More

    ಕೆಜಿಎಫ್‌ನಲ್ಲಿ ಅಭಿಲೇಖಾಲಯ ತೆರೆಯಿರಿ : ಶಾಸಕಿ ಎಂ.ರೂಪಕಲಾ ಸೂಚನೆ

    ಕೋಲಾರ : ಕೆಜಿಎಫ್ ತಾಲೂಕಿನ ದಾಖಲೆಗಳಿಗೆ ಸಂಬಂಧಿಸಿದಂತೆ ಅಭಿಲೇಖಾಲಯ ತೆರೆಯುವುದು ಸೇರಿ ಮಂಜೂರಾಗಿರುವ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡುವಂತೆ ಶಾಸಕಿ ಎಂ.ರೂಪಕಲಾ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು ಕೆಜಿಎಫ್ ಕ್ಷೇತ್ರ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ಕೆಜಿಎಫ್ ತಾಲೂಕಾಗಿ ಘೋಷಣೆಯಾಗಿದೆ. ಆದರೆ ಭೂದಾಖಲೆ ದಾಖಲೆ ಸೇರಿ ಇತರ ದಾಖಲೆಗಳಿಗೆ ಬಂಗಾರಪೇಟೆ ತಾಲೂಕು ಕಚೇರಿಗೆ ಹೋಗಬೇಕಾಗಿದೆ. ಜನರ ಅಲೆದಾಟ ತಪ್ಪಿಸಲು ಕೆಜಿಎಫ್ ತಾಲೂಕು ಕೇಂದ್ರ ಸ್ಥಾನದಲ್ಲೇ ಭೂ ದಾಖಲೆಗಳ ಅಭಿಲೇಖಾಲಯ ತೆರೆಯಲು ಸೂಕ್ತ ಕಟ್ಟಡ ಒದಗಿಸಬೇಕು ಎಂದರು.

    ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ತಾಲೂಕಿಗೆ ಆಗಿರುವ ಭೂ ಮಂಜೂರು ಸಂಬಂಧ ನಾಪತ್ತೆಯಾಗಿರುವ ಕಡತ ಹುಡುಕಿಸಬೇಕು. ಈಗಾಗಲೆ ವಿವಿಧ ಉದ್ದೇಶಕ್ಕೆ ಮಂಜೂರು ಮಾಡಿರುವ ಭೂ ಮಂಜೂರಾತಿಯ ಮೂಲದಾಖಲೆ ಪರಿಶೀಲಿಸಿ ಅನುಮೋದನೆ ನೀಡಬೇಕು ಎಂದರು.

    ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಮಿಕ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಗುರುತಿಸಲಾಗಿದೆ. ಕಡತ ಡಿಸಿ ಕಚೇರಿಯಲ್ಲಿ ಬಾಕಿ ಉಳಿಕೊಂಡಿದ್ದು ವಿಲೇವಾರಿ ಮಾಡಬೇಕು, ತಾಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿ ಸ್ಮಶಾನ ಜಾಗ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಸರ್ವೇ ಮಾಡಿಸಿ ಒತ್ತುವರಿ ತೆರವು ಜತೆಗೆ ಸುತ್ತ ಬೇಲಿ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು.

    ತಾಲೂಕಿನಲ್ಲಿ ರೈತರು ಟೊಮ್ಯಾಟೊ, ಕ್ಯಾಪ್ಸಿಕಂ ಇನ್ನಿತರ ತರಕಾರಿ ಬೆಳೆದರೂ ಮಾರುಕಟ್ಟೆಗಾಗಿ ಕೋಲಾರ, ನೆರೆಯ ಆಂಧ್ರ, ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಎಪಿಎಂಸಿ ಪ್ರಾಂಗಣ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ವಿ.ಕೋಟ ಮುಖ್ಯರಸ್ತೆಯ ಕದರಿಗಾನಕುಪ್ಪ ಬಳಿ 40 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದರು.

    ಡಿಸಿ ಡಾ.ಆರ್.ಸೆಲ್ವಮಣಿ ಪ್ರತಿಕ್ರಿಯಿಸಿ, ಮಿನಿ ವಿಧಾನಸೌಧ ಕಟ್ಟಡ ಕೆಲಸ ಪೂರ್ಣಗೊಂಡ ನಂತರ ಅಭಿಲೇಖಾಲಯಕ್ಕೆ ಪ್ರತ್ಯೇಕ ಭದ್ರತಾ ಕೊಠಡಿ ಮೀಸಲಿಡಲಾಗುವುದು. ಈಗ ಸ್ಥಳಾಂತರ ಮಾಡಿದರೆ ದಾಖಲೆಗಳು ನಾಪತ್ತೆಯಾಗಬಹುದಾದ್ದರಿಂದ ಅದುವರೆಗೆ ಬಂಗಾರಪೇಟೆ ತಾಲೂಕು ಕಚೇರಿಯಲ್ಲೇ ಕಾರ್ಯನಿರ್ವಹಿಸಲಿ. ಒತ್ತುವರಿದಾರರು ಎಷ್ಟೇ ಪ್ರಬಲರಾಗಿದ್ದರೂ ಯಾರ ಒತ್ತಡಕ್ಕೂ ಮಣಿಯದೆ ತೆರವುಗೊಳಿಸುವುದಾಗಿ ತಿಳಿಸಿದಲ್ಲದೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿದಿನವೂ ವರದಿ ನೀಡಬೇಕು ಎಂದು ತಹಸೀಲ್ದಾರ್ ಸುಜಾತಾಗೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಸಿ.ವಿ ಹಾಜರಿದ್ದರು.

    ಕಂದಾಯ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಕೆಲವರು ಮಾಡಬಾರದ ಕೆಲಸ ಮಾಡಿ ಸಸ್ಪೆಂಡ್ ಆಗಿದ್ದಾರೆ. ಭೂ ಮಂಜೂರು ಸಂಬಂಧ ಕಡತಗಳು ನಾಪತ್ತೆಯಾಗಿರುವ ಸಂಬಂಧ ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    ಡಾ.ಆರ್.ಸೆಲ್ವಮಣಿ, ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts