬಾಯಿಯ ದುರ್ವಾಸನೆ ಕೂಡ ಕಡಿಮೆಯಾಗುತ್ತದೆ. ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಸಾಕಷ್ಟು ನೀರು ಕುಡಿಯುವುದು ಈ ನಿಟ್ಟಿನಲ್ಲಿ ಸಹಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts