More

    ನಿಡಿಗಲ್- ಪಜಿರಡ್ಕ ರಸ್ತೆ ಬೇಡಿಕೆ ಈಡೇರಿಕೆ

    ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಿಗಲ್- ಪಜಿರಡ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

    ನಿಡಿಗಲ್‌ನಿಂದ ಪಜಿರಡ್ಕ ತನಕ 3.5 ಕಿ.ಮೀ. ದೂರವಿದೆ. ಈ ಪರಿಸರದ 150ಕ್ಕಿಂತ ಅಧಿಕ ಕುಟುಂಬಗಳ ಸಹಿತ ಪರಿಶಿಷ್ಟ ಪಂಗಡದ ಕಾಲನಿಗೆ ಇದು ಪ್ರಮುಖ ರಸ್ತೆ. ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಸಂಚಾರಕ್ಕೆ ಸಂಕಷ್ಟ ಎದುರಾಗುತ್ತಿತ್ತು. ವಾಹನ ಸಂಚಾರ, ಕಾಲ್ನಡಿಗೆ ಕೂಡ ಸವಾಲಾಗಿ ಪರಿಣಮಿಸುತ್ತಿತ್ತು.

    ಸ್ಥಳೀಯ ಸಂಘ ಸಂಸ್ಥೆ ಹಾಗೂ ಊರವರು ಸೇರಿ ವರ್ಷದಲ್ಲಿ ಅನೇಕ ಬಾರಿ ಶ್ರಮದಾನಗಳನ್ನು ನಡೆಸುವ ಮೂಲಕ ರಸ್ತೆ ದುರಸ್ತಿ ಮಾಡುತ್ತಾ ಅಗತ್ಯ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೂ ರಸ್ತೆ ಆಗಾಗ ಹಾಳಾಗಿ ಸಮಸ್ಯೆ ಮುಂದುವರಿಯುತ್ತಿತ್ತು.

    ಹಲವಾರು ವರ್ಷಗಳಿಂದ ಈ ಭಾಗದ ಜನರು, ಅನೇಕ ಜನಪ್ರತಿನಿಧಿಗಳಿಗೆ ರಸ್ತೆ ನಿರ್ಮಾಣದ ಬಗ್ಗೆ ಬೇಡಿಕೆ ಸಲ್ಲಿಸುತ್ತಿದ್ದರು. ಆದರೆ ಅದು ಕೇವಲ ಆಶ್ವಾಸನೆಗೆ ಮಾತ್ರ ಸೀಮಿತವಾಗಿತ್ತು. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಕಾಂಕ್ರೀಟ್ ಕಾಮಗಾರಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ರಸ್ತೆಯ ಹೆಚ್ಚು ಸಮಸ್ಯೆ ನೀಡುತ್ತಿದ್ದ ನಿಡಿಗಲ್‌ನಿಂದ ಗುಮ್ಮಟಬೈಲು ಪ್ರದೇಶದ ತನಕದ 1.680 ಕಿ.ಮೀ. ಕಾಂಕ್ರೀಟ್ ಪೂರ್ಣಗೊಂಡಿದೆ.

    ಈ ರಸ್ತೆ ಕಾಮಗಾರಿ ಸಮಯದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ಕಲ್ಮಂಜ, ಕಲ್ಮಂಜ ಗ್ರಾಪಂ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಹೆಚ್ಚಿನ ಮುತುವರ್ಜಿ ವಹಿಸಿ ಉತ್ತಮ ಗುಣಮಟ್ಟದ ಕಾಮಗಾರಿಗೆ ಕಾರಣರಾಗಿದ್ದಾರೆ.

    ಹೆಚ್ಚು ಸಮಸ್ಯೆ ಇದ್ದ ಭಾಗದ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಪೂರ್ಣಗೊಳಿಸಲಾಗಿದೆ. ಈಗ ಕಾಮಗಾರಿ ಪೂರ್ಣಗೊಂಡ ಗುಮ್ಮಟ ಬೈಲು ಪ್ರದೇಶದಿಂದ ದೇವರಗುಡ್ಡ ತನಕದ ಸುಮಾರು 3.5 ಕಿ.ಮೀ. ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಮುಂದಿನ ಹಂತದಲ್ಲಿ ಮಾಡಲಾಗುತ್ತದೆ.
    ಹರೀಶ್ ಪೂಂಜ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts