More

    100 ಕೋಟಿ ರೂ.ಗೆ ಬೇಡಿಕೆ, ಸಿಎಂ ಬಳಿಗೆ ಕೋಟ ನೇತೃತ್ವದ ನಿಯೋಗ

    ಮಂಗಳೂರು: ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟ ತುಂಬಲು ಪ್ರಕೃತಿ ವಿಕೋಪ ನಿಧಿಯಿಂದ 100 ಕೋಟಿ ರೂ. ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

    ಮೀನುಗಾರಿಕಾ ಸಚಿವ ಎಸ್.ಅಂಗಾರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಕ್ ನಿಯೋಗದಲ್ಲಿದ್ದರು. ಚಂಡಮಾರುತದಿಂದ ಜಿಲ್ಲೆಯ ಬಹುತೇಕ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ರಸ್ತೆಗಳು ಕೊಚ್ಚಿಹೋಗಿವೆ. ಲೋಕೋಪಯೋಗಿ ಇಲಾಖೆಗೆ 48 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಇಲಾಖೆಗೆ 18 ಕೋಟಿ ರೂ. ಹಾಗೂ ಸಮುದ್ರ ಕೊರೆತದಿಂದ 30 ಕೋಟಿ ರೂ.ಒಟ್ಟು 126 ಕೋಟಿ ರೂ.ನಷ್ಟವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    ಗ್ರಾಮ ಪಂಚಾಯತಿ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಕರೊನಾ ವಾರಿಯರ್ಸ್ ಎಂದು ಗುರುತಿಸಿ ಎಲ್ಲ ಸ್ಥಳೀಯಾಡಳಿತ ಜನಪ್ರತಿನಿಧಿಗಳಿಗೆ ಪ್ರಥಮ ಹಂತದ ಕರೊನಾ ವ್ಯಾಕ್ಸಿನ್ ಒದಗಿಸುವಂತೆ ನಿಯೋಗ ಮುಖ್ಯಮಂತ್ರಿಯವರನ್ನು ಕೋರಿದೆ.

    ಕರೊನಾ ನಿಯಂತ್ರಣಕ್ಕೆ ಕ್ರಮ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ನಿಯೋಗ ಸಿಎಂಗೆ ಮನವಿ ಮಾಡಿದೆ. 40 ಆರೋಗ್ಯ ಮಿತ್ರ ಕಾರ್ಯನಿರ್ವಾಹಕರನ್ನು ಹೆಚ್ಚುವರಿ ನೇಮಕಾತಿ ಮಾಡಬೇಕು. ಸುಳ್ಯ ಮತ್ತು ಪುತ್ತೂರು ತಾಲೂಕಿನ ಜನರಿಗೆ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ಅನುಮತಿ ಮತ್ತು ಈ ವೈದ್ಯಕೀಯ ಕಾಲೇಜಿನಲ್ಲಿ ಆಯುಷ್ಮಾನ್ ಅಳವಡಿಸಿಕೊಳ್ಳಲು ಆದೇಶ ನೀಡಬೇಕು ಎಂದು ಒತ್ತಾಯಿಸಿದೆ. ಜಿಲ್ಲೆಯ ಆಸ್ಪತ್ರೆಯ ಆಕ್ಸಿಜನ್ ಕೊರತೆ ತುಂಬಲು ಆಕ್ಸಿಜನ್ ಟ್ಯಾಂಕರ್ ಒದಗಿಸಬೇಕು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು 50 ಸಾವಿರ ಮತ್ತು ಒಂದು ಲಕ್ಷ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು ಎಂದು ನಿಯೋಗ ವಿನಂತಿಸಿದೆ.

    ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಕೊಡಿ: ಕೋವಿಡ್ ದಿನಗಳಲ್ಲಿ ಮೀನುಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆದುದರಿಂದ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ ಸಹಕರಿಸಬೇಕು ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಸಿಎಂಗೆ ಮನವಿ ಸಲ್ಲಿಸಿದರು. ಚಂಡಮಾರುತದಿಂದ ಉಂಟಾದ ಕಡಲು ಕೊರೆತದಿಂದ ಮೀನುಗಾರರು ಮನೆ, ಆಸ್ತಿ, ಕೃಷಿ ತೋಟ ಕಳೆದುಕೊಂಡಿದ್ದಾರೆ. ಸಮುದ್ರ ಬದಿಯ ಸಾರ್ವಜನಿಕ ಆಸ್ತಿ, ರಸ್ತೆ ಹಾನಿಗೊಂಡಿವೆ ಎಂಬುದನ್ನು ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

    ಹಸಿರು ಬುಟ್ಟಿಯಲ್ಲಿ ಕುಕ್ಕೆ ಪ್ರಸಾದ
    ಸುಬ್ರಹ್ಮಣ್ಯ: ಕರೊನಾ ಸಾಂಕ್ರಾಮಿಕ ರೋಗ ನಿವಾರಣೆಗೆ ಪ್ರಾರ್ಥಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಸಲಾದ ಧನ್ವಂತರಿ ಹೋಮ, ಕ್ರಿಮಿಹರ ಸೂಕ್ತ ಹೋಮ ಹಾಗೂ ಚಂಡಿಕಾ ಯಾಗದ ಪ್ರಸಾದ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮಹಾಪ್ರಸಾದವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಕುಕ್ಕೆ ದೇವಳದ ಸಿಬ್ಬಂದಿ ಜನಾರ್ದನ ಅವರ ಪುತ್ರ 7ನೇ ತರಗತಿ ವಿದ್ಯಾರ್ಥಿ ಯಜ್ಞೇಶ್ ಸಿದ್ಧಪಡಿಸಿದ ಹಸಿರು ಬುಟ್ಟಿಯಲ್ಲಿ ಹರಿವಾಣವನ್ನು ಇರಿಸಿ ಅದರಲ್ಲಿ ಪ್ರಸಾದವಿಟ್ಟು ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts