More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

    ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭೂಮಿ ಸಮಸ್ಯೆ, ಕೆರೆ ಒತ್ತುವರಿ, ಮಳೆ ಹಾನಿಯಿಂದ ಮನೆ ಕಳೆದುಕೊಂಡ ವಸತಿ ರಹಿತರಿಗೆ ಮನೆ ಮಂಜೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ದಸಂಸ (ವಿ.ನಾಗರಾಜು ಬಣ) ಮುಖಂಡರು ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

    ಪಟ್ಟಣದ ತಾಲೂಕು ಆಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ಕೈಗೊಂಡಿರುವ ಪ್ರತಿಭಟನಾಕಾರರು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಬಡವರ, ನಿರ್ಗತಿಕರ ಸಮಸ್ಯೆ ಬಗೆಹರಿಸಲು ಎರಡು ತಾಲೂಕಿನ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

    ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಹಾಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡುವವರಿಗೆ ಪ್ರತಿಭಟನೆ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

    ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಮಾತನಾಡಿ, ಕಳೆದ ತಿಂಗಳು ಇದೇ ಸ್ಥಳದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲಿ ಬಗೆಹರಿಸುವ ಸಮಸ್ಯೆಗಳ ಕುರಿತು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬದಲಿಗೆ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಪ್ರತಿದೂರುದಾರರ ಜತೆ ಶಾಮೀಲಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
    ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜತೆಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಬೇಡಿಕೆಗಳು: ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಮಳೆ ಆನೆಯಿಂದ ಮನೆ ಕಳೆದುಕೊಂಡ ನಿರ್ಗತಿಕರಿಗೆ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಹೊಮ್ಮರಗಳ್ಳಿ ಗ್ರಾಮದ ಗ್ರಾಮ ಠಾಣ ಜಾಗದಲ್ಲಿ ಸುಮಾರು 100 ಕುಟುಂಬಗಳು ನೂರಾರು ವರ್ಷದಿಂದ ವಾಸಿಸುತ್ತಿದ್ದು, ಇವರಿಗೆ ಸರ್ವೇ ಮಾಡಿ ದಾಖಲಾತಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸರಗೂರು ತಾಲೂಕು ದೇವಲಾಪುರ ಗ್ರಾಮದ ಸ.ನಂ 14 ರಲ್ಲಿ 3.17 ಎಕರೆ ಸರ್ಕಾರಿ ಕೆರೆ ಇದ್ದು, ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರುವುಗೊಳಿಸಿ ಕೆರೆಯನ್ನು ಸಂರಕ್ಷಿಸಬೇಕು. ಹೊಮ್ಮರಗಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ವೈನ್ ಶಾಪ್ ತೆರವುಗೊಳಿಸಬೇಕು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಬಾಕಿ ಉಳಿದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಪತ್ರ ನೀಡಬೇಕು. ಸರಗೂರ ತಾಲೂಕು ದೇವಲಾಪುರ ಗ್ರಾಮದ ಸರ್ವೆ ನಂಬರ್ 42 ರಲ್ಲಿ ಸುಮಾರು 560 ಎಕರೆ ಸರ್ಕಾರಿ ಭೂಮಿ ಇದ್ದು, ಇದರಲ್ಲಿ 50 ವರ್ಷದಿಂದ ವ್ಯವಸಾಯ ಮಾಡುತ್ತಿರುವ ವೆಂಕಟರಮಣಾಚಾರಿ ಎಂಬುವರಿಗೆ ಪಕ್ಕದ ಜಮೀನಿನವರು ಬೆದರಿಸಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ವೆಂಕಟರಮಣಾಚಾರಿ ಮತ್ತು ದೊಡ್ಡಮ್ಮ ಅವರಿಗೆ ಭೂ ಮಂಜೂರಾತಿ ಪತ್ರ ನೀಡಬೇಕು.

    ಪ್ರತಿಭಟನೆಯಲ್ಲಿ ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ಜಿಲ್ಲಾ ಸಂಘಟನ ಸಂಯೋಜಕ ಗೋವಿಂದ ಹುನುಗನಹಳ್ಳಿ, ತಾಲೂಕು ಸಂಯೋಜಕ ಹೆಗ್ಗಡಪುರ ಕುಮಾರ್, ಸರಗೂರು ತಾಲೂಕು ಸಂಯೋಜಕ ಮಹೇಶ್ ದೇವಲಪುರ, ಖಜಾಂಚಿ ಜಯಕುಮಾರ್, ಮಹಿಳಾ ಹೋರಾಟಗಾರ್ತಿ ರಾಜಮ್ಮ, ಹಿರೇಹಳ್ಳಿ ಚೆಲುವರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts