More

    ಕಡಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

    ನರೇಗಲ್ಲ: ಸರ್ಕಾರ ನಿಗದಿಪಡಿಸಿದ ಬೆಂಬಲಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಸ್ಥಾಪನೆ, ಉಪ ತಹಸೀಲ್ದಾರ್ ಕಚೇರಿಗೆ ಅಗತ್ಯ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸೇನಾ ನೇತೃತ್ವದಲ್ಲಿ ರೈತರು ಶುಕ್ರವಾರ ಉಪ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ರೈತ ಮುಖಂಡ ಚಂದ್ರು ಹೊನವಾಡ ಮಾತನಾಡಿ, ಈಗಾಗಲೇ ರೈತರು ಕಡಲೆ ಕಟಾವು ಮಾಡಿ ರಾಶಿ ಮಾಡಿದ್ದು, ಅನಿವಾರ್ಯವಾಗಿ ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಜಿಲ್ಲಾದ್ಯಂತ ಕಡಲೆ ಕರೀದಿ ಕೇಂದ್ರ ಪ್ರಾರಂಭಿಸಬೇಕು. ಬೆಂಬಲ ಬೆಲೆಯನ್ನು 5100 ರಿಂದ 7000 ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

    ರೈತ ಚನ್ನಬಸಪ್ಪ ಕುಷ್ಟಗಿ ಮಾತನಾಡಿ, ಸ್ಥಳೀಯ ಉಪ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಆಧಾರ್ ಕೇಂದ್ರ

    ಸ್ಥಗಿತವಾಗಿ 6 ತಿಂಗಳಾಯಿತು. ಹೀಗಾಗಿ, ರೋಣ ಅಥವಾ ಗದಗ ನಗರಕ್ಕೆ ತೆರಳುವುದು ಅನಿವಾರ್ಯವಾಗಿದೆ.

    ಆಧಾರ್ ಕೇಂದ್ರ ಪುನರಾರಂಭಿಸಬೇಕು, ಇಲ್ಲದಿದ್ದರೆ ನರೇಗಲ್ಲ ಪ.ಪಂ. ಅನ್ನು ಗ್ರಾ.ಪಂ. ಆಗಿ ಪರಿವರ್ತಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕಾಗಮಿಸಿದ ಕೃಷಿ ಇಲಾಖೆ ಜಂಟಿನಿರ್ದೇಶಕ ಡಿ.ಎನ್. ರುದ್ರೇಶ ಮಾತನಾಡಿ, ಕಡಲೆ ಖರೀದಿಗೆ ಅವಕಾಶ ನೀಡಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದೇಶ ಬರುತ್ತಿದ್ದಂತೆಯೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

    ಶಿವಪ್ಪ ಗೂಡಿ, ಮಲ್ಲಪ್ಪ ಮಳ್ಳಿ, ಸುಂಕಪ್ಪ ನವಲಗುಂದ, ಶೇಖಪ್ಪ ಲಕ್ಕನಗೌಡ್ರ, ಮಹಾಂತೇಶ ಸೋಮಗೊಂಡ, ಬಸವರಾಜ ಪಾಟೀಲ, ರುದ್ರೇಶ ಕೊಟಗಿ, ನರೇಶ ಜೋಳದ, ಶಿವನಗೌಡ ಕಡದಳ್ಳಿ, ಸಂಗನಗೌಡ ಮಾಲಿಪಾಟೀಲ, ಶರಣಪ್ಪ ಹಕ್ಕಿ, ಮಲ್ಲಪ್ಪ ಲಕ್ಕನಗೌಡ್ರ, ಮೋದಿನಸಾಬ ಬಾಳಿಕಾಯಿ, ಈರಪ್ಪ ಮುಗಳಿ, ವೀರಪ್ಪ ಹತ್ತಿಕಟಗಿ, ಶರಣಪ್ಪ ಗೋಸಗೊಂಡ, ಯಲ್ಲಪ್ಪ ಜುಟ್ಲ, ಶಶಿಧರ ಓದಿಸೂಮಠ, ಸೇರಿದಂತೆ ಇತರರಿದ್ದರು.

    ವಿಜಯವಾಣಿ ವರದಿ ಪ್ರಸ್ತಾಪ

    ರೈತ ಮುಖಂಡ ಶರಣಪ್ಪ ಧರ್ವಯತ, ಆನಂದ ಕೊಟಗಿ ಮಾತನಾಡಿ, ಕಳೆದ ವಾರ ವಿಜಯವಾಣಿ ಪತ್ರಿಕೆಯಲ್ಲಿ ‘ಭಾಳಷ್ಟು ಕಡ್ಲಿ ಬಂದೇತಿ… ರೇಟು ಕಳಕೊಂಡೇತಿ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿ, ಖರೀದಿ ಕೇಂದ್ರದ ಅನಿವಾರ್ಯತೆಯನ್ನು ಅನಾವರಣಗೊಳಿಸಿದೆ. ಆದರೂ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. 15 ದಿನಗಳಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲದಿದ್ದರೆ ನರೇಗಲ್ಲ ಬಂದ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts