More

    ಕರೊನಾ ಸೂಪರ್ ಸ್ಪ್ರೆಡ್ಡರ್ ಡೆಮುರೈಲು ; ನಗರಗಳಿಗೆ ಹಿಂದಿರುಗುತ್ತಿರುವಾಗ ಮಾರ್ಗಸೂಚಿ ಮರೆತ ಜನ

    ತುಮಕೂರು : ಲಾಕ್‌ಡೌನ್ ಸಡಿಲಿಕೆ ಬಳಿಕ ಊರುಗಳಿಗೆ ತೆರಳಿರುವವರು ಬೆಂಗಳೂರಿಗೆ ಹಿಂದಿರುಗುತ್ತಿರುವ ಹಿನ್ನೆಲೆಯಲ್ಲಿ ರೈಲುಗಳು ತುಂಬಿ ತುಳುಕುತ್ತಿವೆ.

    ಅರಸೀಕೆರೆಯಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ‘ಡೆಮುರೈಲು’ ಕರೊನಾ ಸೂಪರ್ ಸ್ಪ್ರೆಡ್ಡರ್ ಆಗುವ ಆತಂಕ ಸೃಷ್ಟಿಸಿದೆ. ಕರೊನಾ ಎರಡನೇ ಅಲೆಯ ಆರ್ಭಟ ತಗ್ಗಿದ ಬಳಿಕ ಜೂ.14ರಿಂದ ಲಾಕ್‌ಡೌನ್ ಸಡಿಲಿಕೆ ಪ್ರಕ್ರಿಯೆ ಆರಂಭವಾಯಿತು. ಎಲ್ಲ ಉತ್ಪಾದನಾ ಘಟಕ, ಕೈಗಾರಿಕೆಗಳಲ್ಲಿ ಶೇ.50 ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಿದ್ದು, ಅದೇ ರೀತಿ ಗಾರ್ಮೆಂಟ್ಸ್‌ಗಳಲ್ಲಿ ಸಿಬ್ಬಂದಿ ಸಾಮರ್ಥ್ಯದ ಶೇ.30 ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿರುವುದರಿಂದ ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಸ್ವಂತ ಊರುಗಳಿಗೆ ತೆರಳಿದ್ದವರು ಈಗ ಕುಟುಂಬ ಸಮೇತ ನಗರಗಳಿಗೆ ಮರಳುವುದು ಅನಿವಾರ್ಯವಾಗಿದೆ. ಕರೊನಾ ನಿಯಂತ್ರಣಕ್ಕೆ ಇಷ್ಟು ದಿನ ಸರ್ಕಾರ ಕೈಗೊಂಡಿದ್ದ ಕಠಿಣ ಮಾರ್ಗೋಪಾಯಗಳೆಲ್ಲ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ.

    ಸಾರಿಗೆ, ಖಾಸಗಿ ಬಸ್ ಸೇವೆ ಇಲ್ಲದ ಕಾರಣ ರೈಲುಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕರೊನಾ ಹರಡುವ ಸಾಧ್ಯತೆ ಹೆಚ್ಚಿಸಿದೆ. ಅದರಲ್ಲೂ ಅರಸೀಕೆರೆಯಿಂದ ಬೆಳಗ್ಗೆ 5.15ಕ್ಕೆ ಹೊರಡುವ ಡೆಮುರೈಲು ಈ ಮಾರ್ಗದಲ್ಲಿ ಓಡಾಡುವ ಏಕೈಕ ಪ್ಯಾಸೆಂಜರ್ ರೈಲು. ಕಳೆದ 3 ದಿನಗಳಿಂದ ಡೆಮುರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು ಕೋವಿಡ್‌ನ ಎಲ್ಲ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

    ಪ್ರಯಾಣಿಕರಿಗೆ ಉಸಿರಾಡಲು ಆಗದಷ್ಟು ದಟ್ಟಣೆ ಇರುವಾಗ ಸಾಮಾಜಿಕ ಅಂತರ ಮಾಯವಾಗಿದೆ. ಮಾಸ್ಕ್ ಕಡ್ಡಾಯವಾಗಿದ್ದರೂ ಉಸಿರುಗಟ್ಟಿರುವ ವಾತಾವರಣದಿಂದ ಮಾಸ್ಕ್ ಧರಿಸದವರೇ ಹೆಚ್ಚಿದ್ದಾರೆ. ಬೆರಳೆಣಿಕೆ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಬೇಕಿರುವುದರಿಂದ ಡೆಮು ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ ಎನ್ನುತ್ತಾರೆ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್.

    ರೈಲ್ವೆ ಸಚಿವರಿಗೆ ಟ್ವೀಟ್: ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ (ಟಿಬಿಆರ್‌ಪಿವಿ) ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅರಸೀಕೆರೆ-ಯಶವಂತಪುರ ನಡುವೆ ಸಂಚರಿಸುವ ಡೆಮು ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹಾಗೂ ಕೋವಿಡ್‌ನ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿರುವುದನ್ನು ಫೋಟೋಗಳ ಸಹಿತ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಲಾಗಿದೆ. ಹೆಚ್ಚಿನ ರೈಲು ಓಡಾಟ ಆರಂಭಿಸಲು ಮನವಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts